Advertisement

ಸಾಂಪ್ರದಾಯಿಕ ಭಾಗವತಿಕೆ ಶೈಲಿಯ ಉಮೇಶ ಗೋಪಾಡಿ

12:55 AM Mar 19, 2020 | Sriram |

ಬಡಗುತಿಟ್ಟು ಯಕ್ಷಭೂಮಿಕೆಯಲ್ಲಿ ಸದ್ಧಿಲ್ಲದೇ 28 ವರ್ಷಗಳ ಕಲಾ ವ್ಯವಸಾಯ ಪೂರೈಸಿರುವ ಭಾಗವತ ಗೋಪಾಡಿಯ ಉಮೇಶ ಸುವರ್ಣ ಅವರದು ಸಾಂಪ್ರಾದಾಯಿಕ ಮಟ್ಟು, ಶೈಲಿಗಳ ಒಳಗುಟ್ಟು ತಿಳಿದಿರುವ ಅಪರೂಪದ ಭಾಗವತಿಕೆ.

Advertisement

ಸುಶ್ರಾವ್ಯ ಗಾನಸಿರಿ
ಉಮೇಶ ಸುವರ್ಣರು ಯಕ್ಷರಂಗದಲ್ಲಿ ತನ್ನ ಸುಶ್ರಾವ್ಯ ಗಾನಸಿರಿಯ ಮೂಲಕವೇ ಲಕ್ಷಾಂತರ ಪ್ರೇಕ್ಷಕರ ಮನ ಗೆದ್ದವರು. ದೇಶ, ವಿದೇಶದಲ್ಲಿಯೂ ಕೂಡಾ ತನ್ನ ಗಾನ ಪ್ರತಿಭೆಯನ್ನು ಪಸರಿಸದವರು. 27 ವರ್ಷಗಳ ಕಾಲ ಮಾರಣಕಟ್ಟೆ ಮೇಳದಲ್ಲಿ ಕಲಾ ಸೇವೆ ಸಲ್ಲಿಸಿ, ಉಪ್ಪಿನಕುದ್ರು ಯಕ್ಷಗಾನ ಗೊಂಬೆಯಾಟ ತಂಡದ ಭಾಗವತರಾಗಿ, ಪ್ರಸ್ತುತ ಸಿಗಂದೂರು ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದಾರೆ.

ದಿ| ಕಾಳಿಂಗ ನಾವಡರ ಪದ್ಯಗಳನ್ನು ಕೇಳುತ್ತ ಹಾಡಲು ಪ್ರಾರಂಭಿಸಿ, ಹದವರಿತು ತನ್ನದೇ ಶ್ರುತಿಯಲ್ಲಿ ಹಾಡುತ್ತಾ ಬೆಳೆದರು. ಐರೋಡಿ ರಾಮ ಗಾಣಿಗರಿಂದ ತಾಳ ಮತ್ತು ನೃತ್ಯಾಭ್ಯಾಸ ಮಾಡುತ್ತ ಸಿಕ್ಕ ಅವಕಾಶಗಳಲ್ಲಿ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸುತ್ತ ಮೊದಲು ಹವ್ಯಾಸಿ ಕಲಾವಿದರಾಗಿ ಗುರುತಿಸಿಕೊಂಡರು. ಜತೆಗೆ ಇವರ ತಂದೆ ದಿ| ಕೂಸ ಸುವರ್ಣರು ಅಂದಿನ ದಿನಗಳಲ್ಲಿಯೇ ಪ್ರಸಿದ್ಧ ಹೌಂದೇರಾಯನ ವಾಲಗ ಕಲಾವಿದರಾಗಿದ್ದು, ಪ್ರಾದೇಶಿಕವಾದ ಕಲೆಯ ವಾತಾವರಣ ಮನೆಯಲ್ಲಿಯೇ ಇರುವುದರಿಂದ ಸುವರ್ಣರಲ್ಲಿಯೂ ಕಲಾಮಾತೆ ಜಾಗೃತವಾಗ ತೊಡಗಿದಳು.

1989-90ರಿಂದ ಮೇಳದ ತಿರುಗಾಟ
ಸುವರ್ಣರ ಸುಪ್ತ ಪ್ರತಿಭೆಯನ್ನು ಗಮನಿಸಿದ ಪ್ರಸಂಗಕರ್ತ ದಿ| ಡಾ| ವೈ. ಚಂದ್ರಶೇಖರ ಶೆಟ್ಟರು ಸುವರ್ಣರಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದರು. ಭಾಗವತ ಕೆ.ಪಿ ಹೆಗಡೆಯವರಿಂದ ಭಾಗವತಿಕೆ ತರಬೇತಿ ಪಡೆದು 1989-90ನೇ ಸಾಲಿನಲ್ಲಿ ಮಾರಣಕಟ್ಟೆ ಮೇಳದ ತಿರುಗಾಟಕ್ಕೆ ಸಹಭಾಗವತರಾಗಿ ಸುವರ್ಣ ಅವರು ರಂಗಮಂಚವೇರಿದರು.

ಯಕ್ಷಗಾನ ಕ್ಷೇತ್ರಕ್ಕೆ ಸೇವೆ
ಮಾರಣಕಟ್ಟೆ ಮೇಳದ ಮೂಲಕ ಕಲಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಸುವರ್ಣರು ನಿರ್ದೇಶಕರಾಗಿ, ಗುರುವಾಗಿ, ಸಂಘಟಕನಾಗಿ, ಸ್ವತಃ ಮೇಳದ ಸ್ಥಾಪಕರಾಗಿ ಬಡಗುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಸದ್ದಿಲ್ಲದೇ ಸೇವೆ ಮಾಡುತ್ತಿದ್ದಾರೆ. ಮಾರಣಕಟ್ಟೆ ಮೇಳದಲ್ಲಿ ಯಕ್ಷರಂಗದ ಭೀಷ್ಮ ಎಂ.ಎಂ.ಹೆಗ್ಡೆ ಅವರ ಗರಡಿಯಲ್ಲಿ ಪಳಗಿದ ಸುವರ್ಣರು ಇಂದಿಗೂ ಅದೇ ಶಿಸ್ತಿನಿಂದ ಕಾರ್ಯ ಗೈಯುತ್ತಿದ್ದಾರೆ. ಕರುಣಾರಸ, ಶೃಂಗಾರ, ವೀರ ರಸ, ಭಕ್ತಿ ಪ್ರಧಾನ ರಸಗಳಲ್ಲಿ ತನ್ಮಯವಾಗಿ ಹಾಡಿ, ಸನ್ನಿವೇಶವನ್ನು ಭಾವಪೂರ್ಣಗೊಳಿಸುವಲ್ಲಿ ಸುವರ್ಣರದ್ದು ಸಾರ್ಥಕ ಪ್ರಯತ್ನ.

Advertisement

ಪರದೇಶಗಳಲ್ಲೂ ಕಲಾಸೇವೆ
ಇವರು ಜಪಾನ್‌, ಹಾಂಕಾಂಗ್‌, ರಷ್ಯಾ, ಬೆಲ್ಜಿಯಂ ಸೇರಿದಂತೆ ಹಲವಾರು ದೇಶಗಳಲ್ಲಿ ತನ್ನ ಗಾನಸುಧೆಯನ್ನು ಹರಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.ಕಲಾಸೇವೆಗೆ ಅನೇಕ ಸಮ್ಮಾನ, ಬಿರುದು, ಪ್ರಶಸ್ತಿಗಳು ಲಭಿಸಿವೆ. ಯಕ್ಷೇಶ್ವರಿ ಎನ್ನುವ ಪ್ರವಾಸಿ ಯಕ್ಷಗಾನ ಮೇಳವನ್ನು ಹುಟ್ಟುಹಾಕಿದ ಇವರು, ಅನೇಕ ಶಿಷ್ಯರನ್ನು ತಯಾರಿಸಿದ್ದಾರೆ. ಆಸಕ್ತ ಮಕ್ಕಳಿಗೆ ಬಿಡುವಿನ ವೇಳೆಯಲ್ಲಿ ನೃತ್ಯವನ್ನು ಕಲಿಸಿದ್ದಾರೆ. ಪತ್ನಿ ಶಿಕ್ಷಕಿ ರೇವತಿ, ಪುತ್ರಿ ನಾದಶ್ರೀ, ಪುತ್ರ ಮೋದನ್‌ರೊಂದಿಗೆ ಸಂತೃಪ್ತ ಜೀವನ ಇವರದ್ದು.

ಜೋಡಾಟದ ಹುಲಿ
ಇವರ ಹಾಡಿನ ಮಾಧುರ್ಯತೆಯ ಹಿಂದೆ ಯಕ್ಷಗಾನೀಯ ಸಾಂಪ್ರಾದಾಯತೆ ಗಮನಿಸಬಹುದು. ಅನುಕರಣೆಯತ್ತ ಮುಖ ಮಾಡದೇ ತನ್ನದೇ ಆದ ಶೈಲಿಯನ್ನು ಉಳಿಸಿಕೊಂಡಿರುವ ಇವರು ಒಂದುವರೆ ದಶಕಗಳ ಹಿಂದೆ “ಜೋಡಾಟದ ಹುಲಿ’ ಎಂದೇ ಗುರುತಿಸಿಕೊಂಡಿದ್ದರು. ದೃಶ್ಯಕಾವ್ಯವೊಂದನ್ನು ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸುವ ಇವರು ಅರಭಿ, ಹಿಂದೋಳ, ಕಲ್ಯಾಣಿ, ತೋಡಿ, ಮೋಹನ ಮುಂತಾದ ರಾಗಗಳಲ್ಲಿ ಗಾನಧಾರೆಯನ್ನು ಹರಿಸಬಲ್ಲರು.

ನಾಗರಾಜ್‌ ಬಳಗೇರಿ, ವಂಡ್ಸೆ

Advertisement

Udayavani is now on Telegram. Click here to join our channel and stay updated with the latest news.

Next