ಮಹಾಲಿಂಗಪುರ: ಕಳೆದ 11 ದಿನಗಳಿಂದ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ರವಿವಾರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಮಹಾಲಿಂಗಪುರ ತಾಲೂಕು ಹೋರಾಟದ ವೇದಿಕೆಗೆ ಭೇಟಿ ನೀಡಿ, ತಮ್ಮ ಬೆಂಬಲ ಸೂಚಿಸಿ ಮಾತನಾಡಿ, ಕಳೆದ 30 ವರ್ಷಗಳಿಂದ ನಡೆಯುತ್ತಿರುವ ತಾಲೂಕು ಹೋರಾಟ ಯಶಸ್ವಿಯಾಗಲಿ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಮೂಲಕ ತಾಲೂಕು ಕೇಂದ್ರವನ್ನಾಗಿ ಘೋಷಿಸಲು ರಾಜ್ಯ ಸರ್ಕಾರಕ್ಕೆ ಒತ್ತಡ ಹಾಕುತ್ತೇವೆ. ಮುಂದೆ ನಮ್ಮ ಸರ್ಕಾರ ಬಂದರೇ ನ್ಯಾಯ ಸಮ್ಮತವಾಗಿ ತಾಲೂಕು ಘೋಷಣೆ ಮಾಡುವ ಭರವಸೆ ನೀಡಿದರು.
ಮತಕ್ಷೇತ್ರದ ರೈತರಿಗೆ ಅನ್ಯಾಯವಾಗ ಬಾರದು: ತೇರದಾಳ ಮತಕ್ಷೇತ್ರದ ರೈತರ ಬಹುದಿನಗಳ ಬೇಡಿಕೆಯಾದ ಸಸಾಲಟ್ಟಿ ಏತ ನೀರಾವರಿ ಯೋಜನೆಯ ಜಾರಿಗಾಗಿ ನಮ್ಮ ಕಾಂಗ್ರೆಸ್ ಸರ್ಕಾರದ ಅವ ಧಿಯಲ್ಲಿ 140 ಕೋಟಿ ಮಂಜೂರಿ ಮಾಡಲಾಗಿತ್ತು.ಈಚೆಗೆ ಸಿಎಂ ಬೊಮ್ಮಾಯಿ ಅವರು ಮುಧೋಳದಲ್ಲಿ ಯೋಜನೆಗೆ ಚಾಲನೆ ನೀಡಿದ್ದಾರೆ. ಸಸಾಲಟ್ಟಿ ಏತ ನೀರಾವರಿ ಯೋಜನೆಯನ್ನು ಎರಡು ಯೋಜನೆಗಳನ್ನಾಗಿ ವಿಂಗಡಿಸಿದ್ದಾರೆ. ಆದರೆ, ತೇರದಾಳ ಮತಕ್ಷೇತ್ರದ 9 ಗ್ರಾಮಗಳನ್ನು ಈ ಯೋಜನೆಯಲ್ಲಿ ಕೈ ಬಿಡಲಾಗಿದೆ ಎಂದು ರೈತರು ಆರೋಪಿಸುತ್ತಿದ್ದಾರೆ. ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿಯವರು ಸಸಾಲಟ್ಟಿ ಏತ ನೀರಾವರಿ ಯೋಜನೆಯಲ್ಲಿ ಯಾವುದೇ ಗ್ರಾಮ ಗಳಿಗೂ ಅನ್ಯಾಯವಾಗದಂತೆ ಮೂಲ ಯೋಜನೆಯಂತೆ ಕಾಮಗಾರಿ ನಡೆಸಿ, ರೈತ ಸಮುದಾಯಕ್ಕೆ ಅನುಕೂಲ ಮಾಡಿ ಕೊಡ ಬೇಕು ಎಂದು ಒತ್ತಾಯಿಸಿದರು.
ಮೊದಲಿದ್ದ ಸಸಾಲಟ್ಟಿ ಏತ ನೀರಾವರಿ ಯೋಜನೆಯನ್ನು ಶಿವಲಿಂಗೇಶ್ವರ ಏತನೀರಾವರಿ ಯೋಜನೆ ಎಂದು ಮಾರ್ಪಡಿಸಿದ್ದು ಏಕೆ ಎಂದು ಪ್ರಶ್ನಿಸಿದರು. ರೈತ ಮುಖಂಡ ಗಂಗಾಧರ ಮೇಟಿ ಮಾತನಾಡಿ, ಸಸಾಲಟ್ಟಿ ಏತ ನೀರಾವರಿ ಯೋಜನೆಯನ್ನೇ ಮೂಲ ಡಿಪಿಆರ್‌ನಂತೆ ಸಸಾಲಟ್ಟಿಯಿಂದ-ಸುಲ್ತಾನಪುರ ಹತ್ತಿರ ಘಟಪ್ರಭಾ ನದಿಗೆ ನೀರು ಹರಿಸಿದರೆ ಉಳಿದ 9 ಗ್ರಾಮಗಳ ನೀರಿನ ಸಮಸ್ಯೆ ಪರಿಹಾರವಾಗುತ್ತದೆ ಎಂದರು.
ಹೋರಾಟ ಸಮಿತಿಯ ಸಂಗಪ್ಪ ಹಲ್ಲಿ, ಜಯರಾಮಶೆಟ್ಟಿ, ಸಿದ್ದು ಶಿರೋಳ ಮಾತನಾ ಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವೆ ಉಮಾಶ್ರೀ ಅವರಿಗೆ ತಾಲೂಕು ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ರಬಕವಿ-ಬನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ನಗರ ಘಟಕ ಅಧ್ಯಕ್ಷ ಈಶ್ವರ ಚಮಕೇರಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಪುರಸಭೆ ಸದಸ್ಯರಾದ ಬಲವಂತಗೌಡ ಪಾಟೀಲ, ಮುಸ್ತಾಕ ಚಿಕ್ಕೋಡಿ, ಕಾಂಗ್ರೆಸ್ ಮುಖಂಡರಾದ ಸುರೇಶ ಬಿದರಿ, ಹೊಳೆಪ್ಪ ಬಾಡಗಿ, ಮಹಾಲಿಂಗಪ್ಪ ಲಾತೂರ, ಅರವಿಂದ ಮಾಲಬಸರಿ, ಅರ್ಜುನ ದೊಡಮನಿ, ಬಸವರಾಜ ಮರನೂರ, ಸುರೇಶ ಜಾಧವ, ವಿಠ್ಠಲ ಸಂಶಿ, ವಿಠ್ಠಲ ಹೊಸಮನಿ, ಶಂಕರ ಸೊನ್ನದ, ಮಹಾಲಿಂಗ ಮಾಳಿ, ನಾರಾಯಣ ನಿಕ್ಕಂ ಇದ್ದರು.