Advertisement

Ullala: ನೇತ್ರಾವತಿ ನದಿಗೆ ಹಾರಿದ್ದ ಚಿಕ್ಕಮಗಳೂರಿನ ಉದ್ಯಮಿಯ ಮೃತದೇಹ ಪತ್ತೆ

01:20 PM Oct 31, 2023 | Team Udayavani |

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯಿಂದ ಸೋಮವಾರ ನದಿಗೆ ಹಾರಿದ್ದ ಚಿಕ್ಕಮಗಳೂರಿನ ಉದ್ಯಮಿಯ ಮೃತದೇಹ ಮಂಗಳವಾರ ಪತ್ತೆಯಾಗಿದೆ.

Advertisement

ಮಂಗಳೂರಿನ ಮಾರುಕಟ್ಟೆಗೆ ಕೊತ್ತಂಬರಿ ಸೊಪ್ಪು ಪೂರೈಸುತ್ತಿದ್ದ ಚಿಕ್ಕಮಗಳೂರು ಮುಗುಳವಳ್ಳಿ ಗೋಕುಲ್‌ ಫಾರ್ಮ್ಸ್ ನಿವಾಸಿ, ಕೃಷಿ ಉದ್ಯಮಿ ಪ್ರಸನ್ನ ಬಿ.ಎಸ್‌ (37) ಅವರು ನದಿಗೆ ಹಾರಿ ಮೃತಟಪಟ್ಟವರು.

ನಗರದ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ತೋಟಬೇಂಗ್ರೆ ಬಳಿಯಲ್ಲಿ ಮಂಗಳವಾರ ಮಧ್ಯಾಹ್ನದ ವೇಳೆ ಪ್ರಸನ್ನ ಬಿ.ಎಸ್‌ ಅವರ ಮೃತದೇಹ ಪತ್ತೆಯಾಗಿದೆ. ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳ, ಮೀನುಗಾರರ ಸಹಕಾರದಿಂದ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.

ಆರ್ಥಿಕ ಸಮಸ್ಯೆಯಿಲ್ಲ

ಚಿಕ್ಕಮಗಳೂರಿನ ರೈತರಿಂದ ಕೊತ್ತಂಬರಿ ಸೊಪ್ಪು ಸಂಗ್ರಹಿಸಿ ಮಂಗಳೂರಿನ ಗ್ಲೋಬಲ್‌ ಮಾರು ಕಟ್ಟೆಯ ತರಕಾರಿ ವ್ಯಾಪಾರಿ ಗಳಿಗೆ ಪೂರೈಸುತ್ತಿದ್ದ ಪ್ರಸನ್ನ ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಯಿಲ್ಲದಿದ್ದರೂ, ಆತ್ಮಹತ್ಯೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ. ನದಿಗೆ ಹಾರಿದ ಘಟನೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಪ್ರಸನ್ನ ಅವರ ಕುಟುಂಬದ ಸದಸ್ಯರು ಆಗಮಿಸಿದ್ದರು.

Advertisement

12 ವರ್ಷಗಳಿಂದ ವ್ಯವಹಾರ

ಚಿಕ್ಕಮಗಳೂರಿನಲ್ಲಿ ಸುಮಾರು 12 ವರ್ಷಗಳಿಂದ ತರಕಾರಿ, ಕೊತ್ತಂಬರಿ ಸೊಪ್ಪು ವ್ಯವಹಾರ ಮಾಡುತ್ತಿದ್ದ ಪ್ರಸನ್ನ ಅ. 27ರಂದು ತನ್ನ ಸಹಾಯಕ ಸುಮನ್‌ ನೊಂದಿಗೆ ಮಂಗಳೂರಿಗೆ ಕೊತ್ತಂಬರಿ ಸೊಪ್ಪು ಮಾರುಕಟ್ಟೆಗೆ ತಂದು ಬಳಿಕ ನಗರದ ಹೊಟೇಲ್‌ನಲ್ಲಿ ತಂಗಿದ್ದರು. ಸೋಮವಾರ ಮಾರುಕಟ್ಟೆಯಿಂದ ಹಣವನ್ನು ಸಂಗ್ರಹಿಸಿದ ಬಳಿಕ ಕಂಕನಾಡಿ ಫಾದರ್‌ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರೊಬ್ಬರ ಆರೋಗ್ಯ ವಿಚಾರಿಸಿ ಹಣ ನೀಡಿ ಬಂದಿದ್ದರು. ಬಳಿಕ ಸುಮನ್‌ ಅವರನ್ನು ಅಲ್ಲೇ ನಿಲ್ಲುವಂತೆ ತಿಳಿಸಿ ಕಾರಿನಲ್ಲಿ ವಾಪಸ್‌ ನೇತ್ರಾವತಿ ಸೇತುವೆಯ ಬಳಿಗೆ ಬಂದು ನದಿಗೆ ಹಾರಿದ್ದಾರೆ.

ಪೈಪ್‌ ಮೂಲಕ ತೆರಳಿ ಆತ್ಮಹತ್ಯೆ

ಪ್ರಸನ್ನ ಮಂಗಳೂರಿನಿಂದ ಕಲ್ಲಾಪುವಿನವರೆಗೆ ಆಗಮಿಸಿ ಬಳಿಕ ಯೂ ಟರ್ನ್ ತೆಗೆದುಕೊಂಡು ವಾಪಸ್‌ ಮಂಗಳೂರು ಕಡೆ ಸಂಚರಿಸಿದ್ದು, ಸೇತುವೆ ಬಳಿ ಕಾರನ್ನು ನಿಲ್ಲಿಸಿ ಪರ್ಸ್‌, ಮೊಬೈಲ್‌ ಅನ್ನು ಕಾರಿನಲ್ಲೇ ಇಟ್ಟು ಸೇತುವೆಯ ಒಂದು ಬದಿಯಿಂದ ಪೈಪ್‌ ಮೂಲಕ ತೆರಳಿ ಅಲ್ಲಿಂದ ನದಿಗೆ ಹಾರಿದ್ದರೆನ್ನಲಾಗಿದೆ.

ಈ ಘಟನೆಯನ್ನು ಸ್ಥಳೀಯವಾಗಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ನೋಡಿದ್ದು, ಹತ್ತಿರ ಬಂದಾಗ ನದಿಗೆ ಹಾರಿ ಮುಳುಗೇಳುತ್ತಿದ್ದರು. ನದಿಯಲ್ಲಿ ಮುಳುಗುತ್ತಿರುವ ದೃಶ್ಯವನ್ನು ಪ್ರಸನ್ನ ಅವರು ಬಂದಿದ್ದ ಕಾರು. ಸ್ಥಳೀಯರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆ ಸಂದರ್ಭ ಸ್ಥಳೀಯವಾಗಿ ಈಜುಗಾರರು ಇಲ್ಲದೆ ರಕ್ಷಣೆಗೆ ಸಾಧ್ಯವಾಗಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next