ಹೊಸದಿಲ್ಲಿ : ಭಾರತೀಯ ಕ್ರಿಕೆಟ್ ತಂಡದ ಓರ್ವ ಪ್ರಮುಖ ಬೌಲರ್ ಆಗಿ ಈಚೆಗೆ ಉಜ್ವಲವಾಗಿ ಮಿಂಚುತ್ತಿರುವ ಉಮೇಶ್ ಯಾದವ್ ಅವರಿಗೆ ತನ್ನ ತಂದೆ ತಿಲಕ್ ಯಾದವ್ ಅವರ ಆಸೆಯ ಪ್ರಕಾರ ಕೊನೆಗೂ ಸರಕಾರಿ ನೌಕರಿಯೊಂದು ಪ್ರಾಪ್ತವಾಗಿದೆ. ಉಮೇಶ್ ಯಾದವ್ ಗೆ ಆರ್‌ಬಿಐ ನಾಗಪುರ ಕಚೇರಿಯಲ್ಲಿ ಸಹಾಯಕ ಮ್ಯಾನೇಜರ್ ಹುದ್ದೆ ಸಿಕ್ಕಿದೆ.
2010ರಲ್ಲಿ ಜಿಂಬಾಬ್ವೆ ಎದುರಿನ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತೀಯ ತಂಡದಲ್ಲಿ ಆಡುವ ಮೂಲಕ ಉಮೇಶ್ ಯಾದವ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
ಉಮೇಶ್ ಯಾದವ್ ಅವರ ತಂದೆ ತಿಲಕ್ ಯಾದವ್ ಗೆ ತಮ್ಮ ಮಗ ಸರಕಾರಿ ಉದ್ಯೋಗಕ್ಕೆ ಸೇರಿಕೊಳ್ಳಬೇಕು ಎಂಬ ಅಪೇಕ್ಷೆ ಬಹಳ ಹಿಂದಿನಿಂದಲೇ ಇತ್ತು. ಆ ಪ್ರಕಾರ ಉಮೇಶ್ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಅರ್ಜಿ ಹಾಕಿದ್ದರು. ಆದರೆ ಪರೀಕ್ಷೆಯಲ್ಲಿ ಫೇಲಾಗಿದ್ದರು. ಆದರೆ ಅದರಿಂದ ಭಾರತೀಯ ಕ್ರಿಕೆಟ್ ರಂಗಕ್ಕೆ ಲಾಭವಾಯಿತು.
ಅದಾಗಿ ಉಮೇಶ್ ಯಾದವ್ ಕ್ರಿಕೆಟ್‌ನಲ್ಲಿ ಬೌಲರ್ ಆಗಿ ಮಿಂಚಿ ಭಾರತೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದ್ದರು. ಈಚೆಗೆ ಚಾಂಪ್ಯನ್ಸ್ ಟ್ರೋಫಿಯಲ್ಲಿ ಆಡಲು ಲಂಡನ್‌ಗೆ ಹೋಗುವ ಮುನ್ನ ಉಮೇಶ್ ಯಾದವ್ ಕ್ರೀಡಾ ಮೀಸಲು ಉದ್ಯೋಗಾರ್ಥವಾಗಿ ಆರ್‌ಬಿಐ ಅಧಿಕಾರಿಗಳನ್ನು ಕಂಡಿದ್ದರು. ಆದರೆ ನೇಮಕಾತಿ ಪ್ರಕ್ರಿಯೆಗಳನ್ನು ಪೂರೈಸಲು ಆಗಿರಲಿಲ್ಲ. ದೇಶದ ಕ್ರಿಕೆಟ್ ಸೇವೆಗಾಗಿ ಇಂಗ್ಲಂಡ್‌ಗೆ ಹೋಗುವುದಕ್ಕೆ ಉಮೇಶ್‌ಗೆ ಆರ್‌ಬಿಐ ಅವಕಾಶ ಮಾಡಿಕೊಟ್ಟಿತು.
2008ರಲ್ಲಿ ಉಮೇಶ್ ಯಾದವ್‌ಗೆ ಏರಿಂಡಿಯಾ ಉದ್ಯೋಗಾವಕಾಶ ನಿರಾಕರಿಸಿದ್ದುದು ಹಳೇ ವಿಷಯ.
2016ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ಉಮೇಶ್ ಯಾದವ್ ಬಹುವಾಗಿ ಮಿಂಚುವ ಮೂಲಕ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಿದರು. ಆ ಋತುವಿನಲ್ಲಿ ಅವರು ಐದು ದಿನಗಳ ಕ್ರಿಕೆಟ್ ಆವೃತ್ತಿಯಲ್ಲಿ 12 ಪಂದ್ಯಗಳನ್ನು ಆಡಿರುವುದು ವಿಶೇಷ.