ವಿಶ್ವಸಂಸ್ಥೆ: ಇದೇ ಮೊದಲ ಬಾರಿಗೆ ಹಿಂದಿ ಭಾಷೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆ (ಯುಎನ್‌ಜಿಎ)ಯಲ್ಲಿ ಮಾನ್ಯತೆ ಸಿಕ್ಕಿದೆ.
ಭಾರತವು ಪ್ರಸ್ತಾಪಿಸಿದ ಬಹುಭಾಷಾ ನಿರ್ಣಯವನ್ನು ಯುಎನ್‌ಜಿಸಿ ಅಂಗೀಕರಿಸಿದೆ. ಹೀಗಾಗಿ, ಇನ್ನು ಮುಂದೆ ವಿಶ್ವಸಂಸ್ಥೆಯು ತನ್ನ ಯಾವುದೇ ಮಾಹಿತಿ ಮತ್ತು ಸಂದೇಶಗಳನ್ನು ಅಧಿಕೃತ ಭಾಷೆಯ ಜೊತೆಗೆ ಹಿಂದಿ ಸೇರಿದಂತೆ ಅಧಿಕೃತವಲ್ಲದ ಭಾಷೆಗಳಲ್ಲೂ ಪ್ರಕಟಿಸಲಿದೆ.
ಈ ಕುರಿತು ಮಾತನಾಡಿರುವ ವಿಶ್ವಸಂಸ್ಥೆಯಲ್ಲಿರುವ ಭಾರತದ ಶಾಶ್ವತ ರಾಯಭಾರಿ ಟಿ.ಎಸ್.ತಿರುಮೂರ್ತಿ, “ಶುಕ್ರವಾರ ಅಂಗೀಕರಿಸಲಾದ ನಿರ್ಣಯದಿಂದಾಗಿ ಇನ್ನು ವಿಶ್ವಸಂಸ್ಥೆಯ ಜಾಗತಿಕ ಸಂವಹನ ವಿಭಾಗವು ಎಲ್ಲ ಪ್ರಮುಖ ಸಂದೇಶಗಳು, ಪ್ರಕಟಣೆಗಳನ್ನು ಹಿಂದಿ ಸೇರಿದಂತೆ ಅಧಿಕೃತವಲ್ಲದ ಭಾಷೆಗಳಲ್ಲೂ ನೀಡಲಿದೆ.
ಇದೇ ಮೊದಲ ಬಾರಿಗೆ ಹಿಂದಿಯ ಜೊತೆಗೆ ಉರ್ದು ಮತ್ತು ಬಾಂಗ್ಲಾಗೂ ಮಾನ್ಯತೆ ದೊರೆತಿದೆ. ಇದನ್ನು ನಾವು ಸ್ವಾಗತಿಸುತ್ತೇವೆ’ ಎಂದಿದ್ದಾರೆ.
ಪ್ರಸ್ತುತ ವಿಶ್ವಸಂಸ್ಥೆಯಲ್ಲಿ ಇಂಗ್ಲಿಷ್, ಅರೇಬಿಕ್, ಚೈನೀಸ್, ಫ್ರೆಂಚ್, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಅಧಿಕೃತ ಭಾಷೆಗಳನ್ನಾಗಿ ಬಳಸಲಾಗುತ್ತದೆ. ಈಗ ಇದಕ್ಕೆ ಪೋರ್ಚುಗೀಸ್, ಹಿಂದಿ, ಕಿಸ್ವಾಹಿಲಿ, ಪರ್ಷಿಯನ್, ಬಾಂಗ್ಲಾ ಮತ್ತು ಉರ್ದು ಭಾಷೆಗಳು ಅಧಿಕೃತವಲ್ಲದ ಭಾಷೆಗಳಾಗಿ ಸೇರ್ಪಡೆಯಾಗಿವೆ.