ಕಲಬುರಗಿ: ಸರ್ಕಾರಿ ಸೇವೆಯಲ್ಲಿ, ಭಾರತ ಸರ್ಕಾರ ( ಗವರ್ನಮೆಂಟ್ ಆಫ್ ಇಂಡಿಯಾ) ಸೇವೆ ಸೇರಿದಂತೆ ಆ ಸಂಘಟನೆ- ಈ ಸಂಘಟನೆ ಎಂಬುದಾಗಿ ವಾಹನಗಳ ಮೇಲೆ ನಾಮಫಲಕ ಅಳವಡಿಸಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಿರುದ್ದ ಸಂಚಾರಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಇಲ್ಲಿನ ಇಎಸ್ಐ ಆಸ್ಪತ್ರೆಯಲ್ಲಿ ಸೇವೆ ಮಾಡುವರು ಜತೆಗೆ ಒಪ್ಪಂದ ಮೇಲೆ ಪಡೆಯಲಾದ ವಾಹನ ಮೇಲೆ , ಒಪ್ಪಂದ ಮುಗಿದು ಹಲವು ವರ್ಷಗಳೂ ಕಳೆದರೂ ಹಾಗೆ ನಾಮಫಲಕ ಹಾಗೆ ಮುಂದುವರೆಸಿಕೊಂಡು ಬರುತ್ತಿರುವುದನ್ನು ಸೇರಿದಂತೆ ಇತರ ಅಕ್ರಮಗಳನ್ನು ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಲಾಗುತ್ತಿದೆ.
ಸುಮ್ಮನೇ ಕಾರುಗಳ ಮೇಲೆ ಇಲ್ಲದ ಸಲ್ಲದ್ದನ್ಬು ಬರೆದು ಅದರಲ್ಲೂ ಸರ್ಕಾರಿ ಸೇವೆಯಲ್ಲಿ ಎಂದು ಬೋಗಸ್ ಬರೆದು ವಂಚಿಸುತ್ತಿರುವುದು ಹಾಗೂ ಸಾಮಾಜಿಕವಾಗಿ ತಪ್ಪು ಸಂದೇಶ ಬೀರುತ್ತಿರುವುದನ್ನು ಬೇರು ಸಮೇತ ಕಿತ್ತು ಹಾಕಲು ಸಂಚಾರಿ ಪೊಲೀಸರು ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರ ವಾಗಿದೆ.
ಸಂಚಾರಿ ವಿಭಾಗದ ಇನ್ಸ್ ಪೆಕ್ಟರ್ ಶಾಂತಿನಾಥ ಅವರ ನೇತೃತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆದಿದ್ದು, ಹಲವಾರು ವಾಹನಗಳ ಮೇಲೆ ಅನಧಿಕೃತವಾಗಿವಾಗಿ ಬರೆಯಲಾಗಿದ್ದ ನಾಮಫಲಕ ತೆರವುಗೊಳಿಸಲಾಗುತ್ತಿದೆ.
ದಂಡ ಹಾಕುವ ಹಾಗೂ ವಾಹನ ಜಪ್ತಿಯನ್ನು ಮಾಡಲಾಗುತ್ತಿದೆ. ಒಟ್ಟಾರೆ ವಾಹನಗಳ ಮೇಲೆ ಅನಧಿಕೃತವಾಗಿ ಬರೆಯುವ ಚಾಳಿ ವ್ಯಾಪಕವಾಗಿದೆ. ಕೆಲವರು ಸರಳವಾಗಿ ಪಾರ್ಕಿಂಗ್ ದೊರಕಲು ಹಾಗೂ ರಸ್ತೆ ಪೋಸು ತೋರಿಸಲು ಹೆಸರು ಹಾಕಿ ದರ್ಪ ಮೆರೆಯುತ್ತಿರುವುದಕ್ಕೆ ಇತಿಶ್ರೀ ಹಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.