Advertisement

ರಾಮನಗರ ಕ್ಷೇತ್ರಕ್ಕೆ ಘೋಷಣೆಯಾಗದ ಬಿಜೆಪಿ ಅಭ್ಯರ್ಥಿ

02:21 PM Mar 08, 2023 | Team Udayavani |

ರಾಮನಗರ: ಜಿಲ್ಲೆಯಲ್ಲಿ ಚುನಾವಣಾ ರಣಕಣ ರಂಗೇರುತ್ತಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮೂಲಕ ಅಖಾಡಕ್ಕಿಳಿದಿದ್ದು, ಬಿಜೆಪಿ ಮಾತ್ರ ಮುಗುಮ್ಮಾಗಿದ್ದು ಅಭ್ಯರ್ಥಿ ಘೋಷಿಸದ ಕಾರಣ ಆಕಾಂಕ್ಷಿತರ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

Advertisement

ಈ ನಡುವೆ ಬಣ ರಾಜಕೀಯದ ಬಿಸಿಯಿಂದ ಸರ್ಕಾರದ ಕೆಲವು ನಿರ್ಧಾರಗಳನ್ನು ಪ್ರಶ್ನಿಸುವ ಹಂತ ತಲುಪಿದ ನಿಷ್ಠಾವಂತ ಕಾರ್ಯಕರ್ತರು, ಇತ್ತೀಚಿಗೆ ಘೋಷಿಸಿದ್ದ ಶ್ರೀರಾಮದೇವರ ಬೆಟ್ಟದ ಅಭಿವೃದ್ಧಿ ಸಮಿತಿಯನ್ನು ರದ್ದುಪಡಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ಆರಂಭಿಕ ಗೆಲುವು ಎನ್ನುವಂತೆ ಬೀಗುತ್ತಿರುವ ಕಾರ್ಯಕರ್ತರು ಟಿಕೆಟ್‌ ಫೈಟ್‌ನಲ್ಲಿ ಪೈಪೋಟಿಗೆ ಬಿದ್ದಂತೆ ಕಾಣಿಸುತ್ತಿದೆ. ಇನ್ನು ದಿನಕ್ಕೊಂದು ಹೆಸರು ಬಿಜೆಪಿ ಅಭ್ಯರ್ಥಿಯಾಗಿ ಹೊರಬರುತ್ತಿದೆ. ಮೊದಲಿಗೆ ಕರ್ನಾಟಕ ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಗೌತಮ್‌ ಗೌಡ ಹೆಸರು ಹರಿದಾಡುತ್ತಿದೆಯಾದರೂ, ಯಾವುದೇ ವಿಚಾರದಲ್ಲಿ ಮುಂಚೂಣಿಯಲ್ಲಿದ್ದರೆ, ಅದನ್ನ ಹಣಿಯುವ ಸಲುವಾಗಿ ಸಿಪಿವೈ ಅವರ ಕಟ್ಟಾ ಬೆಂಬಲಿಗ ಗೋವಿಂದರಾಜು ಮುಂಚೂಣಿಗೆ ಬಂದರು ನಂತರ ಬೆಂಗಳೂರಿನ ವೈದ್ಯೆ ಸದ್ದಿಲ್ಲದೆ ರಾಜ್ಯ ನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಆದರೂ, ಜಿಲ್ಲೆಯ ಉಸ್ತುವಾರಿ ನೋಡಿಕೊಳ್ತಾರೆ ಎನ್ನುವ ಮೂಲಕ ಮಹಿಳಾ ಪ್ರಾಶಸ್ತ್ಯಕ್ಕಾಗಿ ಹೋರಾಟದ ಸೂಚನೆ ನೀಡಿದರು.

ಇನ್ನು ತಿಗಳ ಸಮುದಾಯವೇ ಬೆನ್ನಿಗೆ ನಿಲ್ಲುವ ಮೂಲಕ ತಮ್ಮ ಸಮುದಾಯಕ್ಕೆ ಆದ್ಯತೆ ನೀಡಿ ರಾಜಕೀಯವಾಗಿ ಸ್ಥಾನಮಾನ ಒದಗಿಸಿಕೊಡಿ ಅದಕ್ಕಾಗಿ ಎಂಎಲ್‌ಎ ಟಿಕೆಟ್‌ ಬೇಕೇ ಬೇಕು ಎಂಬ ಹಕ್ಕೊತ್ತಾಯ ಮಂಡಿಸಿದ್ದು, ಡಿ. ನರೇಂದ್ರ ಪಾಲಿಗೆ ಸಿಹಿ ಜೇನಾಗಿದೆ. ಮತ್ತೂಂದೆಡೆ ಗೇಟರ್‌ ಬೆಂಗಳೂರು ಬಿಡದಿ ಸ್ಮಾರ್ಟ್‌ ಸಿಟಿ ಆಧ್ಯಕ್ಷ ವರದರಾಜ್‌ ಗೌಡ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ ಪ್ರಭಾವಿಯಾಗಿದ್ದು ಅವರೇ ನಮ್ಮ ಎಂಎಲ್‌ಎ ಎಂಬ ಕರಪತ್ರಗಳ ಮೂಲಕ ಘೋಷಣೆ ಆರಂಭವಾಗಿದೆ. ಇದರ ಜೊತೆಗೆ ತಾಲೂಕು ಮಾಜಿ ಅಧ್ಯಕ್ಷ ಪ್ರವೀಣ್‌ ಗೌಡ , ಪ್ರಾಧಿಕಾರದ ಅಧ್ಯಕ್ಷ ಶಿವಮಾದು ಹೆಸರುಗಳು ಚಾಲ್ತಿಯಲ್ಲಿವೆ.

ತೆರೆಮರೆಯಲ್ಲಿದ್ದ ಟಿಕೆಟ್‌ ಪೈಪೋಟಿ ಬೀದಿಗೆ: ಸರ್ಕಾರದ ಮಟ್ಟದಲ್ಲಿ ಘೋಷಣೆ ಮಾಡಿದ್ದ ಶ್ರೀರಾಮದೇವರ ಬೆಟ್ಟದ ಅಭಿವೃದ್ಧಿ ಸಮಿತಿಯನ್ನು ರದ್ದು ಮಾಡುವಂತೆ ಪತ್ರ ಬರೆದಿರುವ ಜಿಲ್ಲಾ ಉಸ್ತುವಾರಿ ಸಚಿವರ ತೀರ್ಮಾನ ಶಮನಕ್ಕೆ ಕಾರಣ ವಾಗುತ್ತೆ ಎನ್ನಲಾಗುತ್ತಿತ್ತು. ಆದರೆ, ಹೊತ್ತಿ ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಂತೆ ಆಗಿದ್ದು, ತೆರೆಮರೆಯಲ್ಲಿದ್ದ ಟಿಕೆಟ್‌ ಪೈಪೋಟಿ ಬೀದಿಗೆ ಬಂದಂತಾಗಿದೆ. ಇನ್ನು ಜನಸಂಕಲ್ಪ ಯಾತ್ರೆ ವೇಳೆ ಜಿಲ್ಲೆಯಲ್ಲಿ ಪ್ರಭಾವಿಗಳಾದ ಎಚ್‌ಡಿಕೆ ಮತ್ತು ಡಿಕೆ ಬ್ರದರ್ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕರು, ಜಿಲ್ಲೆಯಲ್ಲಿ ಒಂದೇ ಒಂದು ಶಾಸಕರನ್ನ ನೀಡಿ ಅಭಿವೃದ್ಧಿ ಗುದ್ದಾಡಿ ತರುತ್ತೇವೆ ಎನ್ನುವ ಮೂಲ ಒಂದು ಸ್ಥಾನವನ್ನಾದರೂ ಗೆಲ್ಲಿಸಿ ಎಂಬ ಮನವಿ ಸಲ್ಲಿಸಿದ್ದು ವಿಶೇಷವಾಗಿತ್ತು.

Advertisement

ಹಲವು ಅನುಮಾನಗಳಿಗೆ ಇಂಬು: ಇನ್ನುಳಿದಂತೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಕಟ್ಟುವ ಕಾಯಕದ ಕಲ್ಪನೆ ಹೊತ್ತಿದ್ದ ಸೈನಿಕ ಅದ್ಯಾಕೋ ಸ್ವಕ್ಷೇತ್ರಕ್ಕೆ ಮೀಸಲಾದಂತೆ ಕಾಣುತ್ತಿದ್ದು, ಜನಸಂಕಲ್ಪ ಯಾತ್ರೆಗೆ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಉಸ್ತುವಾರಿ ಮಂತ್ರಿ ಡಾ, ಅಶ್ವತ್ಥನಾರಾಯಣ, ಕಂದಾಯ ಮಂತ್ರಿ ಆರ್‌.ಅಶೋಕ್‌ ಸೇರಿ ವಿವಿಧ ಮಂತ್ರಿಗಳು ಆಗಮಿಸಿ ದರು ಕ್ಯಾರೇ ಎನ್ನಲಿಲ್ಲ. ಅಲ್ಲದೆ, ಸ್ವಕ್ಷೇತ್ರ ಚನ್ನಪಟ್ಟಣ ಬಿಟ್ಟು ಹೊರಗೆ ಬರದಿರುವುದು ಹಲವು ಅನುಮಾನಗಳಿಗೆ ಇಂಬು ನೀಡುವಂತೆ ಮಾಡಿದೆ.

ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಶಂಕುಸ್ಥಾಪನೆ: ಇದೇ ತಿಂಗಳ 27ಕ್ಕೆ ಬಹುತೇಕ ಚುನಾವಣೆ ದಿನಾಂಕ ಘೋಷಣೆ ಮತ್ತು ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದ್ದು, ಈಗಾಗಲೇ ಘೋಷಿಸಿರುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿವಿಗೆ ಶಂಕುಸ್ಥಾಪನೆ ಆಗಬೇಕಿದೆ. ಇದು ಮತ್ತೂಮ್ಮೆ ನೆನಗುದಿಗೆ ಬೀಳದಿರಲಿ. ಈಗಾಗಲೇ ಆರೋಗ್ಯ ವಿವಿ ಸಿಂಡಿಕೇಟ್‌ನಿಂದಲೇ ಹಣ ಬಿಡುಗಡೆ ತಯಾರಿಯಾಗಿದ್ದು, ಕಾಮಗಾರಿ ಆರಂಭ ವಾದರೆ ಸರಿ ಇಲ್ಲವಾದ್ರೆ ಮತ್ತೆ ನೆನೆಗುದಿಗೆ ಬೀಳುವ ಸಾಧ್ಯತೆಯಿದೆ ಎನ್ನುವುದು ಸ್ಥಳೀಯರ ಆತಂಕವಾಗಿದೆ.

ಸೈನಿಕನ ಕಮಲ ಟಿಕೆಟ್‌ಗೆ ಅಡ್ಡಿಯಾಗ್ತಾರಾ ಪ್ರಭಾವಿ ನಾಯಕ?: ಸೈನಿಕನ ಟಿಕೆಟ್‌ಗೆ ಕೇಂದ್ರದಲ್ಲಿನ ರಾಜ್ಯದ ಪ್ರಭಾವಿ ಸ್ಥಾನದಲ್ಲಿರುವ ಮುಖಂಡರು ಅಡ್ಡಿಯಾಗಿದ್ದಾರೆ ಎನ್ನುವ ಊಹಾಪೂಹಗಳು ಹರಿದಾಡುತ್ತಿದ್ದು, ಪ್ರಭಾವಿ ನಾಯಕನ ಸೇಡಿಗೆ ಆಧುನಿಕ ಭಗೀರಥ ಎಂದೇ ಕರೆಸಿಕೊಳ್ಳುವ ಸಿಪಿವೈಗೆ ಬಿಜೆಪಿ ಟಿಕೆಟ್‌ ಕೈ ತಪ್ಪಿದರೆ ಎನ್ನುವ ಶಂಕೆ ಹರಿದಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಕಲಬುರಗಿಯಲ್ಲಿ ಬಿಎಸ್‌ವೈ ಹಾಲಿ ಶಾಸಕರಿಗೆ ಟಿಕೆಟ್‌ ಕೊಡುವುದಿಲ್ಲ ಎಂಬ ಹೇಳಿಕೆಯು ಸ್ಪಷ್ಟತೆ ನೀಡುತ್ತಿದೆ. ಅಕಸ್ಮಾತ್‌ ಅಂತಹ ಸ್ಥಿತಿ ಬಂದರೂ, ಎದೆಗುಂದದಿರಲು ಗ್ರೌಂಡ್‌ ಪಾಲಿಟಿಕ್ಸ್‌ಗೆ ಇಳಿದಿದ್ದಾರೆ. ಸಿಪಿವೈ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಬೂತ್‌ ಮಟ್ಟದಲ್ಲಿ ತಮ್ಮ ಅಸ್ಥಿತ್ವ ಗಟ್ಟಿಗೊಳಿಸುವ ಮೂಲಕ ಸ್ವಕ್ಷೇತ್ರದಲ್ಲೇ ಠಿಕಾಣಿ ಊಡಿ ಕಾರ್ಯಕರ್ತರನ್ನ ಹುರುದುಂಬಿಸುವುದು ಮತ್ತು ನೂತನ ಕಾರ್ಯಕರ್ತರ ಸೇರ್ಪಡೆಯ ಉತ್ಸಾಹ ತೋರುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇದೆಲ್ಲದಕ್ಕೂ ಉತ್ತರದ ಸಿಗಬೇಕಾದ್ರೆ ಟಿಕೆಟ್‌ ಘೋಷಣೆ ವರೆಗೂ ಕಾಯಲೇ ಬೇಕಿದೆ.

ಹೈವೋಲ್ಟೇಜ್‌ ಕ್ಷೇತ್ರಗಳಲ್ಲಿ ರಾಮನಗರವೂ ಒಂದು : ರಾಮನಗರ ಕ್ಷೇತ್ರ ಹೈವೋಲ್ಟೇಜ್‌ ಕ್ಷೇತ್ರಗಳಲ್ಲೊಂದು. ಇಲ್ಲಿ ಈ ಭಾಗಿ ಕ್ಷೇತ್ರ ಉಳಿಸಿಕೊಳ್ಳಲು ಮತ್ತು ಮಗನ ರಾಜಕೀಯ ಭವಿಷ್ಯ ನಿರ್ಧಾರಕ್ಕೆ ಎಚ್‌ಡಿಕೆ ಮುಂದಾಗಿದ್ದಾರೆ. ಅದಕ್ಕಾಗಿ ಅನಿವಾರ್ಯ ಹೋರಾಟ ಒಡಂಬಡಿಕೆ ಕೂಡ ಮಾಡಿಕೊಳ್ಳಬೇಕಿದೆ. ಕ್ಷೇತ್ರದಲ್ಲಿ ಎಚ್‌ಡಿಕೆ ಪರ ಒಲವಿದ್ದರೂ, ಮಂಡ್ಯದಲ್ಲಾದ ಯಡವಟ್ಟು ಮತ್ತು ಓವರ್‌ ಕಾನಿ³ಡೆನ್ಸ್‌ ಹೊಡೆತದ ಪರಿಣಾಮ ಎಚ್ಚರಿಕೆಯ ಹೆಜ್ಜೆಯನ್ನಿಡುತ್ತಿದ್ದಾರೆ. ಅದಕ್ಕಾಗಿಯೇ ಹಲವು ಕ್ಷೇತ್ರಗಳ ನಿಕಟ ಸಂಪರ್ಕ ಇದೆ ಎನ್ನುವ ಊಹಾಪೂಹ ಹೆಚ್ಚಾಗಿದೆ. ಅದಕ್ಕೆ ಇಂಬು ನೀಡುವಂತೆ ಹಲವು ಸೂಚನೆಗಳು ಕಣ್ಣಮುಂದಿದ್ದು ರಾಜಕಾರಣದಲ್ಲಿ ಯಾರೂ ಶತೃಗಳಲ್ಲ, ಮಿತ್ರರೂ ಅಲ್ಲ ಎನ್ನುವುದನ್ನ ಪದೇ ಪದೆ ಕ್ಷೇತ್ರದ ಜನತೆಗೆ ಸ್ಪಷ್ಟಪಡಿಸುತ್ತಿದೆ.

-ಎಂ.ಎಚ್‌.ಪ್ರಕಾಶ ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next