ಮಂಗಳೂರು: ಸಂತ ಖುತುಬುಝ್ಜಮಾನ್ ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್ ಅವರ 429ನೇ ವಾರ್ಷಿಕ ಮತ್ತು 21ನೇ ಪಂಚವಾರ್ಷಿಕ ಉರೂಸ್ ನೇರ್ಚೆ ಕಾರ್ಯಕ್ರಮ ಫೆ. 10ರಿಂದ ಮಾ. 6ರ ವರೆಗೆ ಉಳ್ಳಾಲ ದರ್ಗಾ ವಠಾರದಲ್ಲಿ ಜರಗಲಿದೆ.
ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಉಳ್ಳಾಲ ಉರೂಸನ್ನು ಕಳೆದ ಡಿ. 23ರಂದು ಪ್ರಾರಂಭಿಸುವ ಬಗ್ಗೆ ದಿನಾಂಕ ನಿಗದಿಗೊಳಿಸಿ 1.5 ಕೋ.ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಲಾಗಿತ್ತು ಎಂದರು.
ಫೆ. 10ರಂದು ಸಂಜೆ 4ಕ್ಕೆ ದರ್ಗಾ ಝಿಯಾರತ್ ಹಾಗೂ ಮಾಸಿಕ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ತಾಜುಲ… ಉಲಮಾರ ಸುಪುತ್ರ ಕುರ್ರತುಸ್ಸಾದಾತ್ ಸಯ್ಯಿದ್ ಕೋಯಮ್ಮ ತಂಙಳ್ ಕೂರತ್ ಅವರ ನೇತೃತ್ವದಲ್ಲಿ ನಡೆಯಲಿದೆ. ಸಂಜೆ 7ಕ್ಕೆ ಉರೂಸ್ ಕಾರ್ಯಕ್ರಮವನ್ನು ಸಯ್ಯಿದುಲ್ ಉಲಮಾ ಜಿಪ್ರಿಮುತ್ತುಕೋಯ ತಂಙಳ್ ಉದ್ಘಾಟಿಸುವರು. ಸಮಾರೋಪ ಕಾರ್ಯಕ್ರಮವನ್ನು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ನೆರವೇರಿಸಲಿರುವರು ಎಂದವರು ತಿಳಿಸಿದರು.
ಉಳ್ಳಾಲ ಶಾಸಕ ಯು.ಟಿ. ಖಾದರ್, ಸಂಸದ ನಳಿನ್ ಕುಮಾರ್ ಕಟೀಲು, ಉಡುಪಿ ಖಾಝಿ ಮಾಣಿ ಉಸ್ತಾದ್, ಮಂಗಳೂರು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸ್ವಾದಿಕ್ ಅಲಿ ಶಿಹಾಬ್ ತಂšಳ್, ಇಬ್ರಾಹಿಂ ಕಲೀಲ್ ತಂಙಳ್, ಕುರ್ರತುಸ್ಸಾದಾತ್ ಕೂರತ್ ತಂšಳ್, ಅಲಿ ಕುಟ್ಟಿ ಮುಸ್ಲಿಯಾರ್, ಅಲಿ ಬಾಫಕಿ ತಂಙಳ್, ಅಹ್ಮದ್ ಅಲಿ ಶಿಹಾಬ್ ತಂಙಳ್, ಎಂ.ಟಿ. ಉಸ್ತಾದ್, ಅಟಕ್ಕೋಯ ತಂಙಳ್ ಕುಂಬೋಳ್, ಅಲಿ ತಂಙಳ್ ಕುಂಬೋಳ್, ನಾಸಿರ್ ಹೈ, ತಂšಳ್ ಕೋಯಿಕ್ಕೋಡ್, ಜಮಲುಲ್ಲೈಲಿ ತಂಙಳ್, ಝೈನುಲ್,ಹಬೀಬಿತಂಙಳ್ ದುಗಲಡ್ಕ, ಸಚಿವರಾದ ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ಹಾಗೂ ಸೌಹಾರ್ದ ಸಮ್ಮೆಳನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಉರೂಸ್ ಸಂದರ್ಭ ವಿಶ್ವ ವಿಖ್ಯಾತ ಪಂಡಿತರಿಂದ, ಧಾರ್ಮಿಕ ಮುಖಂಡರಿಂದ ಪ್ರವಚನ ಕಾರ್ಯಕ್ರಮ ನಡೆಯಲಿದೆ. ರಕ್ತದಾನ ಶಿಬಿರ, ಸನದುದಾನ ಮಹಾಸಮ್ಮೇಳನ, ಮದನಿ ಸಂಗಮ, ಮದನಿ ಮೌಲೂದ್ ಪಾರಾಯಣ, ವೈದ್ಯಕೀಯ ಶಿಬಿರ, ಸರ್ವಧರ್ಮ ಮುಖಂಡರ ಸಮ್ಮೇಳನ, ಸಂದಲ್ ಮೆರವಣಿಗೆ, ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ದರ್ಗಾ ಸಮೀಪದ ರಸ್ತೆಗೆ ನಾಮಕರಣ ಕುರಿತು ಸೃಷ್ಟಿಯಾಗಿರುವ ಚರ್ಚೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಾಜಿ ಅಬ್ದುಲ್ ರಶೀದ್, ಅದು ನಗರಸಭೆಗೆ ಬಿಟ್ಟ ವಿಚಾರ ಎಂದರು.
ಪ್ರ.ಕಾರ್ಯದರ್ಶಿ ಹಾಜಿ ತ್ವಾಹ ಮುಹಮ್ಮದ್, ಲೆಕ್ಕ ಪರಿಶೋಧಕ ಯು.ಟಿ. ಇಲ್ಯಾಸ್, ಉರೂಸ್ ಪ್ರಚಾರ ಸಮಿತಿ ಸಂಚಾಲಕ ಹಾಜಿ ಎ.ಕೆ. ಮುಹಿಯದ್ದೀನ್, ಆಸಿಫ್ ಅಬ್ದುಲ್ಲ, ಉರೂಸ್ ಮೇಲ್ವಿಚಾರಣ ಸಮಿತಿ ಸದಸ್ಯ ಫಾರೂಕ್ ಉಳ್ಳಾಲ ಉಪಸ್ಥಿತರಿದ್ದರು.