ಬೆಳ್ತಂಗಡಿ: ಕಾರ್ಯಕ್ರಮಗಳ ಪ್ರಚಾರದ ಅಮಲಿನಲ್ಲಿ ಯುವಕರನ್ನು ಬಳಸಿಕೊಂಡು ರಾತ್ರಿ ಹಗಲೆನ್ನದೆ ಅಳವಡಿಸುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್‌ಗಳಿಂದಾಗಿ ಅತ್ತ ಅಮಾಯಕರ ಜೀವ ತೆರುವ ಸಂದರ್ಭಗಳು ಎದುರಾಗುತ್ತಿದೆ. ವಿದ್ಯುತ್ ಕಂಬ, ಪರಿವರ್ತಕಗಳ ಅಪಾಯದ ಮಟ್ಟವನ್ನು ತಿಳಿಯದೆ ಕಟೌಟ್‌ಗಳು ಎಲ್ಲೆಂದರಲ್ಲಿ ಅಳವಡಿಸುತ್ತಿರುವುದು ಕಂಡು ಬಂದರೂ ಸಂಬಂಧಪಟ್ಟ ಇಲಾಖೆಗಳು ಮೌನ ವಹಿಸುತ್ತಿರುವ ಪರಿಣಾಮ ಅವಘಡಗಳು ಸಂಭವಿಸುತ್ತಿವೆ.
ನಿಯಮದಂತೆ ಪೇಟೆ, ಪಟ್ಟಣಗಳ ವ್ಯಾಪ್ತಿಯಲ್ಲಿ ರಸ್ತೆ, ಫುಟ್‌ಪಾತ್ ಸಹಿತ ಜನಸಂಚಾರಕ್ಕೆ ಅಡ್ಡಿಯಾಗುವಂತ ಸ್ಥಳದಲ್ಲಿ ಫ್ಲೆಕ್ಸ್ ಕಟ್ಟುವಂತಿಲ್ಲ. ಮೆಸ್ಕಾಂ ಇಲಾಖೆ ನಿಯಮದಂತೆ ವಿದ್ಯುತ್ ಪರಿವರ್ತಕ, ವಿದ್ಯುತ್ ಕಂಬಗಳಿಗೆ ಯಾವುದೇ ನಿಯಮ ಬಾಹಿರ ಬಂಟಿಂಗ್ಸ್ ಕಟ್ಟುವಂತಿಲ್ಲ. ಕೇವಲ ಟಿ.ವಿ.ಕೇಬಲ್ ಗಳಿಗಷ್ಟೆ ಅವಕಾಶ ನೀಡಲಾಗುತ್ತದೆ. ಆದರೆ ಇಲ್ಲಿ ನಿಯಮ ಗಾಳಿಗೆ ತೂರಿ ಅನಧಿಕೃತ ಬ್ಯಾನರ್‌ಗಳು ರಾರಾಜಿಸುತ್ತಿವೆ.
ಪ.ಪಂ. ವ್ಯಾಪ್ತಿಯಲ್ಲಿ ಈಗಾಗಲೇ ಸಂತೆಕಟ್ಟೆ, ಅಯ್ಯಪ್ಪಗುಡಿ, ಬಸ್ ನಿಲ್ದಾಣದ ಆಯ್ದ ಸ್ಥಳದಲ್ಲಿ ಮಾತ್ರ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಹಾಕಲು ಅನುಮತಿ ನೀಡಲಾಗುತ್ತದೆ. ಆದರೆ ರಸ್ತೆಯುದ್ದಕ್ಕೂ ಸಿಕ್ಕ ಸಿಕ್ಕಲ್ಲಿ ಅಳವಡಿಸುತ್ತಿರುವುದು ಮಾಮೂಲಿಯಾಗಿದೆ. ಮತ್ತೂಂದೆಡೆ ವಿದ್ಯುತ್ ಕಂಬಗಳಲ್ಲಿ ಅಳವಡಿಸಿದ ಬ್ಯಾನರ್ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದಿದ್ದುದರಿಂದ ಇಂತಹ ಪ್ರಕರಣ ಹೆಚ್ಚಾಗುತ್ತಿದೆ.
ಈ ನಡುವೆ ಅನುಮತಿ ಇಲ್ಲದೆ ಇರುವ ಫ್ಲೆಕ್ಸ್ ತೆರವುಗೊಳಿಸುವಲ್ಲಿ ಸ್ಥಳೀಯಾಡಳಿತಗಳು ಆಸಕ್ತಿ ವಹಿಸದ ಪರಿಣಾಮ ದಿನೇ ದಿನೇ ಅವುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೂಂದೆಡೆ ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್ಸ್ ಅಳವಡಿಸಬಾರದೆಂಬ ನಿಯಮಿವಿದ್ದರು ನಿಯಮವನ್ನು ಗಾಳಿಗೆ ತೂರಲಾಗುತ್ತಿದೆ. ಈ ವಿಚಾರ ಪ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿದ್ದರೂ ಯಾವುದೇ ಮಹತ್ವದ ಕಾರ್ಯ ಆಗುತ್ತಿಲ್ಲ.
ಪ.ಪಂ. ನಿಯಮದಂತೆ ಫ್ಲೆಕ್ಸ್ ಅಳವಡಿಸಿದ ಅನಂತರ 7 ದಿವಸಗಳ ಕಾಲವಕಾಶವಿದೆ. ಜತೆಗೆ ನಿರ್ದಿಷ್ಟವಾಗಿ ಸೂಚಿಸಿದ ಸ್ಥಳದಲ್ಲೆ ಬ್ಯಾನರ್ ಅಳವಡಿಸಬೇಕೆಂದಿದೆ. ಇದನ್ನು ನೋಡುವ ಜವಾಬ್ದಾರಿ ಪ.ಪಂ.ನದ್ದಾಗಿದೆ. ಸಣ್ಣಪುಟ್ಟ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಇದ್ದರೆ ದಂಡ ವಿಧಿಸುವ ಅಧಿಕಾರಿಗಳು ಇಂತಹಾ ವ್ಯವಸ್ಥೆಗೆ ಕಾನೂನು ಕ್ರಮ ಇಲ್ಲವೇ ಎಂಬುದು ಪ್ರಶ್ನೆಯಾಗಿದೆ. ಇಲ್ಲಿ ಕೇವಲ ಪ.ಪಂ. ಮೆಸ್ಕಾಂ ಹೊಣೆಯಾಗುವುದಿಲ್ಲ, ನಮ್ಮದೇ ನಿಯಮ ನಾವೇ ಗಾಳಿಗೆ ತೂರಿದರೆ ಬೇಲಿಯೇ ಎದ್ದು ಹೊಲ ಮೇದಂತೆ. ಹಾಗಾಗಿ ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಬೇಕಾಗಿದೆ.
ಬ್ಯಾನರ್ ತೆರವಿಗೆ ಕ್ರಮ: ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಯ್ಯಪ್ಪಗುಡಿ, ಸಂತೆಕಟ್ಟೆ, ಬಸ್ ನಿಲ್ದಾಣಗಳಲ್ಲಿ ಫ್ಲೆಕ್ಸ್ ಅಳವಡಿಸಲು ಅವಕಾಶವಿದೆ. ಈಗಾಗಲೆ ಅನಧಿಕೃತ ಬ್ಯಾನರ್ ತೆರವಿಗೆ ಕ್ರಮವಹಿಸಲಾಗಿದೆ. ಮುಂದಿನ ಸಾಮಾನ್ಯ ಸಭೆಯಲ್ಲಿ ನಿರ್ದಿಷ್ಟ ಸ್ಥಳವನ್ನು ಗುರುತಿಸಿ ನಿರ್ಣಯ ಕೈಗೊಳ್ಳಲಾಗುವುದು. –
ರಾಜೇಶ್ ಕೆ., ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ, ಬೆಳ್ತಂಗಡಿ
ಕಾನೂನು ಕ್ರಮ ಕೈಗೊಳ್ಳಲಾಗುವುದು: ನಿಯಮಬಾಹಿರವಾಗಿ ವಿದ್ಯುತ್ ಕಂಬಗಳಿಗೆ ಫ್ಲೆಕ್ಸ್ ಅಳವಡಿಸುತ್ತಿದ್ದಾರೆ. ಅನೇಕ ಬಾರಿ ಕ್ರಮ ಕೈಗೊಳ್ಳಲಾಗಿದ್ದರೂ ಅದೇ ಸ್ಥಿತಿ ಇದೆ. ಟಿ.ವಿ.ಕೇಬಲ್ ಹೊರತುಪಡಿಸಿ ಬೇರೆ ಯಾವುದನ್ನು ವಿದ್ಯುತ್ ಕಂಬಗಳಿಗೆ ಅಳವಡಿಸಲು ಅವಕಾವಿಲ್ಲ. ಕಾನೂನು ಕ್ರಮ ಕೈಗೊಳ್ಳಲಾಗುವುದು. –
ಶಿವಶಂಕರ್, ಎಇಇ, ಮೆಸ್ಕಾಂ ಇಲಾಖೆ, ಬೆಳ್ತಂಗಡಿ
ತಡೆಬೇಲಿ ಹಾಕಬೇಕು: ಮೆಸ್ಕಾಂ ವಿದ್ಯುತ್ ಪರಿವರ್ತಕ ಇರುವಲ್ಲಿ ತಡೆಬೇಲಿ ಹಾಕಬೇಕು. ಆದರೆ ಇಲ್ಲಿ ಪಾಲಿಸದೆ ಇರುವುದರಿಂದ ಈ ರೀತಿಯ ದುರ್ಘಟನೆ ಸಂಭವಿಸುತ್ತಿದೆ. ಅನಧಿಕೃತ ಬ್ಯಾನರ್ ಅಳವಡಿಸಿದರೆ ಶಿಸ್ತು ಕ್ರಮ ಅಳವಡಿಸಬೇಕು. ಇದಕ್ಕೆ ಮೆಸ್ಕಾಂ ಇಲಾಖೆ ಹಾಗೂ ನ.ಪಂ. ನೇರ ಹೊಣೆಯಾಗಿದೆ. –
ಜಗದೀಶ್ , ಸದಸ್ಯ ನ.ಪಂ. ಬೆಳ್ತಂಗಡಿ
-ಚೈತ್ರೇಶ್ ಇಳಂತಿಲ