Advertisement

ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ

04:22 PM Sep 29, 2021 | Team Udayavani |

ಬೆಂಗಳೂರು : ವಿಕೃತ ಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ ಗೊಳಿಸಿ ಬುಧವಾರ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದೆ.

Advertisement

ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಎರೋರ್ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠ ,  ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲು  ಮನವಿ ಮಾಡಿ ಉಮೇಶ್ ರೆಡ್ಡಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಈ ತೀರ್ಪು ನೀಡಿದೆ.

ವಕೀಲ ಬಿ ಎನ್. ಜಗದೀಶ್ ಮೂಲಕ ಅರ್ಜಿ ಸಲ್ಲಿಸಿದ್ದ ಉಮೇಶ್ ರೆಡ್ಡಿ, 10 ವರ್ಷಗಳ ಕಾಲ ನನ್ನನ್ನು ಒಂಟಿಸೆರೆಯಲ್ಲಿಡಲಾಗಿತ್ತು, ಕ್ಷಮಾದಾನ ಅರ್ಜಿ ಇತ್ಯರ್ಥ ವಿಳಂಬಿಸಲಾಗಿತ್ತು. ನಾನು ತೀವ್ರ ಮಾನಸಿಕ ಯಾತನೆ ಅನುಭವಿಸಿದ್ದಾಗಿ ವಾದ ಮುಂದಿಟ್ಟಿದ್ದ. ಆದರೆ ಕೋರ್ಟ್ ವಾದವನ್ನು ತಳ್ಳಿಹಾಕಿ, ”ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ವಿಳಂಬ ಮಾಡಿಲ್ಲ. ಒಂಟಿ ಸೆರೆವಾಸದಲ್ಲಿದ್ದ ಎನ್ನಲಾಗದು” ಎಂದು ಅಭಿಪ್ರಾಯಪಟ್ಟಿದೆ.

ಸಮಯಾಕಾಶವನ್ನು ಕೋರಿದ್ದ ಉಮೇಶ್ ರೆಡ್ಡಿ ಮನವಿಯನ್ನು ಒಪ್ಪಿದ ಕೋರ್ಟ್​, ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲು 6 ವಾರ ಕಾಲಾವಕಾಶ ನೀಡಿದೆ . ‘6 ವಾರ ಉಮೇಶ್ ರೆಡ್ಡಿಯನ್ನು ಗಲ್ಲಿಗೇರಿಸುವಂತಿಲ್ಲ. ಗಲ್ಲು ಶಿಕ್ಷೆಯಾದ ಕಾರಣ ಈ ಕಾಲಾವಕಾಶ ನೀಡುತ್ತಿದೆ’ ಎಂದಿದೆ.

ಸದ್ಯ ಉಮೇಶ್ ರೆಡ್ಡಿ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾನೆ .

Advertisement

ಚಿತ್ರದುರ್ಗ ಮೂಲದ ಉಮೇಶ್ ರೆಡ್ಡಿ ಬೆಂಗಳೂರು ಸೇರಿದಂತೆ ಹಲವೆಡೆ ಸುಮಾರು 20 ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆಗೈದು ‘ವಿಕೃತ ಕಾಮಿ’ ಎಂಬ ಕುಖ್ಯಾತಿಗೆ ಪಾತ್ರನಾಗಿದ್ದ.

ಜಯಶ್ರೀ ಎಂಬ ಮಹಿಳೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಅಧೀನ ನ್ಯಾಯಾಲಯ 2006ರಲ್ಲಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠ ಅಧೀನ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು 2007ರಲ್ಲಿ ಖಾಯಂಗೊಳಿಸಿತ್ತು. ಸುಪ್ರೀಂಕೋರ್ಟ್‌ ಕೂಡ 2011ರಲ್ಲಿ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿತ್ತು.

ಉಮೇಶ್‌ ರೆಡ್ಡಿ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳಿಗೆ ಹಲವು ಬಾರಿ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರೂ ವಜಾಗೊಂಡಿದ್ದವು. ಆನಂತರ ರೆಡ್ಡಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯೂ ವಜಾಗೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next