Advertisement
ರಾಷ್ಟ್ರೀಯ ಹೆದ್ದಾರಿ 66 ಸನಿಹದಲ್ಲೇ ಕೇರಳ – ಕರ್ನಾಟಕವನ್ನು ಸಂಪರ್ಕಿಸುವ ರೈಲ್ವೇ ಮಾರ್ಗ ಹಾದು ಹೋಗಿದೆ. ತಲಪಾಡಿಯಿಂದ ಮಂಗಳೂರುವರೆಗಿನ ಹೆದ್ದಾರಿಯ ಬದಿಯಲ್ಲಿ ಇಳಿದು ರೈಲ್ವೇ ಹಳಿಯ ಇನ್ನೊಂದು ಬದಿಯ ಊರುಗಳಿಗೆ ಜನರು ಶಾರ್ಟ್‌ಕಟ್ ಮಾರ್ಗವಾಗಿ ತೆರಳುವುದು ಸಹಜ.
ಉಚ್ಚಿಲ, ಸೋಮೇಶ್ವರ, ತೊಕ್ಕೊಟ್ಟು, ಜಪ್ಪಿನಮೊಗರು ಪ್ರದೇಶದಲ್ಲಿ ಅಂಡರ್‌ಪಾಸ್, ಓವರ್‌ಬ್ರಿಡ್ಜ್ ಸಹಿತ ರಸ್ತೆಗಳಿವೆ ಆದರೆ ಈ ಎಲ್ಲಾ ಭಾಗಗಳಿಗಿಂತ ಅತೀ ಹೆಚ್ಚು ಜನರು ಸಂಚರಿಸುವುದು ಕೊಲ್ಯ ಜಂಕ್ಷನ್ ಮೂಲಕ ಸೋಮೇಶ್ವರ ಸಂಪರ್ಕಿಸುವ ರೈಲ್ವೇ ಹಳಿಯಲ್ಲಿ. ಕಾಸರಗೋಡು, ತಲಪಾಡಿ ಕಡೆಯಿಂದ ಬರುವ ವಿದ್ಯಾರ್ಥಿಗಳು ಮತ್ತು ಜನರು ಕೋಟೆಕಾರು ಮಾರ್ಗವಾಗಿ ಹೋಗಬೇಕಾದರೆ, ಬೀರಿ ಅಥವಾ ಕೋಟೆಕಾರಿನಲ್ಲಿ ಇಳಿದು ಸುಮಾರು ಒಂದೂವರೆ ಕಿ. ಮೀ. ನಡೆಯಬೇಕಾಗುತ್ತದೆ. ಆದರೆ ಕೊಲ್ಯ ಬಳಿಯ ರೈಲ್ವೇ ಹಳಿಯಲ್ಲಿ ಸಾಗಿದರೆ ನಡೆದುಕೊಂಡ ಹೋಗುವ ಸಮಯ ಉಳಿತಾಯ, ಆಟೋಗಳಿಗೆ ನೀಡುವ ಹಣವೂ ಉಳಿತಾಯವಾಗುತ್ತದೆ ಈ ನಿಟ್ಟಿನಲ್ಲಿ ಜನರು ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಕೊಲ್ಯ ಮೂಲಕವೇ ರೈಲು ಹಳಿ ದಾಟಿ ಸಂಚರಿಸುತ್ತಿದ್ದು, ಈ ಪ್ರದೇಶದಲ್ಲಿ ಹಳಿ ದಾಟುವುದು ಅಪಾಯಕಾರಿಯಾಗಿದ್ದು, ಅಂಡರ್ ಪಾಸ್ ನಿರ್ಮಾಣ ಮಾಡಿದರೆ ವೃದ್ಧರು ಸೇರಿದಂತೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಸ್ಥಳೀಯ ಜನರಿಗೆ ಸಹಕಾರಿಯಾಗಲಿದೆ.
Related Articles
ಉಳ್ಳಾಲ ರೈಲು ನಿಲ್ದಾಣಕ್ಕೆ ಹತ್ತಿರವಿರುವ ಈ ರೈಲು ಹಳಿ ಕಾಲು ದಾರಿಗಿಂತ ಅತೀ ಎತ್ತರ ಪ್ರದೇಶದಲ್ಲಿದ್ದು, ಎರಡೂ ಕಡೆಯಿಂದ ರೈಲು ಬರುವ ವೇಗ ಮತ್ತು ಶಬ್ದಗಳು ಇರುವುದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಗಳು. ಮಳೆಗಾಲದಲ್ಲಂತೂ ಮಕ್ಕಳು ರೈಲು ಹಳಿಯಿರುವ ದಿಣ್ಣೆ ಏರಿಕೊಂಡು ಹೋಗುವುದು ಕಷ್ಟಕರವಾಗಿದ್ದು, ವೃದ್ಧರಿಗೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಮಣ್ಣಿನ ದಿಣ್ಣೆ ಏರಿ ರೈಲು ಹಳಿಗೆ ಕಾಲಿಡುವಾಗ ರೈಲು ಬರುತ್ತಿದೆ ಎನ್ನುವ ಮಾಹಿತಿಯೂ ಇಲ್ಲದೆ ಅವಘಡ ಸಂಭವಿಸುವ ಸಾಧ್ಯತೆಗಳಿವೆ.
Advertisement
ಸುಮಾರು 6 ರೈಲ್ವೇ ಹಳಿಗಳು ಇಲ್ಲಿ ಹಾದು ಹೋಗಿದ್ದು, ವಿದ್ಯಾಥಿಗಳು, ಅದರಲ್ಲೂ ಮಹಿಳೆಯರು ದಾಟುವಾಗ ಕಾಲು, ಮತ್ತು ಸೀರೆ ರೈಲ್ವೇ ಹಳಿಗಳಿಗೆ ಸಿಲುಕುವ ಸಾಧ್ಯತೆಗಳೇ ಹೆಚ್ಚು. ಇದೀಗ ಗೂಡ್ಸ್ ರೈಲ್ವೇ ಇಂಜಿನ್ ಬದಲಾವಣೆ ಮಾಡುವ ಟ್ರ್ಯಾಕ್ ನಿರ್ಮಾಣವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪಾಯ ಸಂಭ ವಿಸುವ ಸಾಧ್ಯತೆಗಳಿವೆ ಎನ್ನುತ್ತಾರೆ ಸ್ಥಳೀಯರು.
ಜಿಲ್ಲಾಡಳಿತ, ರೈಲ್ವೇ ಇಲಾಖೆ ಸ್ಪಂದಿಸಬೇಕಾಗಿದೆಕೊಲ್ಯ ರೈಲ್ವೇ ಹಳಿಯ ಇನ್ನೊಂದು ಭಾಗವಾದ ಸೋಮೇಶ್ವರದಲ್ಲಿರುವ ಶಾಲಾ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಹಿತ ನೂರಾರು ಜನರು ಸಂಚರಿಸುತ್ತಿದ್ದು, ಸಣ್ಣ ಮಕ್ಕಳು ಸೇರಿದಂತೆ ಹಿರಿಯರು ಇಲ್ಲಿ ರೈಲ್ವೇ ಹಳಿ ದಾಟುವುದೇ ಕಷ್ಟಕರವಾಗಿದೆ. ಈ ಪ್ರದೇಶದಲ್ಲಿ ಸಣ್ಣದಾದ ಅಂಡರ್‌ಪಾಸ್ ಇದ್ದು, ಇದನ್ನೇ ಅಭಿವೃದ್ಧಿ ಮಾಡಿ ದೊಡ್ಡ ಅಂಡರ್‌ಪಾಸ್ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ನಡೆದಾಡಿಕೊಂಡು ಹೋಗಲು ಸಹಕಾರಿಯಾಗಲಿದ್ದು, ಈ ನಿಟ್ಟಿನಲ್ಲಿ ಜಿಲ್ಲಾಡಳಿತ,ರೈಲ್ವೇ ಇಲಾಖೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ.
– ಜಯರಾಮ ಗಟ್ಟಿ, ನಿವೃತ್ತ ಎಸ್‌ಐ, ಕೊಲ್ಯ ನಿವಾಸಿ ಸಾಹಸವಾಗಿದೆ
ಕಳೆದ ಹಲವು ವರುಷಗಳಿಂದ ಈ ಹಳಿಯಲ್ಲಿ ದಾಟಿ ಮನೆಗೆ ತೆರಳುವ ಸ್ಥಿತಿ ನಮ್ಮದು. ಇದೀಗ ವಯಸ್ಸಾಗಿದ್ದು, ರೈಲ್ವೇ ಹಳಿ ದಾಟುವುದೇ ಒಂದು ಸಾಹಸವಾಗಿದೆ. ಕಾಲುದಾರಿಗೆ ಪೂರಕವಾಗಿ ಅಂಡರ್‌ಪಾಸ್ ನಿರ್ಮಾಣ ಮಾಡಿದರೆ ಇಲ್ಲಿ ವಿದ್ಯಾರ್ಥಿಗಳು ಸೇರಿದಂತೆ ನಮ್ಮಂತಹ ವೃದ್ಧರಿಗೂ ಸಹಕಾರಿಯಾಗಲಿದೆ.
– ಕಮಲ, ಸ್ಥಳೀಯ ಹಿರಿಯ ನಾಗರಿಕರು ವಸಂತ್ ಎನ್. ಕೊಣಾಜೆ