Advertisement

ಉಳ್ಳಾಲ: ಅವ್ಯವಸ್ಥೆಯ ಆಗರ ತೊಕ್ಕೊಟ್ಟು ಜಂಕ್ಷನ್‌

12:05 PM Mar 07, 2023 | Team Udayavani |

ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್‌ ಉಳ್ಳಾಲದ ಹೃದಯ ಭಾಗ ದಿನವೊಂದಕ್ಕೆ ಸಾವಿರಾರು ವಾಹನ, ಲಕ್ಷಾಂತರ ಜನರು ಸಂಚರಿಸುವ ಜಂಕ್ಷನ್‌ ಅವ್ಯವಸ್ಥೆ ಇನ್ನೂ ಸರಿಯಾಗಿಲ್ಲ. ಒಂದೆಡೆ ರಾಷ್ಟ್ರೀಯ ಹೆದ್ದಾರಿ 66ರ ಅಪೂರ್ಣ ಕಾಮಗಾರಿ. ಕಿರಿದಾದ ಸರ್ವಿಸ್‌ ರಸ್ತೆ, ಅಗೆದು ಇಟ್ಟಿರುವ ಫುಟ್‌ಪಾತ್‌, ಕಾಸರಗೋಡು ತಲಪಾಡಿ, ಉಳ್ಳಾಲ ಮತ್ತು ದೇರಳಕಟ್ಟೆ ಕಡೆಯಿಂದ ಬರುವ ಬಸ್‌ಗಳು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ನಿಟ್ಟನಲ್ಲಿ ಜಂಕ್ಷನ್‌ ತಿರುವು ಪ್ರದೇಶದಲ್ಲಿ ನಿಲ್ಲಿಸುವುದರಿಂದ ತೊಕ್ಕೊಟ್ಟು ಫ್ಲೈಓವರ್‌ ಅಡಿ ಭಾಗದಲ್ಲಿ ಬರುವ ವಾಹನಗಳ ಸಂಚಾರಕ್ಕೆ ತಡೆಯಾಗುತ್ತಿದ್ದು, ಒಟ್ಟಾರೆಯಾಗಿ ತೊಕ್ಕೊಟ್ಟು ಜಂಕ್ಷನ್‌ ಅವ್ಯವಸ್ಥೆಯ ಗೂಡಾಗಿದೆ.

Advertisement

ಕೊಳಚೆ ನೀರು ಶೇಖರಣೆ
ತೊಕ್ಕೊಟ್ಟು ಜಂಕ್ಷನ್‌ನಲ್ಲಿ ತೆಗೆದಿರುವ ತೋಡಿನಲ್ಲಿ ಸ್ಥಳೀಯ ಕಟ್ಟಡಗಳಿಂದ ಕೊಳಚೆ ನೀರು ಹರಿದು ಜಂಕ್ಷನ್‌ನಲ್ಲೇ ಶೇಖರಣೆಯಾಗುತ್ತಿದ್ದು, ಕಳೆದ ಹಲವು ತಿಂಗಳಿನಿಂದ ಸಮಸ್ಯೆ ಇದ್ದರೂ ನಗರಸಭೆಯ ಆರೋಗ್ಯ ಇಲಾಖೆ ಯಾವುದೇ ಕ್ರಮಕೈಗೊಂಡಿಲ್ಲ.

ಪಾದಚಾರಿಗಳಿಗೆ ತೊಂದರೆ
ತೊಕ್ಕೊಟ್ಟು ಜಂಕ್ಷನ್‌ನಿಂದ ಬಸ್‌ ನಿಲ್ದಾಣ ಮತ್ತು ಹೊಟೇಲ್‌ ಕಡೆ ಸಂಚರಿಸುವ ನಿತ್ಯಾಧರ್‌ ಪೇಪರ್‌ ಸ್ಟಾಲ್‌ ಎದುರುಗಡೆ ಚರಂಡಿ ನಿರ್ಮಾಣ ಕಾಮಗಾರಿ ನಡೆಸಿ ಮಣ್ಣು ರಾಶಿ ಹಾಕಿ ತಿಂಗಳು ಕಳೆದರೂ ಅದರ ತೆರವು ಕಾರ್ಯ ನಡೆದಿಲ್ಲ. ಇಕ್ಕಾಟದ ಈ ಪ್ರದೇಶದಲ್ಲಿ ಸಂಚರಿಸುವ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಸಂಚಾರ ಅಸ್ತವ್ಯಸ್ತ
ತಲಪಾಡಿ, ಕೇರಳ ಕಡೆಯಿಂದ ಆಗಮಿಸುವ ಬಸ್‌ಗಳು ತೊಕ್ಕೊಟ್ಟು ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿ ಫ್ಲೈಓವರ್‌ ಅಡಿ ಭಾಗದ ತಿರುವು ಬಳಿ ಮಂಗಳೂರು ಕಡೆ ಸಂಚರಿಸುವ ಬಸ್‌ ಗಳು ಪ್ರಯಾಣಿಕರನ್ನು ಹತ್ತಿಸಲು ನಿಲ್ಲಿಸುವುದರಿಂದ ವಾಹನ ದಟ್ಟಣೆ ಸಂದರ್ಭದಲ್ಲಿ ಸಂಚಾರ ಅಸ್ತವ್ಯಸ್ತವಾಗುತ್ತಿದ್ದು, ಕೊಣಾಜೆ ಕಡೆಯಿಂದ ಮಂಗಳೂರು ಕಡೆ ಸಂಚರಿಸುವ ಬಸ್‌ಗಳೂ ಇಲ್ಲಿ ಬಸ್‌ಗಳನ್ನು ನಿಲ್ಲಿಸುತ್ತಿದ್ದು, ಸಂಚಾರ ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವ ಸ್ಥಿತಿ
ಜಂಕ್ಷನ್‌ ಕೊಣಾಜೆ – ದೇರಳಕಟ್ಟೆ ಕಡೆಯಿಂದ ಬರುವ ವಾಹನಗಳು ಮತ್ತು ಬಸ್‌ ನಿಲ್ದಾಣದಿಂದ ತೊಕ್ಕೊಟ್ಟು ಜಂಕ್ಷನ್‌ ಮಾರ್ಗವಾಗಿ ತಲಪಾಡಿ ಕಡೆ ಸಂಚರಿಸುವ ತಿರುವು ಬಳಿ ಇರುವ ಮಣ್ಣಿನ ರಾಶಿ ಪಾದಚಾರಿಗಳಿಗೆ ಮತ್ತು ವಾಹನ ಸಂಚಾರಕ್ಕೂ ತಡೆಯಾಗಿದ್ದು, ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.

*ವಸಂತ ಎನ್‌.ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next