Advertisement

ಕೊಡೇ ನನ್ನ ಮುದ್ದಿನ ಕೊಡೆ!

10:15 AM Jun 08, 2017 | Harsha Rao |

ಮಳೆಗಾಲದಲ್ಲಿ ಛತ್ರಿ ಎಲ್ಲರ ಸಂಗಾತಿ. ತುಂತುರು ಮಳೆಯಿಂದ ಮೈ ನೆನೆಯದಂತೆ ನಮಗೆ ರಕ್ಷಣೆ ನೀಡುವ ಈ ಛತ್ರಿ, ನಮ್ಮ ಪಾಲಿಗೆ ಕೇವಲ “ಕೊಡೆ’. ಬೇಕೆಂದಾಗ ಬಳಸಿ, ಬೇಡವೆಂದಾಗ ಅದರ ಕೈಕಾಲು ಕಟ್ಟಿ, ತೆಗೆದಿಡಬಹುದಾದ ಈ ರಕ್ಷಕನಿಗೆ ದೊಡ್ಡ ಇತಿಹಾಸವೇ ಇದೆ. ಇದರ ಹಿಂದೆ ಅನೇಕ ವೈಜ್ಞಾನಿಕ, ಐತಿಹಾಸಿಕ ಸೋಜಿಗಗಳಿವೆ.

Advertisement

1. ಛತ್ರಿಯ ಚರಿತ್ರೆ
ಛತ್ರಿಯ ಪರಿಕಲ್ಪನೆಯನ್ನು ಮೊದಲು ಜಗತ್ತಿಗೆ ಕೊಟ್ಟಿದ್ದು ಈಜಿಪ್ಟರು. ಆರಂಭದಲ್ಲಿ ಕೋಲಿಗೆ, ತಾಳೆ ಮರದ ಎಲೆಗಳನ್ನು ಸಿಕ್ಕಿಸಿ, ಅದನ್ನು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬಳಸುತ್ತಿದ್ದರು. ನಂತರ ರೋಮನ್ನರ ಕಾಲದಲ್ಲಿ ರಣರಂಗದಲ್ಲಿ ಕೇವಲ ದಂಡನಾಯಕರು, ಕುದುರೆ ಗಾಡಿಯ ಸಾರಥಿಗಳಷ್ಟೇ, ಚಿತ್ತಾರ ಬಿಡಿಸಿದ ಟಾರ್ಪಲಿನ್‌ನ ಕೊಡೆಗಳನ್ನು ಬಳಸುತ್ತಿದ್ದರು. ಬಳಿಕ ಏಷ್ಯನ್ನರು ಬಿದಿರಿನ ಕೋಲಿಗೆ, ರೇಷ್ಮೆಯ ಬಟ್ಟೆಯ ಮುಚ್ಚಿಗೆ ಮಾಡಿಕೊಂಡರು. ಆದರೆ, ಮೊದಲ ವಾಟರ್‌ಪ್ರೂಫ್ ಕೊಡೆಯನ್ನು ಕಂಡುಹಿಡಿದ ಕೀರ್ತಿ ಚೀನಿಯರಿಗೆ ಸಲ್ಲುತ್ತದೆ. 1852ರಲ್ಲಿ ಸ್ಯಾಮುಯಲ್‌ ಫಾಕ್ಸ್‌ ಎಂಬಾತ ಉಕ್ಕಿನ ಹಿಡಿಕೆ ಇರುವ ಛತ್ರಿಯನ್ನು ಪರಿಚಯಿಸಿದ.

2. ಕೊಡೆ ಮಳೆಗಾಗಿ ಹುಟ್ಟಿದ್ದಲ್ಲ!
ಛತ್ರಿಯ ಉಗಮಕ್ಕೆ ಮಳೆಗಾಲ ಕಾರಣವಲ್ಲ, ಬೇಸಿಗೆ ಕಾರಣ! ಸೂರ್ಯನ ಕಿರಣಗಳು ದೇಹವನ್ನು ಸೋಕಬಾರದೆಂಬ ಉದ್ದೇಶದಿಂದ ಟೆಫ್ಲಾನ್‌ ಕೋಟಿಂಗ್‌ ಇರುವ ಛತ್ರಿಗಳನ್ನು ಇಂಗ್ಲೆಂಡಿನ ರಾಜಮನೆತನದ ಮಹಿಳೆಯರು ಉಪಯೋಗಿಸುತ್ತಿದ್ದರು. 16ನೇ ಶತಮಾನದಲ್ಲಿ ಜೋನಸ್‌ ಹಾನ್‌ವೇ ಎಂಬ ಇಂಗ್ಲೆಂಡಿನ ಪುರುಷ ಮೊದಲ ಬಾರಿಗೆ ಸಾರ್ವಜನಿಕ ಪ್ರದೇಶದಲ್ಲಿ ಛತ್ರಿಯನ್ನು ಬಳಸಿದ.

3. ಅದು ಕಣ್ಣಿಗೆ ಕಾಣದ ಛತ್ರಿ!
2013ರಲ್ಲಿ ಕೊರಿಯನ್‌ ವಿನ್ಯಾಸಕಾರರು ಏರ್‌ ಆಂಬ್ರೆಲಾ ಕಂಡುಹಿಡಿದರು. ಈ ಛತ್ರಿಯ ಹಿಡಿಕೆ ಮಾತ್ರ ಕಾಣಿಸುತ್ತದೆ ಬಿಟ್ಟರೆ, ಅದರ ಕೆನೋಪಿ (ಚಾವಣಿ) ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಮಳೆ ಬಂದರೆ, ಒಂದು ಹನಿಯನ್ನೂ ಇದು ಒಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಜೋರು ಬಿಸಿಲಿದ್ದರೂ, ಅದರ ತಾಪ ಛತ್ರಿ ಹಿಡಿದವನಿಗೆ ಸ್ಪರ್ಶಿವುದಿಲ್ಲ. ಛತ್ರಿಯ ಹಿಡಿಕೆ, ಟೊಳ್ಳಾಗಿದ್ದು, ಅದರಲ್ಲಿ ಗಾಳಿ ನುಗ್ಗಿ ಚಾವಣಿ ಬಿಚ್ಚಿಕೊಳ್ಳುತ್ತದೆ. ಐದಾರು ಜನ ಆರಾಮವಾಗಿ ಈ ಛತ್ರಿಯನ್ನು ಬಳಸಬಹುದು!

4. ಅಲ್ಲಿ ಅಂಬ್ರೆಲಾ ಶೇರಿಂಗ್‌ ನಡೆಯುತ್ತೆ!
ಚೀನಾದ ಶಾಂಗ್ಯೂ ಸಿಟಿಯನ್ನು “ವಿಶ್ವ ಛತ್ರಿಯ ರಾಜಧಾನಿ’ ಎನ್ನುತ್ತಾರೆ. ಇಲ್ಲಿ 1000ಕ್ಕೂ ಅಧಿಕ ಛತ್ರಿಯ ಕಾರ್ಖಾನೆಗಳಿವೆ. ಅಂಬ್ರೆಲಾ ಶೇರಿಂಗ್‌ ನಡೆಯುವ ಜಗತ್ತಿನ ಏಕೈಕ ನಗರಿ ಇದು. ಮಳೆಗಾಲದಲ್ಲಿ ಇಲ್ಲಿನ ಬೀದಿಗಳ ಕಂಬಗಳಲ್ಲಿ ವಿವಿಧ ಕಂಪನಿಗಳು ಛತ್ರಿಯನ್ನು ಫಿಕ್ಸ್‌ ಮಾಡಿರುತ್ತಾರೆ. ಛತ್ರಿ ಅಗತ್ಯವಿದ್ದವರು, ದಾಖಲೆಯ ಜತೆಗೆ ಇಂತಿಷ್ಟು ಹಣವನ್ನು ನೀಡಿ, ಅಲ್ಲಿಂದ ಪಡೆದು, ಪುನಃ ಅಲ್ಲಿಯೇ ತಂದು ಇಡಬೇಕು.

Advertisement

5. ಛತ್ರಿಗೆ ಅಂಟಿದ ಕಪ್ಪುಚುಕ್ಕೆ
ಅಂಬ್ರೆಲಾವನ್ನು ಅಫ‌ರಾಧ ಪ್ರಕರಣಕ್ಕೆ ಬಳಸಿದ ಉದಾಹರಣೆಯೂ ಇದೆ. 1978ರಲ್ಲಿ ಬಲ್ಗೇರಿಯನ್‌ ಅಧ್ಯ ಕ್ಷ ಜಾರ್ಜ್‌ ಮಾರ್ಕೋವ್‌ ಅವರನ್ನು ಛತ್ರಿ ಹಿಡಿದಿದ್ದ ಅಪರಿಚಿತ ವ್ಯಕ್ತಿಯೊಬ್ಬ ರಹಸ್ಯವಾಗಿ ಕೊಂದಿದ್ದ. ಮಾರ್ಕೋವ್‌ ಬಸ್ಸಿಗಾಗಿ ಕಾಯುತ್ತಿದ್ದರು. ಅಪರಿಚಿತ ವ್ಯಕ್ತಿಯೊಬ್ಬ, ಛತ್ರಿಯ ತುದಿಗೆ ವಿಷ ತುಂಬಿಸಿ ಅದನ್ನು ಅಧ್ಯಕ್ಷರಿಗೆ ಸ್ಪರ್ಶಿಸಿದ್ದ. ಈ ಘಟನೆ “ಅಂಬ್ರೆಲಾ ಮರ್ಡರ್‌’ ಅಂತಲೇ ಇದು ಕರೆಯಲ್ಪಟ್ಟಿದೆ.

6. ಅಲ್ಟ್ರಾವೈಲೆಟ್‌ ಕಿರಣ ರಕ್ಷಕ
ಡಾಲಿಬ್ರೋಲಿ ಎಂಬ ಕಂಪನಿ ಸೂರ್ಯನಿಂದ ಬರುವ ನೇರಳಾತೀತ ಕಿರಣಗಳನ್ನು ತಡೆಯಲು ಛತ್ರಿಗಳನ್ನು ತಯಾರಿಸಿತ್ತು! ಈ ಛತ್ರಿಯ ಹೊರಭಾಗದಲ್ಲಿ ಸಿಲ್ವರ್‌ ಬಣ್ಣ, ಒಳಭಾಗದಲ್ಲಿ ಕಪ್ಪು ಬಣ್ಣದ ಕೋಟ್‌ ಅನ್ನು ಬಳಿಯಲಾಗಿತ್ತು. ಹಿರಿಯ ನಾಗರಿಕರು, ದೈಹಿಕ ವೈಕಲ್ಯ ಹೊಂದಿದವರಿಗಾಗಿ ರೂಪಿಸಿರುವ “ಕ್ರಚ್‌ ಅಂಬ್ರೆಲಾ’ವನ್ನು, ಊರುಗೋಲಾಗಿಯೂ ಬಳಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next