ತಿರುವನಂತಪುರ: ಪೇಸರ್ ಉಮೇಶ್ ಯಾದವ್, ಬ್ಯಾಟರ್ ಶ್ರೇಯಸ್ ಅಯ್ಯರ್ ಮತ್ತು ಆಲ್‌ರೌಂಡರ್ ಶಾಬಾಜ್ ಅಹ್ಮದ್ ಅವರನ್ನು ದಕ್ಷಿಣ ಆಫ್ರಿಕಾ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಮೊದಲ ಪಂದ್ಯದ ಆರಂಭಕ್ಕೂ ಕೆಲವು ಗಂಟೆಗಳ ಮೊದಲು ಇದನ್ನು ಅಧಿಕೃತವಾಗಿ ಪ್ರಕಟಿಸಲಾಯಿತು.
ಕೋವಿಡ್‌ನಿಂದಾಗಿ ಸೀನಿಯರ್ ಪೇಸ್ ಬೌಲರ್ ಮೊಹಮ್ಮದ್ ಶಮಿ ಕಳೆದ ಆಸ್ಟ್ರೇಲಿಯ ಎದುರಿನ ಸರಣಿಯಿಂದ ಹೊರಗುಳಿದಿದ್ದರು. ಇನ್ನೂ ಚೇತರಿಸಿಕೊಳ್ಳದ ಕಾರಣ ಅವರನ್ನು ದಕ್ಷಿಣ ಆಫ್ರಿಕಾ ಸರಣಿಯಿಂದಲೂ ಹೊರಗುಳಿಸಲು ನಿರ್ಧರಿಸಲಾಯಿತು ಎಂಬುದಾಗಿ ಬಿಸಿಸಿಐ ತಿಳಿಸಿದೆ.
ಆದರೆ ತಂಡ ಪ್ರಕಟಗೊಂಡ ಬೆನ್ನಲ್ಲೇ ಮೊಹಮ್ಮದ್ ಶಮಿ ತಮ್ಮ ಕೋವಿಡ್ ಫಲಿತಾಂಶ ನೆಗೆಟಿವ್ ಬಂದಿದೆ ಎಂಬುದಾಗು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಮಿ ಸ್ಥಾನಕ್ಕೆ ಉಮೇಶ್ ಯಾದವ್ ಬಂದರು. ಆಸ್ಟ್ರೇಲಿಯ ವಿರುದ್ಧದ ಸರಣಿಯ ವೇಳೆಯೂ ಶಮಿ ಸ್ಥಾನ ಉಮೇಶ್ ಪಾಲಾಗಿತ್ತು. ಅಲ್ಲಿ ಮೊದಲ ಪಂದ್ಯದಲ್ಲಷ್ಟೇ ಅವಕಾಶ ಪಡೆದಿದ್ದರು.
ದೀಪಕ್ ಹೂಡಾ ಬೆನ್ನುನೋವಿನ ಸಮಸ್ಯೆಗೆ ಸಿಲುಕಿದ್ದು, ಎನ್‌ಸಿಎಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಬದಲು ಎಡಗೈ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಶಾಬಾಜ್ ಅಹ್ಮದ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಕಳೆದ ಆಗಸ್ಟ್‌ನಲ್ಲಿ ಜಿಂಬಾಬ್ವೆ ಎದುರಿನ ಸರಣಿಗಾಗಿ ಗಾಯಾಳು ವಾಷಿಂಗ್ಟನ್ ಸುಂದರ್ ಬದಲು ಶಾಬಾಜ್ ಆಯ್ಕೆಯಾಗಿದ್ದರು. ಆದರೆ ಆಡುವ ಅವಕಾಶ ಲಭಿಸಿರಲಿಲ್ಲ. ಮತ್ತೋರ್ವ ಆಟಗಾರ ಹಾರ್ದಿಕ್ ಪಾಂಡ್ಯ ಬದಲು ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ಲಭಿಸಿದೆ.