ಉಳ್ಳಾಲ: ಉಚಿತ ವಿದ್ಯುತ್ ಯೋಜನೆಯ ನಡುವೆ ವಿದ್ಯುತ್ ದರ ಹೆಚ್ಚಿದೆ ಎಂಬ ದೂರುಗಳು ಅಲ್ಲಲ್ಲಿ ಕೇಳಿ ಬರುತ್ತಿದೆ. ಆದರೆ ಇಲ್ಲಿನ ಮನೆಯೊಂದಕ್ಕೆ ಬರೋಬ್ಬರಿ ರೂ.7.7 ಲಕ್ಷ ರೂ. ವಿದ್ಯುತ್ ಬಿಲ್ ಬಂದಿದ್ದು, ಬಿಲ್ ಕಂಡ ಮನೆ ಮಾಲೀಕರಿಗೆ ಅಚ್ಚರಿಯಾಗಿದೆ.
ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಶಾಕ್ ಗೆ ಒಳಗಾಗಿದ್ದು, ಘಟನೆಯಿಂದ ಎಚ್ಚತ್ತ ಮೆಸ್ಕಾಂ ಅಧಿಕಾತಿಗಳು ಪರಿಷ್ಕೃತ ವಿದ್ಯುತ್ ಬಿಲ್ ಆಚಾರ್ಯ ಅವರ ಮನೆಗೆ ತಲುಪಿಸಿದ್ದಾರೆ.
ಪ್ರತೀ ತಿಂಗಳು 3000ರೂ ಒಳಗೆ ವಿದ್ಯುತ್ ಬಿಲ್ ಬರುತ್ತಿದ್ದ ಆಚಾರ್ಯ ಅವರ ಮನೆಗೆ ಈ ತಿಂಗಳೂ ಮೆಸ್ಕಾಂನ ಗುತ್ತಿಗೆ ಪಡೆದ ಸಂಸ್ಥೆಯ ಮೀಟರ್ ರೀಡರ್ ಆಗಮಿಸಿ ಬಿಲ್ ನೀಡಿದ್ದರು. ಲಕ್ಷಾಂತರ ಮೊತ್ತದ ಬಿಲ್ ಗಮನಿಸಿದ ಮನೆ ಮಂದಿಗೆ ಶಾಕ್ ಆಗಿದ್ದು, ತಕ್ಷಣ ರೀಡರ್ ಬಳಿ ವಿಚಾರಿಸಿದಾಗ, ಕಚೇರಿಗೆ ತೆರಳಿ ವಿಚಾರಿಸುವಂತೆ ತಿಳಿಸಿದ್ದಾರೆ.
ವಿದ್ಯುತ್ ಬಿಲ್ ರಿಸಿಪ್ಟನಲ್ಲಿ 99,338 ಯೂನಿಟ್ ಖರ್ಚಾಗಿದ್ದು 7,71,072 ರೂಪಾಯಿ ಬಿಲ್ ನಮೂದಿಸಲಾಗಿತ್ತು. ಮನೆಮಂದಿ ಮೆಸ್ಕಾಂನ ಚೆಂಬುಗುಡ್ಡೆ ಶಾಖೆಗೆ ತೆರಳಿ ಮಾಹಿತಿ ನೀಡಿದ್ದು, ಅಧಿಕಾರಿಗಳು ತಕ್ಷಣ ಸ್ಪಂದನೆ ನೀಡಿ ಪರಿಷ್ಕೃತ ಬಿಲ್ ಮನೆಗೆ ಮುಟ್ಟಿಸಿದ್ದಾರೆ
‘ಏಜೆನ್ಸಿಗಳ ಮುಖಾಂತರ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ. ಬಿಲ್ ರೀಡರ್ ಎಡವಟ್ಟಿನಿಂದ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣ ಆಗಿದೆ. ಬಿಲ್ ನಲ್ಲಿ ಲೋಪ ಕಂಡು ಬಂದರೆ ಅದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ತಕ್ಷಣವೇ ಸದಾಶಿವ ಆಚಾರ್ಯ ಅವರ ಮನೆ ಬಾಗಿಲಿಗೆ ಪರಿಷ್ಕೃತ ಬಿಲ್ ತಲುಪಿಸುವುದಾಗಿ ಹೇಳಿದ್ದು 2,833 ರೂಪಾಯಿಗಳ ಬಿಲ್ ತಲುಪಿಸಲಾಗಿದೆ ಎಂದು ಉಳ್ಳಾಲ ಮೆಸ್ಕಾಂ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ಹೇಳಿದ್ದಾರೆ.