ಬೆಂಗಳೂರು: ಕಲಾ ಸೇವೆಯ ಆರಂಭದ ದಿನಗಳವು. ಆಗ ನಿತ್ಯ ಕಲಾಕ್ಷೇತ್ರಕ್ಕೆ ಬಂದುಹೋಗುವುದು ರೂಢಿಯಾಗಿತ್ತು. ಇಲ್ಲಿನ ಕ್ಯಾಂಟೀನ್‌ನಲ್ಲಿ ಟೀ-ಬನ್ನು ತಿಂದು, ಇದೇ ಆವರಣದಲ್ಲಿರುವ ವೇದಿಕೆಯಲ್ಲಿ ಕಲಾ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಿದ್ದೆವು. ಒಂದೇ ಒಂದು ದಿನ ಇಲ್ಲಿಗೆ ಭೇಟಿ ನೀಡದಿದ್ದರೂ ಅನಾಥ ಪ್ರಜ್ಞೆ ಕಾಡುತ್ತಿತ್ತು ಎಂದು ನಟಿ, ಸಚಿವೆ ಉಮಾಶ್ರೀ ನೆನಪಿನ ಬುತ್ತಿ ಬಿಚ್ಚಿಟ್ಟರು.
– ಹೀಗೆ ನೆನಪಿನ ಬುತ್ತಿ ಬಿಚ್ಚಿಟ್ಟವರು ನಟಿ ಉಮಾಶ್ರೀ. ದಶಕಗಳ ಹಿಂದೆ ತಮ್ಮ ಕಲಾ ಸೇವೆಗೆ ವೇದಿಕೆಯಾಗಿದ್ದ ರವೀಂದ್ರ ಕಲಾಕ್ಷೇತ್ರದ ಸುವರ್ಣ ಸಂಭ್ರಮದಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಕಲಾಕ್ಷೇತ್ರದಲ್ಲಿನ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.
ಪ್ರತಿಯೊಬ್ಬ ಕಲಾವಿದನೂ ರವೀಂದ್ರ ಕಲಾಕ್ಷೇತ್ರದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಕಲಾಕ್ಷೇತ್ರಕ್ಕೆ ನಿತ್ಯ ಭೇಟಿ ನೀಡದಿದ್ದರೆ ಅನಾಥ ಭಾವ ನಮ್ಮನ್ನು ಕಾಡುತ್ತಿತ್ತು. ಇಲ್ಲಿನ ಕ್ಯಾಂಟೀನ್‌ನಲ್ಲಿ ಟೀ, ಬನ್ನು ದೊರೆಯುತ್ತಿತ್ತು. ಪ್ರಸ್ತುತ ಅನೇಕ ಬದಲಾವಣೆಗಳಾಗಿವೆ. ಈ ವೇದಿಕೆಯೊಂದಿಗಿನ ಒಡನಾಟ ಮರೆಯಲು ಸಾಧ್ಯವೇ ಇಲ್ಲ ಎಂದರು.
ರವೀಂದ್ರ ಕಲಾಕ್ಷೇತ್ರವು ಬೆಂಗಳೂರಿನಲ್ಲಿದೆ ಎಂಬ ಕಾರಣಕ್ಕೆ ಹೆಚ್ಚಿನ ಮಾನ್ಯತೆ ನೀಡಲಾಗುತ್ತಿದೆ ಎನ್ನುವುದು ಸರಿ ಅಲ್ಲ. ಈ ಕಲಾಕ್ಷೇತ್ರ ಕಲಾವಿದರ ಜೀವನಾಡಿಯಾಗಿದ್ದು, ಭಾವನಾತ್ಮಕ ಸಂಬಂಧ ಹೊಂದಿದೆ. ರವೀಂದ್ರ ಕಲಾಕ್ಷೇತ್ರದಿಂದ ಕಲಾಸೇವೆ ಆರಂಭಿಸಿದ ಅನೇಕರು ಪ್ರಸ್ತುತ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸಿದ್ದಾರೆ. ಈ ವೇದಿಕೆ ಕಲಾ ಜೀವನಕ್ಕೆ ಮಾರ್ಗದರ್ಶಕವಾಗಿದೆ. ಇದು ರಾಜ್ಯಕ್ಕೆ ಕಲಾಕ್ಷೇತ್ರದ ಕೊಡುಗೆ ಎಂದು ಶ್ಲಾಘಿಸಿದರು.
ಹವ್ಯಾಸಕ್ಕೆಂದು ಬಂದವರೂ ಕಲೆಯನ್ನು ಜೀವನೋಪಾಯಕ್ಕಾಗಿ ಆರಂಭಿಸಿ, ಅದರಲ್ಲಿ ಆಸ್ಮಿತೆ ಕಾಪಾಡಿಕೊಳ್ಳುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಪ್ರಯೋಗಗಳಿಗೆ ತೆರೆದುಕೊಳ್ಳುತ್ತಾ, ಗುಣಮಟ್ಟದ ವಿಚಾರದಲ್ಲಿ ಎಂದಿಗೂ ರಾಜಿಯಾಗದೆ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
ಅರಳಿದ ಆಕರ್ಷಕ ಪ್ರತಿಮೆ: ಇದೇ ವೇಳೆ ಶಿಲ್ಪವನದಲ್ಲಿ ನೂತನವಾಗಿ ನಿರ್ಮಿಸಿರುವ 15 ಅಡಿ ಎತ್ತರದ ಕವಿ ರವೀಂದ್ರನಾಥ ಟ್ಯಾಗೋರ್ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ಕಲಾಕ್ಷೇತ್ರಕ್ಕೆ ರವೀಂದ್ರನಾಥ ಟ್ಯಾಗೋರ್ ಅವರ ಹೆಸರಿಟ್ಟಿರುವುದರ ಹಿಂದೆ ಅದರದೇ ಆದ ಇತಿಹಾಸವಿದೆ. ಟ್ಯಾಗೋರ್ ಅವರ ಬೃಹತ್ ಪ್ರತಿಮೆ ನಿರ್ಮಾಣ ಕ್ಲಿಷ್ಟಕರ ಎನ್ನಲಾಗಿತ್ತು.
ಆದರೆ ಶಿಲ್ಪಿಗಳಾದ ವೆಂಕಟಾಚಲಪತಿ, ಎಲ್.ನರಸಿಂಹ ಮತ್ತು ಬಿ.ಸಿ.ಶಿವಕುಮಾರ್ ಕೈಯಿಂದ ಬಹಳ ಆಕರ್ಷಕವಾದ ಪ್ರತಿಮೆ ಅರಳಿದೆ ಎಂದು ಹೇಳಿದರು. ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ರಂಗಕರ್ಮಿ ಕೆ.ಎನ್.ನಾಗರಾಜ ಮೂರ್ತಿ, ರವೀಂದ್ರ ಕಲಾಕ್ಷೇತ್ರ ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ, ಸದಸ್ಯ ಕಾರ್ಯದರ್ಶಿ ಅಶೋಕ ಎನ್. ಚಲವಾದಿ ಮತ್ತಿತರರಿದ್ದರು.