ನವದೆಹಲಿ:8 ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ರಾಜೀವ್ ಪ್ರತಾಪ್ ರೂಡಿ ಸೇರಿದಂತೆ ಐವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಶುಕ್ರವಾರ ಸಂಜೀವ್ ಬಲ್ಯಾನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶನಿವಾರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದ ನಾಲ್ವರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಶೋಭಾ, ಶ್ರೀರಾಮುಲು, ಸುರೇಶ್ ಅಂಗಡಿ, ಪ್ರಹ್ಲಾದ್ ಜೋಶಿ ರೇಸ್ ನಲ್ಲಿದ್ದಾರೆ ಎಂದು ಹೇಳಿದೆ.
ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಖಾತೆ ಹೊಂದಿದ್ದ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ, ಆರೋಗ್ಯ ಇಲಾಖೆಯ ಸಹಾಯಕ ಸಚಿವ ಫಗ್ಗಾನ್ ಸಿಂಗ್ ಕುಲಸ್ತೆಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ವರದಿ ವಿವರಿಸಿದೆ.
ರಾಜೀವ್ ಪ್ರತಾಪ್ ರೂಡಿಗೆ 2019ರ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯ ಹೊಣೆಗಾರಿಕೆ ನೀಡುವ ಸಾಧ್ಯತೆ ಇದೆ. ಆದರೆ ಕೆಲವು ವರದಿಗಳ ಪ್ರಕಾರ ರೂಡಿ ಅವರನ್ನು ಬಿಹಾರದ ಉಪಮುಖ್ಯಮಂತ್ರಿಯನ್ನಾಗಿ ಮಾಡುವ ಸಾಧ್ಯತೆ ಇದ್ದು, ಸುಶೀಲ್ ಮೋದಿ ಅವರು ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಅಲ್ಲದೇ ಕಳಪೆ ಸಾಧನೆ ಮಾಡಿರುವ ಸಚಿವರಿಗೆ ಕೊಕ್ ಸಿಗಲಿದ್ದು, ಮಧ್ಯಪ್ರದೇಶದ ಸಚಿವ ರಾಧಾ ಮೋಹನ್ ಸಿಂಗ್ ಸಚಿವ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. 75 ವರ್ಷದ ಕಲ್ ರಾಜ್ ಮಿಶ್ರಾ ಕೂಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವರದಿ ವಿವರಿಸಿದೆ. ನಿತೀಶ್ ಕುಮಾರ್ ನೇತೃತ್ವದ ಜೆಡಿಯುನ ಇಬ್ಬರು ಮೋದಿ ಅವರ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ.