Advertisement

ಮೈತ್ರಿ ವಿರುದ್ಧ ಮೂಡದ ಒಮ್ಮತ: ಗದ್ದಲ, ಕೂಗಾಟ

09:38 PM Apr 03, 2019 | Lakshmi GovindaRaju |

ಕುಣಿಗಲ್‌: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರಿಗೆ ಬೆಂಬಲ ಸೂಚಿಸುವ ಸಂಬಂಧ ಕರೆದಿದ್ದ ಜೆಡಿಎಸ್‌ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಶಾಸಕ ಡಾ.ರಂಗನಾಥ್‌ ವಿನಾಕಾರಣ ಜೆಡಿಎಸ್‌ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿದ್ದಾರೆ. ಹೀಗಾಗಿ ಮೈತ್ರಿ ಧರ್ಮ ಏಕೆ ಪಾಲನೇ ಮಾಡಬೇಕೆಂದು ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಇದರಿಂದ ಸಭೆಯಲ್ಲಿ ಕೂಗಾಟ, ಕಿರುಚಾಟ ನಡೆದು ಇಡೀ ಸಭೆ ಗದ್ದಲದಲ್ಲಿ ಮುಳುಗಿದ ಘಟನೆ ಬುಧವಾರ ನಡೆಯಿತು. ತಾಲೂಕು ಜೆಡಿಎಸ್‌ ಘಟಕದ ವತಿಯಿಂದ ಪಟ್ಟಣದ ದಿವ್ಯಾ ಕನ್ವೆನಷನ್‌ ಹಾಲ್‌ನಲ್ಲಿ ಮಾಜಿ ಸಚಿವ ಡಿ.ನಾಗರಾಜಯ್ಯ ಅವರ ನೇತೃತ್ವದಲ್ಲಿ ಕರೆಯಲಾಗಿದ್ದ ಕಾರ್ಯಕರ್ತರ, ಮುಖಂಡರ ಸಭೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡುವ ಸಂಬಂಧ ಯಾವುದೇ ಸ್ಪಷ್ಟವಾದ ನಿರ್ಣಯ ಕೈಗೊಳ್ಳುವಲ್ಲಿ ಸಭೆ ವಿಫಲಗೊಂಡಿತು.

ಭರವಸೆ ನೀಡಿದ್ದಾರೆ ಅಷ್ಟೇ:ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ಮೊದಲಿನಿಂದ ತಾಲೂಕಿನಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ಚುನಾವಣೆಯಲ್ಲಿ ನೇರ ಹಣಾಹಣಿ ಎದುರಾಗುತ್ತದೆ. ಆದರೆ, ಎರಡು ಪಕ್ಷಗಳ ಕಾರ್ಯಕರ್ತರ ಹಾಗೂ ಮುಖಂಡರ ನಡುವೆ ಯಾವುದೇ ಹಗೆತನವಿಲ್ಲ. ಆದರೆ, ಡಾ.ರಂಗನಾಥ್‌ ಅವರು ಶಾಸಕರಾದ ಮೇಲೆ ತಾಲೂಕಿನ ಜೆಡಿಎಸ್‌ ಕಾರ್ಯಕರ್ತರಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಸಚಿವ ಡಿ.ಕೆ.ಶಿವಕುಮಾರ್‌, ಸಂಸದ ಡಿ.ಕೆ.ಸುರೇಶ್‌ ಅವರ ಗಮನಕ್ಕೆ ತಂದಿದ್ದೇನೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ನಾಯಕರು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮೈತ್ರಿ ಬೆಂಬಲಕ್ಕೆ ಮನವಿ: ಕೋಮುವಾದಿ ಬಿಜೆಪಿಯನ್ನು ಹೊರ ಇಡುವ ನಿಟ್ಟಿನಲ್ಲಿ ರಾಷ್ಟ್ರಮಟ್ಟದಲ್ಲಿ ಜಾತ್ಯತೀತ ಪಕ್ಷಗಳು ಒಂದಾಗಿ ಈ ಬಾರಿ ಲೋಕಸಭಾ ಚುನಾವಣೆ ಎದುರಿಸುತ್ತಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಮೈತ್ರಿ ಧರ್ಮ ಪರಿಪಾಲನೆ ಮಾಡುವಂತೆ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಆದೇಶ ನೀಡಿದ್ದಾರೆ. ಹೀಗಾಗಿ ನಮ್ಮ ಎರಡು ಪಕ್ಷಗಳಲ್ಲಿ ಎಷ್ಟೇ ಮನಸ್ತಾಪ ಇದ್ದರೂ ಅದನ್ನು ಬದಿಗೊತ್ತಿ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಪರವಾಗಿ ಕೆಲಸ ಮಾಡಿ ನಿಮ್ಮ ಎಲ್ಲಾ ಸಮಸ್ಯೆ ಪರಿಹರಿಸಲು ನಾವು ಇದ್ದೇವೆ. ನಿಮಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಡಿ.ನಾಗರಾಜಯ್ಯ ಭರವಸೆ ನೀಡಿದರು.

ಭರವಸೆ: ಡಿಕೆಶಿ ಸಂಬಂಧಿ, ಎಂಎಲ್‌ಸಿ ರವಿ ಮಾತನಾಡಿ, ಹಿಂದಿನಿಂದಲೂ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಜಿದ್ದಾಜಿದ್ದಿ ಇದ್ದಿದ್ದು ನಿಜ ಎಂದು ಹೇಳಿದ ಅವರು, ದೇವೇಗೌಡರ ಕುಟುಂಬದ ವಿರುದ್ಧ ಡಿ.ಕೆ.ಶಿವಕುಮಾರ್‌ ರಾಜಕೀಯ ಮಾಡುತ್ತಿದ್ದರು. ಆ ವೇಳೆ ಜೆಡಿಎಸ್‌ ಪಕ್ಷದವರು ಸತ್ತರೇ ಕಾಂಗ್ರೆಸ್‌ನವರು ಹೊಗುತ್ತಿರಲಿಲ್ಲ, ಕಾಂಗ್ರೆಸ್‌ನವರು ಸತ್ತರೆ ಜೆಡಿಎಸ್‌ನವರು ಬರತ್ತಿರಲಿಲ್ಲ. ಅಂಥ ರಾಜಕೀಯ ವೈಮನಸ್ಸು ಇತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎರಡು ಪಕ್ಷದ ಮುಖಂಡರು ದ್ವೇಷ ಮರೆತು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಡಿ.ಕೆ.ಶಿವಕುಮಾರ್‌ ಶ್ರಮಿಸಿದ್ದಾರೆ. ಹೀಗಾಗಿ ಎರಡು ಪಕ್ಷದ ಕಾರ್ಯಕರ್ತರನ್ನು ಮುಂದಿನ ದಿನದಲ್ಲಿ ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಈ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಮನವಿ ಮಾಡಿದರು.

Advertisement

ಗೊಂದಲ ಸರಿಪಡಿಸುವೆ: ಸಭೆ ಮುಗಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಡಿ.ನಾಗರಾಜಯ್ಯ, ಅಲ್ಪ ಸ್ವಲ್ಪ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಅದನ್ನು ಸರಿಪಡಿಸಿ ಮೈತ್ರಿ ಅಭ್ಯರ್ಥಿ ಪರವಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಗೈರು: ಸಭೆಗೆ ತಾಪಂ ಅಧ್ಯಕ್ಷ ಹರೀಶ್‌ನಾಯ್ಕ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆಂಪರಾಜುಶ್ರೀ ಹನುಮಂತು, ಜಿಪಂ ಸದಸ್ಯೆ ಮಂಜುಳಾ ಶೇಷಗಿರಿ ಸೇರಿದಂತೆ ಜೆಡಿಎಸ್‌ ಪಕ್ಷದ ಪ್ರಮುಖರು ಗೈರಾಗಿದ್ದರು.

ಸಭೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಬೆಮೆಲ್‌ ಕಾಂತರಾಜು, ಜಿಪಂ ಮಾಜಿ ಅಧ್ಯಕ್ಷ ಡಾ.ರವಿ, ಮಾಜಿ ಸದಸ್ಯರಾದ ಅಣ್ಣಯ್ಯ, ಭೋಜಯ್ಯ, ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಎಲ್‌.ಹರೀಶ್‌, ರಾಜ್ಯ ಜೆಡಿಎಸ್‌ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ಎನ್‌.ಜಗದೀಶ್‌, ತಾಪಂ ಸದಸ್ಯರಾದ ಕೃಷ್ಣ, ಜಿಯಾಉಲ್ಲಾ, ಯು.ಕೆ.ಕುಮಾರ್‌, ಪುರಸಭಾ ಮಾಜಿ ಸದಸ್ಯರಾದ ಆಯಿಷಾಬಿ, ಅನ್ಸರ್‌ಪಾಷ, ಯೂಸುಫ್‌, ಮುಖಂಡರಾದ ಹೊನ್ನಮಾಚನಹಳ್ಳಿ ತಮ್ಮಣ್ಣ, ವರದರಾಜು ಮತ್ತಿತರರಿದ್ದರು.

ರಾಜಕೀಯ ಲಾಭಕ್ಕಾಗಿ ಹೊಂದಾಣಿಕೆ: ನಾಗರಾಜಯ್ಯ ಅವರ ಹೇಳಿಕೆಗೆ ಕೆಂಡಾಮಂಡಲರಾದ ಕಾರ್ಯಕರ್ತರು ನಿಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೀರಾ. ಆದರೆ, ಕಾಂಗ್ರೆಸ್‌ ಶಾಸಕ ಡಾ.ರಂಗನಾಥ್‌ ನಮ್ಮ ಪಕ್ಷದ ಕಾರ್ಯಕರ್ತರಿಗೆ ಹಾಗೂ ಗುತ್ತಿಗೆದಾರರಿಗೆ ನಿತ್ಯ ಕಿರುಕುಳ ನೀಡಿ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ.

ಈ ನೋವು ನಾವು ಯಾರಿಗೆ ಹೇಳಿಕೊಳ್ಳೋಣ ಎಂದು ಪ್ರಶ್ನಿಸಿ ತರಾಟೆ ತೆಗೆದುಕೊಂಡರು. ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ ವಿರುದ್ಧವಾಗಿ ನಾವು ಕೆಲಸ ಮಾಡಿದ್ದೇವೆ. ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತಕೊಡಿ ಎಂದು ಯಾವ ಮುಖ ಹೊತ್ತಿಕೊಂಡು ಮತದಾರರ ಬಳಿ ಹೋಗೋಣ ಎಂದು ಆಕ್ರೋಶ ವ್ಯಕ್ತಪಡಿಸಿ ಕೆಲವರು ಸಭೆಯಿಂದ ಹೊರ ನಡೆದರು. ಇವರನ್ನು ಸಭೆಗೆ ಕರೆತರಲು ಮುಖಂಡರು ಹರಸಾಹಸ ಪಡಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next