Advertisement

ಅರಣ್ಯ ಇಲಾಖೆಯಿಂದ ಉಳ್ಳೂರಿನ ಬ್ರಹ್ಮನ ಕೆರೆಗೆ ಕಾಯಕಲ್ಪ

11:07 AM Apr 22, 2019 | Team Udayavani |

ಕುಂದಾಪುರ: ನೀರು ಉಳಿಸಿ ಕಾಡು ಉಳಿಸಿ ಎಂದು ಕೇವಲ ಘೋಷಣೆ ಮಾಡದೇ ಅದನ್ನು ಅನುಷ್ಠಾನಕ್ಕೆ ತರಲು ಕುಂದಾಪುರ ಅರಣ್ಯ ಇಲಾಖೆ ಪ್ರಯತ್ನಪಡುತ್ತಿದೆ. ಇಂಥದ್ದೇ ಒಂದು ಪ್ರಯತ್ನ ಕೆರೆ ಕಾಯಕಲ್ಪ ಯೋಜನೆ.

Advertisement

ಪಾಳುಬಿದ್ದ ಕೆರೆಯನ್ನು ಹೂಳೆತ್ತುವ ಮೂಲಕ ಅದರಲ್ಲಿನ ನೀರು ದೊರೆಯುವಂತೆ ಮಾಡುವುದು ಇದರ ಉದ್ದೇಶವಾಗಿದೆ. ನೀರಿಂಗಿ ಸುವುದು, ಇರುವ ನೀರನ್ನು ದೊರೆಯುವಂತೆ ಮಾಡುವ ಯೋಜನೆ ಸಫ‌ಲವಾಗಿದೆ. ಈ ಮೂಲಕ ನೀರಿಲ್ಲದೇ ಒದ್ದಾಡುತ್ತಿದ್ದ ಪ್ರಾಣಿಗಳಿಗೆ ನೀರುಣಿಸಲು ಮಾಡಿದ ಪ್ರಯತ್ನ ಪ್ರಶಂಸೆಗೆ ಕಾರಣವಾಗಿದೆ.

ನೀರಿಲ್ಲ
ಸೂರಾಲು ಪಿರಮಿಡ್‌ ಮೀಸಲು ಅರಣ್ಯದ ತಪ್ಪಲಿನಲ್ಲಿ ಹಲವು ಮದಗ ಹಾಗೂ ಕೆರೆಗಳಿದ್ದು, ಕೆಲವು ಕೆರೆಗಳಲ್ಲಿ ಅಲ್ಪಸ್ವಲ್ಪ ನೀರಿದ್ದರೂ ಕೆಲವು ಕೆರೆ ಹಾಗೂ ಮದಗಗಳು ಹಲವಾರು ವರ್ಷಗಳಿಂದ ಹೂಳು ತುಂಬಿ ನೀರಿಲ್ಲದೆ ಭಣಗುಟ್ಟುತ್ತಿವೆ. ಇದು ಕಾಡು ಪ್ರಾಣಿಗಳಿಗೆ ಕೂಡ ಕುಡಿಯುವ ನೀರಿಗೆ ಸಂಕಷ್ಟ ತಂದೊಡ್ಡಿದೆ.

ಬ್ರಹ್ಮನ ಕೆರೆ
ಇಲ್ಲಿರುವ ಹತ್ತಾರು ಕೆರೆ-ಮದಗಗಳ ಪೈಕಿ ಪ್ರಮುಖ ವಾಗಿರುವುದು ಐರಬೈಲ್‌ ಉಳ್ಳೂರ್‌ -74 ರಸ್ತೆಗೆ ತಾಗಿಕೊಂಡಿರುವ ಸೂರಾಲು ಮೀಸಲು ಅರಣ್ಯದ ತಪ್ಪಲಿನ ಬ್ರಹ್ಮನಕೆರೆ. ರಸ್ತೆಯ ಒಂದು ಅಂಚಿನಲ್ಲಿ ಬ್ರಹ್ಮ ಹಾಗೂ ನಾಗ ದೇವರ ಗುಡಿ ಇದ್ದರೆ ರಸ್ತೆಯ ಇನ್ನೊಂದು ಅಂಚಿನಲ್ಲಿ ಈ ಬ್ರಹ್ಮನಕೆರೆ (ಮದಗ ) ಇದೆ. ಈ ಗುಡಿಯ ಕಾರಣದಿಂದಲೇ ಕೆರೆಗೆ ಬ್ರಹ್ಮನ ಕೆರೆ ಎಂದು ಹೆಸರು ಬಂದದ್ದಿರಬೇಕು. ಈ ಕೆರೆಯಲ್ಲಿ ಹಲವು ವರುಷಗಳಿಂದ ಹೂಳು ತುಂಬಿದ್ದು ನೀರಿಲ್ಲದೆ ಭಣಗುಟ್ಟುತ್ತಿದೆ.

ಪ್ರಾಣಿಗಳಿಗೂ ಪ್ರಯೋಜನ
ಈ ಬ್ರಹ್ಮನಕೆರೆಗೆ ಸೂರಾಲು ಕಾಡಿನಿಂದ ಕಾಡುಕೋಣಗಳು, ಜಿಂಕೆ, ಕಡವೆ, ಬರ್ಕ, ಚಿರತೆಗಳು ನೀರು ಕುಡಿಯಲು ಬರುತ್ತವೆ. ಕೆರೆಯಲ್ಲಿ ನೀರಿಲ್ಲದೆ ಪಕ್ಕದಲ್ಲೇ ಇರುವ ವಾರಾಹಿ ಬಲ ದಂಡೆ ನೀರಾವರಿ ಕಾಲುವೆಗೆ ಕುಡಿಯುವ ನೀರಿಗೆ ಇಳಿದು ಕೆಲವು ಪ್ರಾಣಿಗಳು ಪ್ರಾಣ ಕಳೆದುಕೊಂಡರೆ ಇನ್ನು ಕೆಲವು ಪ್ರಾಣಿಗಳು ಕಾಲುವೆ ನೀರಿನಲ್ಲಿ ಕೊಚ್ಚಿಕೊಂಡು ಹೋದ ಉದಾಹರಣೆಗಳಿವೆ.

Advertisement

ಎಚ್ಚೆತ್ತ ಸಮಿತಿ
ಕೆರೆಯ ಅವ್ಯವಸ್ಥೆಯನ್ನು ಮನಗೊಂಡ ಉಳ್ಳೂರು -74 ಗ್ರಾಮ ಅರಣ್ಯ ಸಮಿತಿಯು ಈ ಬ್ರಹ್ಮನ ಕೆರೆಯ ಹೂಳು ತೆಗೆಯಲು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತು. ತತ್‌ಕ್ಷಣ ಸ್ಪಂದಿಸಿದ ಶಂಕರನಾರಾಯಣ ಅರಣ್ಯ ಇಲಾಖೆಯ ವಲಯ ಅರಣ್ಯಾಧಿ ಕಾರಿ ಏ. ಏ. ಗೋಪಾಲ್‌ ಮತ್ತು ತಂಡ ಬ್ರಹ್ಮದೇವರಿಗೆ ಪೂಜೆ ಸಲ್ಲಿಸಿ 3-4 ದಿನಗಳಿಂದ ಹಿಟಾಚಿ, ಟಿಪ್ಪರ್‌ ಯಂತ್ರಗಳ ಸಹಾಯದಿಂದ ಹೂಳು ತೆಗೆಯಿತು. ಈಗ ಹೂಳು ತುಂಬಿದ ಬ್ರಹ್ಮನಕೆರೆಯಲ್ಲಿ ಸಮೃದ್ಧ ನೀರು ಬಂದಿದೆ. ಇದರಿಂದ ಗ್ರಾಮಸ್ಥರು ಕೂಡ ಖುಷಿಯಾಗಿದ್ದಾರೆ.

ಐತಿಹಾಸಿಕ ಕೆರೆ
ಸುಮಾರು 231 ಹೆಕ್ಟೇರ್‌ ಅರಣ್ಯ ಭೂಮಿಯನ್ನು ಪಿರಮಿಡ್‌ ಆಕಾರದಲ್ಲಿ ಹೊಂದಿರುವ ಸೂರಾಲು ಮೀಸಲು ಅರಣ್ಯದ ತುತ್ತತುದಿಯಲ್ಲಿ ಸುಮಾರು 5 ಎಕ್ರೆ ವಿಸ್ತಾರದ ಐತಿಹಾಸಿಕ ಸೂರಾಲು ಕೆರೆ ಇದ್ದು, ಇದರ ಹೂಳು ತೆಗೆಯಲು ಅರಣ್ಯ ಇಲಾಖೆ ಯೋಜನಾ ವರದಿಯನ್ನು ತಯಾರಿಸಿದ್ದು, ಕೆಲಸ ಫ‌ಲಕೊಟ್ಟಿದೆ.

ಪ್ರಾಣಿಗಳಿಗೆ ಉಪಕಾರ
ಮನುಷ್ಯರಿಗಿಂತ ದೊಡ್ಡ ಉಪಕಾರ ಪ್ರಾಣಗಳಿಗೆ ಆಗಿದೆ. ಬ್ರಹ್ಮನಕೆರೆ ಹೂಳೆತ್ತಿದ ಕಾರಣ ಇನ್ನು ಮುಂದೆ ಕಾಡುಪ್ರಾಣಿಗಳು ಬಾಯಾರಿಕೆಗಾಗಿ ವಾರಾಹಿ ಬಲದಂಡೆ ಕಾಲುವೆಗೆ ಇಳಿದು ಪ್ರಾಣ ಕಳೆದುಕೊಳ್ಳುವುದು ತಪ್ಪಲಿದೆ.
ಚಿಟ್ಟೆ ರಾಜಗೋಪಾಲ ಹೆಗ್ಡೆ, ಕಾರ್ಯ ನಿರ್ವಹಣ ಸದಸ್ಯರು, ಗ್ರಾಮ ಅರಣ್ಯ ಸಮಿತಿ ಉಳ್ಳೂರು- 74

Advertisement

Udayavani is now on Telegram. Click here to join our channel and stay updated with the latest news.

Next