Advertisement
ಯು. ಶ್ರೀನಿವಾಸ ಮಲ್ಯರು ತನ್ನ ಪ್ರಭಾವಿ ರಾಜಕೀಯ ಹುದ್ದೆಯ ಸಾಮರ್ಥ್ಯವನ್ನು ಸ್ವಂತ ಲಾಭಕ್ಕೋ, ಸ್ವಸಮಾಜದ ಹಿತಕ್ಕೂ ಬಳಸಿಕೊಳ್ಳದೆ ತಾಯ್ನಾಡಿನ ಸರ್ವತೋಮುಖ ಅಭಿವೃದ್ಧಿ ಪಥ ನಿರ್ಮಾಣಕ್ಕಾಗಿ ವಿನಿಯೋಗಿಸಿದವರು. ಪ್ರಧಾನಿ ಪಂಡಿತ್ ಜವಹರಲಾಲ ನೆಹರೂ, ಚಕ್ರವರ್ತಿ ರಾಜಗೋಪಾಲಾಚಾರಿಯ ವರಿಂದ ಹಿಡಿದು ಎರಡನೆಯ ಪ್ರಧಾನಿ ಲಾಲ ಬಹಾದೂರ್ ಶಾಸ್ತ್ರಿಯವರೆಗೂ ಆಪ್ತವಲಯಲ್ಲಿದ್ದು ಅವರ ಮೆಚ್ಚುಗೆ ಗಳಿಸಿದವರು. ಪಶ್ಚಿಮ ಕರಾವಳಿ ಜಿಲ್ಲೆಗಳು ಮಾತ್ರವಲ್ಲ ಕರ್ನಾಟಕ ರಾಜ್ಯದ ಏಳಿಗೆಯ ಮುಖಾಂತರವೇ ರಾಷ್ಟ್ರದ ಉದ್ಧಾರ ಎಂದು ಟೊಂಕ ಕಟ್ಟಿದವರು. ಅವರ ಅಭಿವೃದ್ಧಿಪರ ಮಿಂಚಿನ ಸಾಧನೆಗಳು ಅವಿಭಜಿತ ದ.ಕ ಜಿಲ್ಲೆಯ ಹೆಜ್ಜೆ ಹೆಜ್ಜೆಗಳಲ್ಲೂ ಸಾಕ್ಷಿ ನೀಡುತ್ತವೆ.
Related Articles
1946ರಲ್ಲಿ ಭಾರತ ಸ್ವತಂತ್ರಗೊಳ್ಳುವ ಪೂರ್ವಭಾವಿಯಾಗಿ ಏರ್ಪಟ್ಟ ನಡುಗಾಲದ ಸರಕಾರ ಹಾಗೂ ಸಂವಿಧಾನ ರಚನಾ ಮಂಡಳಿಯ ಸದಸ್ಯರಾಗಿ ಮಲ್ಯರು ಆಯ್ಕೆಗೊಂಡರು. 1947ರಲ್ಲಿ ರಾಷ್ಟ್ರ ಸ್ವಾತಂತ್ರ್ಯ ಗಳಿಸಿದಾಗ ದೇಶದ ಪ್ರಥಮ ಗೃಹಸಮಿತಿಯ ಸದಸ್ಯರಾದರು. ಪ್ರಧಾನಿ ನೆಹರೂ ಅವರು ಮಲ್ಯರನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಿದರು. ಬಳಿಕ ಪಕ್ಷದ ಮುಖ್ಯ ಸಚೇತಕರಾದರು. ಮಾತು ಕಡಿಮೆ, ಹೆಚ್ಚು ದುಡಿಮೆ, ವ್ಯವಹಾರ ಕೌಶಲದ ಮಲ್ಯರು ಜಿಲ್ಲೆ, ರಾಜ್ಯದ ಗಡಿಯನ್ನು ಮೀರಿ ರಾಷ್ಟ್ರ ರಾಜಕಾರಣದ ನಿರ್ಣಾಯಕ ಸ್ಥಾನದ ಮುತ್ಸದ್ದಿತನಕ್ಕೆ ಏರುವಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರಂತಹ ಹಲವು ಧುರೀಣರ ಬೆಂಬಲವೂ ಇದ್ದುದು ಪೂರಕವಾಗಿತ್ತು.
Advertisement
ಸ್ವಾತಂತ್ರಾನಂತರ 1952, 1957 ಹಾಗೂ 1962ರಲ್ಲಿ ಜರಗಿದ ಸಾರ್ವತ್ರಿಕ ಚುನಾವಣೆಗಳಲ್ಲಿ ದೆಹಲಿಯಲ್ಲಿ ಕಾರ್ಯಮಗ್ನರಾಗಿದು ಕೊಂಡೇ ಉಡುಪಿ ಲೋಕಸಭಾ ಕ್ಷೇತ್ರದಿಂದ ಮಲ್ಯರು ನಿರಂತರವಾಗಿ ಗೆದ್ದರು. ನೆಹರೂ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರ ನಿಕಟವರ್ತಿಗಳಾಗಿದ್ದ ಮಲ್ಯರು ಕೇಂದ್ರ ಸಚಿವ ಸಂಪುಟದಲ್ಲಿ ಸೇರಲು ಬಂದ ಎಲ್ಲ ಆಹ್ವಾನಗಳನ್ನೂ ನಯವಾಗಿ ತಿರಸ್ಕರಿಸಿದರು. ಕೇಂದ್ರ ಸರಕಾರದ ಮುಖ್ಯ ಸಚೇತಕರಾಗಿದ್ದುಕೊಂಡು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾಲಮಿತಿಯ ಹಲವು ಯೋಜನೆಗಳನ್ನು ರೂಪಿಸಿ, ಅವುಗಳ ಅನುಷ್ಠಾನಕ್ಕಾಗಿ ಪಣತೊಟ್ಟರು.
ಬಜ್ಪೆ ವಿಮಾನ ನಿಲ್ದಾಣ,ಮಂಗಳೂರು – ಹಾಸನ ರೈಲುಮಾರ್ಗ,ರಾಷ್ಟ್ರೀಯ ಹೆದ್ದಾರಿ ನಿರ್ಮಾಣ,ನವ ಮಂಗಳೂರು ಸರ್ವಋತು ಬಂದರು ನಿರ್ಮಾಣ, ಸುರತ್ಕಲ್‌ನಲ್ಲಿ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜು, (ಈಗಿನ ಎನ್.ಟಿ.ಕೆ. ), ಮಂಗಳೂರು ರಸಗೊಬ್ಬರ ಕಾರ್ಖಾನೆ,ಸರ್ಕ್ನೂಟ್ ಹೌಸ್,ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ಆಧುನೀಕರಣ,ನೇತ್ರಾವತಿ, ಕೂಳೂರು, ಮೂಲ್ಕಿ, ಉದ್ಯಾವರ, ಗಂಗೊಳ್ಳಿ ಮುಂತಾದ ನದಿಗಳಿಗೆ ಸೇತುವೆ ನಿರ್ಮಾಣ,ಅಂದಿನ ಅವಿಭಜಿತ ದ.ಕ. ಜಿಲ್ಲೆಯ ಉದ್ದಗಲಕ್ಕೆ ಶಾಲಾ, ಕಾಲೇಜುಗಳ ಹೆಚ್ಚಳಕ್ಕೆ ಪ್ರೇರಣೆ,ಅಖೀಲ ಭಾರತ ಕರಕುಶಲ ಅಭಿವೃದ್ಧಿ ನಿಗಮ ಸ್ಥಾಪನೆಯೊಂದಿಗೆ ವಿದೇಶಿ ವಿನಿಮಯದ ಒಳ ಹರಿವಿಗೆ ಬಾಗಿಲು ತೆರೆದುದು,ಇಂಡಿಯಾ ಕಾರ್ಪೊàರೇಟ್ ಯೂನಿಯನ್ ಮುಖಾಂತರ ಲಕ್ಷಾಂತರ ಮಂದಿಗೆ ಉದ್ಯೋಗ ದೊರೆಯಲು ಕಾರಣವಾದುದು, ಕೆನರಾ ಬ್ಯಾಂಕ್ ನಿರ್ದೇಶಕರಾಗಿ 29 ವರ್ಷ ಸೇವೆ ,ಮಂಗಳೂರಿನ ಸಿ.ಪಿ.ಸಿ. ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ಸೇವೆ,ಅವಿಭಜಿತ ಜಿಲ್ಲೆಯಲ್ಲಿ ವ್ಯಾಪಕ ವಿದ್ಯುತ್ ಸಂಪರ್ಕ ಇತ್ಯಾದಿ ಮಲ್ಯರ ಸಾಂಸದಿಕ ಕಾಲಾವಧಿಯಲ್ಲಿ ದ.ಕ. ಜಿಲ್ಲೆಗಾಗಿ ರೂಪುಗೊಂಡ ಪ್ರಮುಖ ಯೋಜನೆಗಳು.
ಕೇವಲ ಐದಾರು ದಶಕಗಳ ಹಿಂದೆ ಮಂಗಳೂರಿನಿಂದ ಕಾರವಾರಕ್ಕೆ ಹೋಗಲು 15-16 ಹೊಳೆಗಳು ದಾರಿಗಡ್ಡವಿದ್ದವು. ಹೊಳೆಗಳ ಇಬ್ಬದಿ ಫೆರಿದೋಣಿಗಳಿಗಾಗಿ ಕಾದಿರಬೇಕಾಗುತ್ತಿತ್ತು. ಮಂಗಳೂರಿನಿಂದ ಕುಂದಾಪುರ ತಲುಪಲು ಕರಾವಳಿ ತೀರದಲ್ಲಾದರೆ 5-6 ಹೊಳೆಗಳಿದ್ದವು. 9ರಿಂದ 10 ಗಂಟೆಗಳಷ್ಟು ಕಾಲ ವ್ಯಯವಾಗುತ್ತಿತ್ತು. ಸೇತುವೆಗಳಿರಲಿಲ್ಲ. ಇಂದು ಅದೇ ದೂರವನ್ನು ಬರಿಯ ಒಂದೂವರೆ ಗಂಟೆಯಲ್ಲಿ ತಲುಪುವ ವ್ಯವಸ್ಥೆ ರೂಪುಗೊಳ್ಳಲು ಮಲ್ಯರ ದೂರದೃಷ್ಟಿಯ ಕಾರ್ಯಕ್ಷಮತೆ ಕಾರಣವಾಯಿತು. ಸೇತುವೆಗಳ ನಿರ್ಮಾಣ, ಹೆದ್ದಾರಿ ನಿರ್ಮಾಣದಂತಹ ಯೋಜನೆಗಳನ್ನು ರೂಪಿಸಿ ಸಾರಿಗೆ ಸಂಪರ್ಕ ಸುಲಲಿತಗೊಳಿಸಿದ ಹರಿಕಾರ ಮಲ್ಯರು. ರಾಷ್ಟ್ರದ ಮೊದಲ ಹಾಗೂ ಎರಡನೆಯ ಪಂಚವಾರ್ಷಿಕ ಯೋಜನೆಗಳ ಕಾಲದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ನಭೂತೋ ನ ಭವಿಷ್ಯತಿ ಎಂಬಂತಹ ಮಹತ್ವದ ಯೋಜನೆಗಳ ಜಾರಿ, ಧನವಿನಿಯೋಗದ ಹಿಂದೆ ಮಲ್ಯರ ರಾಜಕೀಯ ಸ್ಥಾನಮಾನಗಳ ಪ್ರಭಾವ ಮತ್ತು ಮುತ್ಸದ್ಧಿತನವಿತ್ತು.
ಸಿಮೆಂಟ್ ಪೂರೈಕೆ ಕೊರತೆಯಿಂದ ಉಳ್ಳಾಲ ಸೇತುವೆ ನಿರ್ಮಾಣ ಕಾರ್ಯ ಸ್ಥಗಿತಗೊಂಡಾಗ ವಿತ್ತ ಖಾತೆಯ ಕಾರ್ಯದರ್ಶಿಯನ್ನು ಸ್ವತಃ ಭೇಟಿ ಮಾಡಿ ತ್ವರಿತವಾಗಿ ಅವಶ್ಯ ಸಿಮೆಂಟ್ ಚೀಲಗಳ ಒದಗಿಸುವ ಮೂಲಕ ನಿಗದಿತ ವೇಳೆಯಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವ್ಯವಸ್ಥೆ, ಮಂಗಳೂರು ಪ್ರವಾಸಿ ಮಂದಿರದಲ್ಲಿ ಜನಸಾಮಾನ್ಯರು ಬಂದು ಕುಳಿತುಕೊಳ್ಳಲು ಬೇಕಾದ ಆಸನ ವ್ಯವಸ್ಥೆಯಂತಹ ತಳಮಟ್ಟದ ಸಮರ್ಪಕತೆಯತ್ತಲೂ ತೀವ್ರ ನಿಗಾ ವಹಿಸುತ್ತಿದ್ದವರು ಮಲ್ಯರು.
1964ರಲ್ಲಿ ನೆಹರೂ ವಿಧಿವಶರಾದಾಗ ಶ್ರೀನಿವಾಸ ಮಲ್ಯರ ನೇತೃತ್ವದಲ್ಲಿ ಪಕ್ಷದ ಸಿಂಡಿಕೇಟ್ ಕೂಟ ಸಭೆ ಸೇರಿತು. ಅಂದಿನ ಕಾಂಗ್ರೆಸ್ ಅಧ್ಯಕ್ಷ ಕಾಮರಾಜ ನಾಡಾರ್, ಆಂಧ್ರಪ್ರದೇಶದ ಸಂಜೀವ ರೆಡ್ಡಿ, ಬಂಗಾಲದ ಅತುಲ್ಯ ಘೋಷ್, ಕರ್ನಾಟಕದ ನಿಜಲಿಂಗಪ್ಪ ಹಾಗೂ ಮಲ್ಯರ ಈ ಕೂಟ ಮುಂದಿನ ಪ್ರಧಾನಿಯಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಪಂಥಪ್ರಧಾನ ಮತ್ತು ಪ್ರಧಾನಮಂತ್ರಿಯಾಗಿ ಆಯ್ಕೆಗೆ ವೇದಿಕೆ ನಿರ್ಮಿಸಿತು. ನೆಹರೂ ಸಂಪುಟದಲ್ಲಿ ಇಂದಿರಾಗಾಂಧಿಯವರು ಸಂಸ್ಕೃತಿ ಸಚಿವೆಯಾಗಿ ಸಂಪುಟ ಸೇರ್ಪಡೆಯಲ್ಲೂ ಸೂತ್ರಧಾರಿಕೆ ಶ್ರೀನಿವಾಸ ಮಲ್ಯರದ್ದೇ.
ಹೀಗೆ ಒಂದೆಡೆ ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಹೊಣೆಗಳ ನಿರ್ವಹಣೆ ಇನ್ನೊಂದೆಡೆ ಕರ್ನಾಟಕ ಅದರಲ್ಲೂ ಮುಖ್ಯವಾಗಿ ದ.ಕ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರಂತರ ಶ್ರಮಿಸಿದ ಈ ನೇತಾರನ ಶಷ್ಠಬ್ಧ ಶಾಂತಿ ಸಂದರ್ಭವನ್ನು ಜಿಲ್ಲೆಯ ಅಭಿಮಾನಿಗಳು ಅಭಿನಂದನ ಸಮಾರಂಭವಾಗಿ ರೂಪಿಸಿದ್ದೂ ಹರ ಸಾಹಸದಿಂದಲೇ. ಅದನ್ನು ಒತ್ತಾಯದ ಮೇರೆಗೆ ಒಪ್ಪಿಕೊಂಡ ಮಲ್ಯರು ಸಮಾರಂಭದ ವೇಳೆ ಭಾಷಣ ಮಾಡಲು ಹೇಳಬೇಡಿ, ಕೆಲಸವಿದ್ದರೆ ಹೇಳಿ ಎಂದರು.
ಅಂದಿನ ಸಮಾರಂಭದಲ್ಲಿ ಟಿ.ಎ.ಪೈ, ಕೆ.ಕೆ.ಶೆಟ್ಟಿ, ನಾಗಪ್ಪ ಆಳ್ವ, ಎಸ್.ಡಿ. ಧರ್ಮಸಾಮ್ರಾಜ್ಯ ಮತ್ತಿತರ ಗಣ್ಯರು ಭಾಗವಹಿಸಿದರು. ಮಲ್ಯರಿಗೆ ಅಭಿನಂದನಪತ್ರ ಸಲ್ಲಿಸಲಾಯಿತು. ಜನಸ್ತೋಮವು ಮಲ್ಯರನ್ನು ಕೆನರಾ ಜಿಲ್ಲೆಯ ಶಿಲ್ಪಿ ಎಂಬುದಾಗಿ ಕೊಂಡಾಡಿತು. ಶ್ರೀನಿವಾಸ ಮಲ್ಯ – ಇಂದಿರಾ ಬಾಯಿ ದಂಪತಿಗೆ ಸಂತಾನ ಭಾಗ್ಯವಿರಲಿಲ್ಲ. ಷಷ್ಟಬ್ದ ಸಂದರ್ಭದಲ್ಲಿ ಮಂಗಳೂರಿನ ರಥಬೀದಿ ಸಮೀಪದ ಅವರ ಸಹೋದರನ ಮನೆಯ ಬಳಿ ಸಂತಾನ ಸಂಕೇತವಾಗಿ ಅಶ್ವತ್ಥದ ಸಸಿಯೊಂದನ್ನು ಮಲ್ಯರು ನೆಟ್ಟರು. ಅದು ಮುಂದೆ ಹೆಮ್ಮರವಾಗಿ ಬೆಳೆದು ಮಲ್ಯರ ಪ್ರತಿನಿಧಿ ಎಂಬಂತೆ ಇಂದಿಗೂ ನೆಳಲಾಶ್ರಯ ನೀಡುತ್ತಿದೆ.
ಕೊನೆಯ ದಿನಗಳುಇಂತಹ ಮಹಾನ್ ವ್ಯಕ್ತಿ ಶ್ರೀನಿವಾಸ ಮಲ್ಯರು 1965ರ ಡಿಸೆಂಬರ್ 19ರಂದು ಬೆಳಿಗ್ಗೆ ದೆಹಲಿಯಿಂದ ಬೆಂಗಳೂರಿನ ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆ; ಬಳಿಕ ಮಂಗಳೂರಿಗೆ ಹೋಗುವ ಉದ್ದೇಶದಿಂದ ಹೊರಟವರು ಕಾರಿನಲ್ಲಿಯೇ ಬೆಳಗಿನ 7.45ಕ್ಕೆ ಹೃದಯಾಘಾತದಿಂದ ಅಸುನೀಗಿದರು. ಈ ವಾರ್ತೆ ತಲಪುತ್ತಲೇ ಆಗ ಉತ್ತರ ಪ್ರದೇಶದಲ್ಲಿದ್ದ ಪ್ರಧಾನಿ ಶಾಸಿŒಯವರು ದೆಹಲಿಗೆ ಧಾವಿಸಿ ಬಂದರು. ಭಾರತದ ಪ್ರಧಾನಿಗೆ ರಷ್ಯಾ ಸರಕಾರವು ಉಡುಗೊರೆಯಾಗಿ ನೀಡಿದ್ದ ಇಲ್ಯೂಶನ್ ಜೆಟ್ ಪವನ್ ಹಂಸ ಎನ್ನುವ ವಿಶೇಷ ವಿಮಾನದಲ್ಲಿ ಮಲ್ಯರ ಪಾರ್ಥಿವ ಶರೀರವನ್ನು ಮಂಗಳೂರಿಗೆ ಕಳುಹಿಸಿಕೊಡಲಾಯಿತು. ಅದು ಭಾರತ – ಪಾಕ್ ಯುದ್ಧ ಕಾಲವಾಗಿದ್ದುದರಿಂದ ಬ್ಲ್ಯಾಕ್‌ಔಟ್ ಜಾರಿಯಿತ್ತು. ಪಾರ್ಥಿವ ಶರೀರವನ್ನು ನೆಹರೂ ಮೈದಾನದ ಪೆವಿಲಿಯನ್‌ನಲ್ಲಿ ಸ್ವಲ್ಪಹೊತ್ತು ಸಾರ್ವಜನಿಕ ವೀಕ್ಷಣೆಗೆ ಇರಿಸಿ, ಬಳಿಕ ಮಲ್ಯರ ತಮ್ಮ ಸುಬ್ರಾಯ ಮಲ್ಯರ ಮನೆಗೆ ಕೊಂಡೊಯ್ಯಲಾಯಿತು. ಅಂತಿಮಯಾತ್ರೆಯ ಬಳಿಕ ಅವರ ಅಣ್ಣ ಯು.ಪಿ. ಮಲ್ಯರ ಪುತ್ರ ಯು. ಪ್ರಭಾಕರ ಮಲ್ಯರಿಂದ ಅಗ್ನಿಸ್ಪರ್ಶದೊಂದಿಗೆ ಮಹಾನ್ ಚೇತನ ಪಂಚಭೂತಗಳಲ್ಲಿ ಲೀನವಾಯಿತು. ಯು. ಶ್ರೀನಿವಾಸ ಮಲ್ಯರ ಶಾಶ್ವತ ನೆನಪಿಗಾಗಿ ನವಮಂಗಳೂರು ಬಂದರು ಪ್ರವೇಶದ್ವಾರದಲ್ಲಿ, ಪದುವಾ ಹೈಸ್ಕೂಲು ಮುಂಭಾಗದಲ್ಲಿ ಮುಂತಾದೆಡೆ ಅವರ ಪ್ರತಿಮೆಗಳಿವೆ. ಸುರತ್ಕಲ್ ಎನ್.ಐ.ಟಿ.ಕೆ ಸ್ಮಾರಕ ಭವನ ಮುಂತಾದವು ನಿರ್ಮಾಣಗೊಂಡಿವೆ. 2002ರಲ್ಲಿ ಮಲ್ಯ ಶತಮಾನೋತ್ಸವವನ್ನು ದ.ಕ.ಜಿಲ್ಲಾಡಳಿತದ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸುವ ಮೂಲಕ ಆ ಮಹಾನ್ ಚೇತನಕ್ಕೆ ಗೌರವ ಸಲ್ಲಿಸಲಾಯಿತು. ಕಳೆದ ವರ್ಷ ಪಡೀಲ್ ಪಂಪ್‌ವೆಲ್ ರಸ್ತೆಗೆ ಯು. ಶ್ರೀನಿವಾಸ ಮಲ್ಯ ರಸ್ತೆ ಎಂಬುದಾಗಿ ನಾಮಕರಣ ಮಾಡಿ ಶ್ರೀನಿವಾಸ ಮಲ್ಯ ಸ್ಮಾರಕ ರಚಿಸಲಾಗಿದೆ. ಮುದ್ದು ಮೂಡುಬೆಳ್ಳೆ