ರಾಮನಗರ: ಕೈಲಾಂಚ ಹೋಬಳಿ ಹುಣಸನಹಳ್ಳಿ ಗ್ರಾಪಂ ತಮ್ಮನಾಯಕನಹಳ್ಳಿ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಶೋಭಾ ಮಂಟೇದಯ್ಯ ಅವರನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಭಿನಂದಿಸಿದ್ದಾರೆ.
ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಪ್ರವಾಸವಿದ್ದ ವೇಳೆ ಅವರನ್ನು ಭೇಟಿ ಮಾಡಿದ ಶೋಭಾ ಮಂಟೇದಯ್ಯ ಅವರಿಗೆ ಶಾಲು ಹೊದಿಸಿ, ಪೇಟ ತೊಡಿಸಿದ ಉಪಮುಖ್ಯಮಂತ್ರಿಗಳು ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಡಿಸಿಎಂ, ಜಿಲ್ಲೆಯಲ್ಲಿ ಈಗಷ್ಟೇ ನಮ್ಮ ಪಕ್ಷ ವ್ಯಾಪಕವಾಗಿ ನೆಲೆ ಕಾಣುತ್ತಿದೆ. ಈ ದಿಕ್ಕಿನಲ್ಲಿ ನಮ್ಮ ಉತ್ಸಾಹಿ ಕಾರ್ಯಕರ್ತರು ಹಾಗೂ ಮುಖಂಡರ ಶ್ರಮದಫಲವಾಗಿ ಬಿಜೆಪಿಬೆಂಬಲಿತ ಅಭ್ಯರ್ಥಿಯೊಬ್ಬರು ಅವಿರೋಧ ಆಯ್ಕೆಯಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಬಿಜೆಪಿಯ ಈ ಸಾಧನೆಯ ಹಿಂದೆ ಕೈಲಾಂಚ ಹೋಬಳಿ ಉಸ್ತುವಾರಿಗಳಾದ ರಾಷ್ಟ್ರೀಯ ಪರಿಷತ್ ಸದಸ್ಯ ಜಯಣ್ಣ, ಬಿಜೆಪಿ ನಗರ ಮಂಡಲ ಪ್ರಧಾನಕಾರ್ಯದರ್ಶಿಡಿ.ನರೇಂದ್ರ, ಸ್ಥಳೀಯ ಮುಖಂಡ, ತಾಪಂ ಮಾಜಿ ಸದಸ್ಯ ಮೂಡ್ಲಹಳ್ಳಿದೊಡ್ಡಿ ರವಿ ಹಾಗೂ ಜಿಲ್ಲಾ ಉಪಾಧ್ಯಕ್ಷೆ ಲೀಲಾವತಿ ಅವರ ಶ್ರಮವಿದೆ ಎಂದು ಅವರು ಶ್ಲಾಘಿಸಿದರು.
ಕೈಲಾಂಚ ಹೋಬಳಿ ಉಸ್ತುವಾರಿ, ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಡಿ.ನರೇಂದ್ರ ಮಾತನಾಡಿ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಒಗ್ಗಟ್ಟು ಹಾಗೂ ಅರ್ಪಣಾ ಮನೋಭಾವದ ಫಲವಾಗಿ ಹುಣಸನಹಳ್ಳಿ ಗ್ರಾಪಂ ಸದಸ್ಯರಾಗಿ ನಮ್ಮ ಪಕ್ಷದ ಅಭ್ಯರ್ಥಿ ಶೋಭಾ ಅವರು
ಅವಿರೋಧ ಆಯ್ಕೆಯಾಗಲು ಸಹಕಾರಿಯಾಯಿತು. ನಮ್ಮ ಜತೆ ಕೈಜೋಡಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಅ.ದೇವೇಗೌಡ, ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲುವಾಡಿ ದೇವರಾಜು, ರಾಷ್ಟ್ರೀಯ ಪರಿಷತ್ ಸದಸ್ಯ ಜಯಣ್ಣ, ಹಿರಿಯ ಮುಖಂಡ ಎಚ್.ಎಂ.ಕೃಷ್ಣಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಂಕರ್, ಮಾಗಡಿ ಮಂಡಲ ಅಧ್ಯಕ್ಷ ಧನಂಜಯ, ರಾಮನಗರ ತಾಪಂ ಮಾಜಿ ಸದಸ್ಯ ಮೂಡ್ಲಹಳ್ಳಿದೊಡ್ಡಿ ರವಿ, ಜಿಲ್ಲಾ ಉಪಾಧ್ಯಕ್ಷೆ ಲೀಲಾವತಿ, ತಾಲೂಕು ಉಪಾಧ್ಯಕ್ಷ ಡಿ.ವಿ.ಗೋಪಾಲ್, ಮಾಜಿ ಗ್ರಾಪಂ ಸದಸ್ಯ ಕೃಷ್ಣಪ್ಪ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.