ವಿಜಯಪುರ : ಹಿಂದುತ್ವದ ಬಗ್ಗೆ ಮಾತನಾಡಿದರೆ ಜೈಲಿಗೆ ಹಾಕುವುದಾಗಿ ರಜ್ಯ ಸರ್ಕಾರ ಹೇಳುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ಉಚಿತ ವಿದ್ಯುತ್ ಗ್ಯಾರಂಟಿ ಘೋಷಿಸಿ, ಮತ್ತೊಂದೆಡೆ ವಿದ್ಯುತ್ ದರ ಏರಿಸಿದೆ ಎಂದು ಆರೋಪಿಸಿ ಬಿಜೆಪಿ ಹೋರಾಟ ನಡೆಸಿತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ತಮ್ಮ ಕೈಗೆ ಬೇಡಿ ಹಾಕಿಕೊಂಡು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಸೋಮವಾರ ನಗರದ ಶ್ರೀಸಿದ್ಧೇಶ್ವರ ದೇವಸ್ಥಾನದ ಎದುರು ಬಿಜೆಪಿ ವಿಜಯಪುರ ನಗರ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಒಂದೆಡೆ ಉಚಿತ ಎನ್ನುತ್ತ ರಾಜ್ಯದ ಜನರ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಸಾಲದ ಸುಳಿಗೆ ಸಿಲುಕಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.
ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾದ ಸಂದರ್ಭದಲ್ಲಿ ಪ್ರಶ್ನಿಸುವವರ ಕೈಗೆ ಬೇಡಿ ಹಾಕುವ ಎಚ್ಚರಿಕೆ ನೀಡುತ್ತ ಸರ್ವಾಧೀಕಾರಿ ನೀತಿ ಅನುಸರಿಸುತ್ತಿದೆ. ಈ ಕಾರಣಕ್ಕೆ ನಾನು ಕೈಗೆ ಬೇಡಿ ಹಾಕೊಂಡಿರುವೆ ಎಂದು ಕಾರಜೋಳ ಕಾಂಗ್ರೆಸ್ ಸರ್ಕಾರದ ನಡೆ ವಿರುದ್ಧ ಕಿಡಿ ಕಾರಿದರು.
ಉಚಿತ ವಿದ್ಯುತ್ ನೀಡುವ ಗ್ಯಾರಂಟಿ ಹೆಸರಿನಲ್ಲಿ ವಿದ್ಯುತ್ ಗ್ರಾಹಕರಿಗೆ ದರ ಹೆಚ್ಚಳದ ಮೂಲಕ ಹೆಚ್ಚಚುವರಿ ಹೊರೆ ಹಾಕುವ ಮೂಲಕ ರಾಜ್ಯ ಸರ್ಕಾರ ಮೋಸ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಕೇವಲ ಹೆಸರಿಗಷ್ಟೇ ಉಚಿತವಾಗಿ ಗ್ಯಾರಂಟಿ ವಿದ್ಯುತ್ ಘೋಷಿಸಿದೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ಹಾಗೂ ಜನರಿಗೆ ಅನ್ಯಾಯ ಮಾಡುವ ನೀತಿಗಳನ್ನು ರೂಪಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಸರ್ಕಾರದ ಜನ ವಿರೋಧಿ ನಡೆಯನ್ನು ವಿರೋಧಿಸುವ ಸಾಂಕೇತಿಕವಾಗಿ ಕೈಗೆ ಬೇಡಿ ಹಾಕಿಕೊಂಡು, ಸಾಲ ಎಂಬ ಸಂದೇಶವನ್ನು ಕೊರಳಲ್ಲಿ ಹೊತ್ತು ಹಾಗೂ ಹಣೆಯ ಮೇಲೆ ಮೂರು ನಾಮ ಹಾಕಿಕೊಂಡು ಕಾಂಗ್ರೆಸ್ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿದರು.
ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ ಮಾತನಾಡಿ, ಕಾಂಗ್ರೆಸ್ ಜನವಿರೋಧಿ ನೀತಿ ಅನುಸರಿಸಿ ಕಪಟ ನೀತಿಯಲ್ಲಿ ಆಡಳಿತ ನಡೆಸಲು ಮುಂದಾಗಿದೆ, ಮೊದಲು ಎಲ್ಲರಿಗೂ ಉಚಿತ ವಿದ್ಯುತ್ ಎಂದು ಹೇಳಿ ಈಗ ಅದಕ್ಕೆ ಸಾಕಷ್ಟು ನಿಬಂಧನೆ ವಿಧಿಸಿ ಸಾಕಷ್ಟು ಸಂಖ್ಯೆಯಲ್ಲಿ ಜನತೆ ಈ ಯೋಜನೆಯಿಂದ ವಂಚಿತವಾಗುವ ನಿಟ್ಟಿನಲ್ಲಿ ಷಡ್ಯಂತ್ರ ರೂಪಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ಪಶುಸಂಗೋಪನೆ ಸಚಿವರು ರಾಜ್ಯದಲ್ಲಿ ವೃದ್ಧ ಹಸುಗಳನ್ನು ಸಾಕಲು ಕಷ್ಟವಾಗುತ್ತದೆ. ಆದ್ದರಿಂದ ಗೋ ಹತ್ಯೆ ನಿಷೇಧ ಕಾನೂನು ರದ್ದು ಮಾಡುವುದಾಗಿ ನೀಡಿರುವ ಹೇಳಿಕೆ ಖಂಡನಾರ್ಹ ಎಂದು ಹರಿಹಾಯ್ದರು.
ಗೋ ಹತ್ಯೆಗೆ ಅವಕಾಶ ನೀಡಿದರೆ ಕೋಟ್ಯಂತರ ಜನರ ಭಾವನೆಗೆ ಧಕ್ಕೆಯುಂಟು ಮಾಡಿದಂತಾಗುತ್ತದೆ. ನಮ್ಮ ಮನೆಗಳಲ್ಲಿ ವಯಸ್ಸಾದ ತಂದೆ-ತಾಯಿಯರನ್ನು ಹೇಗೆ ನಾವು ರಕ್ಷಿಸುತ್ತೇವೆಯೋ ಹಾಗೆಯೇ ವಯಸ್ಸಾದ ಹಸುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದರು.
ಬಿಜೆಪಿ ನಗರ ಮಂಡಳ ಅಧ್ಯಕ್ಷ-ಪಾಲಿಕೆ ಸದಸ್ಯ ಮಳುಗೌಡ ಪಾಟೀಲ ಮಾತನಾಡಿ, ಸರಾಸರಿಗಿಂತ 10 ಯುನಿಟ್ ಹೆಚ್ಚು ಉಪಯೋಗಿಸಲು ಅನುಮತಿ ಕೊಡಲಾಗುತ್ತದೆ. ಅದಕ್ಕಿಂತ ಹೆಚ್ಚು ಯುನಿಟ್ ವಿದ್ಯುತ್ ಉಪಯೋಗಿಸಿದರೆ ಹಣ ಪಾವತಿಸಬೇಕು. 100 ಯೂನಿಟ್‍ಗಿಂತ ಹೆಚ್ಚಾದರೂ ಕೂಡ ಹೆಚ್ಚು ಹಣ ಸಂದಾಯ ಮಾಡುವ ನೀತಿ ಜನ ವಿರೋಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಾದಾರ, ಎಸ್.ಎ. ಪಾಟೀಲ, ವಿಜಯಕುಮಾರ ಕುಡಿಗನೂರ, ಭೀಮಾಶಂಕರ ಹದನೂರ, ಗುರುಲಿಂಗಪ್ಪ ಅಂಗಡಿ, ರಾಹುಲ್ ಜಾಧವ, ರಾಜಶೇಖರ ಮಗಿಮಠ, ಡಾ.ಸುರೇಶ ಬಿರಾದಾರ, ಗುರು ಗಚ್ಚಿನಮಠ, ಸಂದೀಪ ಪಾಟೀಲ, ವಿಜಯ ಜೋಶಿ, ಶಿಲ್ಪಾ ಕುದರಗೊಂಡ, ಮಲ್ಲಿಕಾರ್ಜುನ ಜೋಗೂರ, ಉಮೇಶ ಕೋಳಕೂರ, ಬಸವರಾಜ ಬೈಚಬಾಳ, ವಿಠ್ಠಲ ನಡುವಿನಕೇರಿ, ರಾಜೇಶ ತಾವಸೆ, ಸದಾಶಿವ ಬುಟಾಳೆ, ಪರಶುರಾಮ ಹೊಸಪೇಟ, ಕಾಂತು ಶಿಂಧೆ, ವಿಕಾಸ ಪದಕಿ, ಪ್ರವೀಣ ಕೂಡಗಿ ಮೊದಲಾದವರು ಪಾಲ್ಗೊಂಡಿದ್ದರು.