Advertisement
ಈ ಮೂಲಕ ಸ್ವತಃ ಸರಕಾರಿ ಇಲಾಖೆಯೇ ನಿಯಮ ಪಾಲನೆ ಮಾಡದೆ ನದಿ ಪರಂಬೋಕು ಪ್ರದೇಶದಲ್ಲಿ ಕಟ್ಟಡ ನಿರ್ಮಿಸಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಈಡಾಗಿದೆ.
ನಗರಕ್ಕೆ ಹೊಂದಿಕೊಂಡೇ ಹರಿಯುವ ಪಯಸ್ವಿನಿ ನದಿ ಇಕ್ಕೆಲಗಳಲ್ಲಿ ನದಿ ಪರಂಬೋಕು ಪ್ರದೇಶ ಒತ್ತುವರಿ ಮಾಡಿ ಅನಧಿಕೃತವಾಗಿ ಕಟ್ಟಡ ಕಟ್ಟಲಾಗಿದೆ ಎಂಬ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿದ್ದವು. ಈ ಬಗ್ಗೆ ತಾ.ಪಂ., ನ.ಪಂ. ಸಭೆಗಳಲ್ಲಿ ಸುದೀರ್ಘ ಚರ್ಚೆ ನಡೆದಿತ್ತು. ಶಾಸಕ ಅಂಗಾರ ಮುತುವರ್ಜಿವಹಿಸಿ ನ.ಪಂ., ಕಂದಾಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಗಳಿಗೆ ಜಂಟಿ ಸರ್ವೆ ನಡೆಸುವಂತೆ ಸೂಚಿಸಿದ್ದರು. ಆದರೆ ರಾಜ್ಯ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಒಳಪಟ್ಟ ಕಾರಣ ಅವರನ್ನೊಳಗೊಂಡು ಸರ್ವೆ ನಡೆಸುವಂತೆ ಸೂಚಿಸಲಾಯಿತು. ಹಲವು ತಿಂಗಳ ಬಳಿಕ ಕಂದಾಯ ಹಾಗೂ ನ.ಪಂ. ಇಲಾಖೆ ಜಂಟಿಯಾಗಿ ಪ್ರಾಥಮಿಕ ಸರ್ವೆ ನಡೆಸಿ ನೋಟಿಸ್ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಜತೆಗೂಡಿ ಮುಂದಿನ ಹಂತದ ಸರ್ವೆ ನಡೆಸಲು ಉದ್ದೇಶಿಸಲಾಗಿದೆ. ಎರಡು ಕಟ್ಟಡಗಳಿಗೆ ನೋಟಿಸ್
ಮೊದಲ ಹಂತದ ಸರ್ವೆಯಲ್ಲಿ ಎರಡು ಕಟ್ಟಡಗಳು ಪರವಾನಿಗೆ ಪಡೆಯದೆ ಕಟ್ಟಡ ಕಟ್ಟಿದೆ ಎಂದು ನ.ಪಂ.ನೋಟಿಸ್ ಕಳಿಸಿದೆ. ಇದರಲ್ಲಿ ಓಡಬಾಯಿ ಬಳಿ ಇರುವ ಅಗ್ನಿಶಾಮಕ ದಳದ ಠಾಣೆಯೂ ಸೇರಿದೆ. ಕಟ್ಟಡ ಕಟ್ಟಲು ಪರವಾನಿಗೆ ಪಡೆದಿರುವ ಬಗ್ಗೆ ಸೂಕ್ತ ದಾಖಲಾತಿ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ನ.ಪಂ. ಪ್ರಕಾರ ಈ ಕಟ್ಟಡವನ್ನು ಪರವಾನಿಗೆ ರಹಿತವಾಗಿ ಕಟ್ಟಿದ್ದು, ಅನಧಿಕೃತ ಕಟ್ಟಡ ಎಂದು ಗುರುತಿಸಿದೆ. ಈಗಾಗಿ ಸ್ವತಃ ಸರಕಾರಿ ಕಟ್ಟಡವೊಂದು ಅನಧಿಕೃತ ಪಟ್ಟಿಯ ಭೀತಿಯಲ್ಲಿ ಸಿಲುಕಿದೆ.
Related Articles
2009ರಲ್ಲಿ ಸುಳ್ಯಕ್ಕೆ ಅಗ್ನಿಶಾಮಕ ಠಾಣೆ ಮಂಜೂರಾಗಿತ್ತು. ಸಣ್ಣ ಶೆಡ್‌ನಲ್ಲಿದ್ದ ಈ ಠಾಣೆಗೆ ನಾಲ್ಕು ವರ್ಷಗಳ ಹಿಂದೆ ಓಡಬಾೖ ಬಳಿ ತೂಗುಸೇತುವೆ ಸನಿಹ ಪಯಸ್ವಿನಿ ನದಿಗೆ ಹೊಂದಿಕೊಂಡಂತೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಎರಡು ಅಂತಸ್ತಿನ ಈ ಕಟ್ಟಡ ತಾಲೂಕಿನ ಕಾರ್ಯಕ್ಷೇತ್ರ ವ್ಯಾಪ್ತಿ ಹೊಂದಿದೆ.
Advertisement
45 ಮೀ. ದೂರನದಿ ಪರಂಬೋಕು ಪ್ರದೇಶದಿಂದ 45 ಮೀ. ಬಿಟ್ಟು ಕಟ್ಟಡ ಕಟ್ಟಬೇಕು ಎನ್ನುವುದು ನಿಯಮ ಎನ್ನುತ್ತಾರೆ ನ.ಪಂ. ಅಧಿಕಾರಿಗಳು. ಕಟ್ಟಡ ಕಟ್ಟುವ ಮೊದಲು ಸ್ಥಳೀಯಾಡಳಿತ ಅದಕ್ಕೆ ಒಪ್ಪಿಗೆ ನೀಡಿರಬೇಕು. ಇಲ್ಲಿ ಅಗ್ನಿಶಾಮಕ ಕಚೇರಿಯ ಕಟ್ಟಡ ಜಾಗದ ಬಗ್ಗೆ ತಕರಾರು ಇರದಿದ್ದರೂ ಒಪ್ಪಿಗೆ ಪಡೆಯದೆ ಕಟ್ಟಿದ್ದಾರೆ. ಪರವಾನಿಗೆ ಅರ್ಜಿ ಸಲ್ಲಿಸಿದ್ದರೆ, ಪರಂಬೋಕು ಪ್ರದೇಶದಲ್ಲಿ ನಿಯಮಾನುಸಾರ ಕಟ್ಟಡ ಕಟ್ಟಲು ಅನುಮತಿ ನೀಡಬಹುದಿತ್ತು. ಆದರೆ ಅದನ್ನು ಪಾಲಿಸಿಲ್ಲ ಎನ್ನುವುದು ನ.ಪಂ. ಅಧಿಕಾರಿಗಳ ವಾದ. ಪೈಚಾರ್‌ನಿಂದ ಕಾಂತಮಂಗಲ ತನಕವು ನದಿ ಇಕ್ಕೆಲಗಳಲ್ಲಿ ಹಲವು ಖಾಸಗಿ ಕಟ್ಟಡಗಳಿವೆ. ಹಲವು ವರ್ಷಗಳ ಹಿಂದೆ ಅಳತೆ ಮಾಡಿ ಕಟ್ಟಿರುವ ಕಟ್ಟಡಗಳಿವೆ. ಭೂ ಸವೆತ ಪರಿಣಾಮ ನದಿ ವ್ಯಾಪ್ತಿ ಅಗಲಗೊಂಡು ಈಗಿನ ಅಳತೆಗೆ ತಾಳೆ ಬಾರದಿರಬಹುದು. ಹಿಂದಿನ ಅಳತೆ ಆಧಾರವನ್ನೇ ಪರಿಗಣಿಸಿದರೆ ಪರಂಬೋಕು ಪ್ರದೇಶದಿಂದ ಹೆಚ್ಚಿನ ಕಟ್ಟಡಗಳು ಹೊರಗಿವೆ ಎನ್ನುವುದು ಹಲ ವರ ವಾದ. ಹೀಗಾಗಿ ಎರಡನೇ ಹಂತದ ಸರ್ವೆ ಕಾರ್ಯದಲ್ಲಿ ಇನ್ನಷ್ಟು ಗುರುತು ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ. ಪರವಾನಿಗೆ ಪಡೆದಿಲ್ಲ
ನ.ಪಂ. ವ್ಯಾಪ್ತಿಯೊಳಗೆ ಖಾಸಗಿ ಅಥವಾ ಸರಕಾರಿ ಕಟ್ಟಡ ಕಟ್ಟುವ ಮೊದಲು ನ.ಪಂ.ನಿಂದ ಪರವಾನಿಗೆ ಪಡೆದುಕೊಳ್ಳುವುದು ನಿಯಮ. ಪಡೆಯದೆ ಕಟ್ಟಿದ್ದರೆ ಅದು ಅನಧಿಕೃತ. ಈ ಹಿಂದೆ ಅಗ್ನಿಶಾಮಕ ದಳ ಠಾಣೆಗೆ ನ.ಪಂ. ವ್ಯಾಪ್ತಿಯ ಓಡಬಾೖ ಬಳಿ ಸರಕಾರಿ ಜಾಗ ಕಾದಿರಿಸಿ ಸಾಮಾನ್ಯ ಸಭೆ ನಿರ್ಣಯಿಸಿ ಆ ಇಲಾಖೆಗೆ ನೀಡಿತ್ತು. ಕಟ್ಟಡ ಕಟ್ಟುವ ಸಂದರ್ಭ ಪರವಾನಿಗೆ ಪಡೆಯಬೇಕಿತ್ತು. ಆದರೆ ಅವರು ಪಡೆದಿಲ್ಲ. ಹಾಗಾಗಿ ನೋಟಿಸ್ ನೀಡಲಾಗಿದೆ.
– ಮತ್ತಡಿ, ಮುಖ್ಯಾಧಿಕಾರಿ, ನ.ಪಂ., ಸುಳ್ಯ ಸರ್ವೆಗೆ ಸೂಚನೆ
ಅಗ್ನಿಶಾಮಕ ಕಟ್ಟಡ ಕಾರ್ಯಾರಂಭಕ್ಕೆ ಮೊದಲು ನ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ಸ್ಥಳ ನೀಡಲಾಗಿತ್ತು. ಹಾಗಾಗಿ ನ.ಪಂ. ಇದನ್ನು ಅನಧಿಕೃತ ಕಟ್ಟಡ ಎಂದು ಗುರುತಿಸಲು ಸಾಧ್ಯವಿಲ್ಲ. ಮರು ಸರ್ವೆಗೆ ಸೂಚನೆ ನೀಡಲಾಗಿದೆ.
– ಎಸ್. ಅಂಗಾರ, ಶಾಸಕ, ಸುಳ್ಯ ನೋಟಿಸ್ ಬಂದಿದೆ
ಕಟ್ಟಡ ಕಟ್ಟಿದ್ದಕ್ಕೆ ಪರವಾನಿಗೆ ಪಡೆದಿರುವ ಬಗ್ಗೆ ದಾಖಲೆ ಕೇಳಿ ನ.ಪಂ.ನಿಂದ ನೋಟಿಸ್ ಬಂದಿದೆ. ಈ ನೋಟಿಸ್ ಅನ್ನು ನಾವು ವಿಭಾಗೀಯ ಕಚೇರಿಗೆ ಕಳಿಸಿದ್ದು, ಅಲ್ಲಿಂದ ನಿರ್ದೇಶಕರ ಕಚೇರಿಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಉತ್ತರ ನೀಡುತ್ತಾರೆ.
– ವಿಶ್ವನಾಥ ಪೂಜಾರಿ, ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ, ಸುಳ್ಯ -ಕಿರಣ್ ಪ್ರಸಾದ್ ಕುಂಡಡ್ಕ