Advertisement

Ullal: ತೊಕ್ಕೊಟ್ಟು ಜಂಕ್ಷನ್‌ – ಭಟ್ನಗರ ರಸ್ತೆಯಲ್ಲಿ ಉಲ್ಟಾ ಸಂಚಾರ!

01:05 PM Dec 18, 2024 | Team Udayavani |

ಉಳ್ಳಾಲ: ವಾಹನಗಳು ರಸ್ತೆಯ ಎಡಭಾಗದಲ್ಲೇ ಚಲಿಸಬೇಕು, ಓವರ್‌ಟೇಕ್‌ ಮಾಡುವಾಗ ಬಲಭಾಗದಲ್ಲೇ ಮಾಡಬೇಕು ಎನ್ನುವುದು ದೇಶದಲ್ಲಿ ಜಾರಿಯಲ್ಲಿರುವ ಸಂಚಾರ ನಿಯಮ. ಆದರೆ, ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟಿನಿಂದ ಭಟ್ನಗರದ (ಉಳ್ಳಾಲ ಕ್ರಾಸ್‌)ವರೆಗಿನ ಸರ್ವಿಸ್‌ ರಸ್ತೆಯಲ್ಲಿ ಈ ನಿಯಮ ಉಲ್ಟಾ! ಇಲ್ಲಿ ವಾಹನಗಳು ಎಡಭಾಗದಲ್ಲಿ ಸಂಚರಿಸಬೇಕಾದ ವಾಹನಗಳು ಬಲಭಾಗದಲ್ಲಿ ಮತ್ತು ಬಲಭಾಗದಲ್ಲಿ ಸಂಚರಿಸಬೇಕಾದ ವಾಹನಗಳು ಬಲಭಾಗದಲ್ಲಿ ಸಂಚರಿಸುತ್ತವೆ. ಇಲ್ಲಿ ಕಾನೂನು ಪ್ರಕಾರ ಎಡಭಾಗದಲ್ಲಿ ಸಾಗುವುದೇ ಅಪರಾಧ ಎಂಬಂತಾಗಿದೆ. ಜತೆಗೆ ಅಪಘಾತಗಳು ಸಂಭವಿಸಿ ಪ್ರಾಣ ಬಲಿಯೂ ನಡೆದಿದೆ.

Advertisement

ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟಿನಲ್ಲಿ ಫ್ಲೈಓವರ್‌ ನಿರ್ಮಾಣದ ಬಳಿಕ ದೇರಳಕಟ್ಟೆ ಭಾಗದಿಂದ ಬರುವ ಬಸ್‌ ಹಾಗೂ ವಾಹನಗಳು ತಲಪಾಡಿ, ಕೇರಳ ಭಾಗಕ್ಕೆ ಹೋಗಬೇಕು ಎಂದರೆ ತೊಕ್ಕೊಟ್ಟು ಜಂಕ್ಷನ್‌ ಮೂಲಕ ಫ್ಲೈಓವರ್‌ ಕೆಳಗೆ ಎಡಭಾಗದಲ್ಲಿರುವ ಸರ್ವೀಸ್‌ ರಸ್ತೆಯಲ್ಲೇ ಸಂಚರಿಸಬೇಕು. ಇಲ್ಲಿ ವಾಹನ ದಟ್ಟಣೆ ವಿಪರೀತವಾಗಿದೆ. ಕ್ಷಣಕ್ಕೊಂದರಂತೆ ಬಸ್‌ಗಳು, ದ್ವಿಚಕ್ರ ಮತ್ತು ಇತರ ವಾಹನಗಳು ಬರುತ್ತವೆ. ಈ ವಾಹನಗಳು ಭಟ್ನಗರ (ಉಳ್ಳಾಲ ಕ್ರಾಸ್‌)ವರೆಗೆ ಸರ್ವೀಸ್‌ ರಸ್ತೆಯಲ್ಲೇ ಸಂಚರಿಸಬೇಕು.

ವಿಶೇಷವೆಂದರೆ, ಭಟ್ನಗರ, ಚೆಂಬುಗುಡ್ಡೆ, ಕಾಪಿಕಾಡು, ಗಾಂಧಿ ನಗರದ ಕಡೆಯಿಂದ ಆಗಮಿಸುವ ವಾಹನಗಳು ಕೂಡ ಇದೇ ಸರ್ವೀಸ್‌ ರಸ್ತೆಯಲ್ಲೇ ಸಂಚರಿಸುತ್ತವೆ. ಅಂದರೆ ಮೊದಲೇ ಇಕ್ಕಟ್ಟಾದ ಸರ್ವಿಸ್‌ ರಸ್ತೆಯಲ್ಲಿ ಎರಡೂ ಬದಿ ವಾಹನಗಳು ಓಡಾಡುತ್ತವೆ.

ದುರಂತವೆಂದರೆ ಇಲ್ಲಿ ಎಡಭಾಗದಿಂದ ಸಂಚರಿಸಬೇಕಾದ ವಾಹನಗಳು ಬಲಗಡೆಯೂ, ಬಲಗಡೆಯಿಂದ ಸಂಚರಿಸ ಬೇಕಾದ ವಾಹನಗಳು ಎಡಗಡೆಯಿಂದಲೂ ಸಂಚರಿಸು ವುದರಿಂದ ಅಯೋಮಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೆಲವೊಮ್ಮೆ ವಾಹನಗಳು ವೇಗವಾಗಿ ಧಾವಿಸಿ ಅಪಘಾತಗಳಿಗೆ ಕಾರಣವಾಗುತ್ತವೆ. ಸಂಚಾರ ನಿಯಮ ಪಾಲನೆ ಹೆಸರಲ್ಲೇನಾದರೂ ಎಡಗಡೆಯಿಂದ ಹೋದರೆ ವೇಗವಾಗಿ ಬರುವ ವಾಹನಗಳಿಗೆ ಸಿಲುಕಬೇಕಾದ ಸ್ಥಿತಿ ಇಲ್ಲಿದೆ.

Advertisement

ಉಳ್ಳಾಲ ಕ್ರಾಸ್‌ ಜಂಕ್ಷನ್‌ ಮುಚ್ಚಿದ ಬಳಿಕ ಸಮಸ್ಯೆ
ತೊಕ್ಕೊಟ್ಟು ಓವರ್‌ಬ್ರಿಜ್‌ ಬಳಿಯ ಉಳ್ಳಾಲ ಕ್ರಾಸ್‌ ಜಂಕ್ಷನ್‌ನಲ್ಲಿ ನಡೆದ ಅಪಘಾತದಲ್ಲಿ ದಂಪತಿ ಮೃತಪಟ್ಟಿದ್ದರು. ಈ ಸಾವಿನ ಬಳಿಕ ಅಪಘಾತ ವಲಯವೆಂದು ಗುರುತಿಸಿ ಉಳ್ಳಾಲ ಕ್ರಾಸ್‌ನ್ನು ಮುಚ್ಚಲಾಗಿದೆ. ಬಳಿಕ ತೊಕ್ಕೊಟ್ಟು ಫ್ಲೈಓವರ್‌ ಬಳಿಯ ಎರಡೂ ಬದಿಯ ರಸ್ತೆ ಸರ್ವೀಸ್‌ ರಸ್ತೆಯಾಗಿ ಸಮಸ್ಯೆ ಉದ್ಭವಿಸಿದೆ. ಒಂದು ಭಾಗದಲ್ಲಿ ತಲಪಾಡಿ ಕಡೆಗೆ ಹೋಗುವವರು ಮತ್ತು ಆ ಕಡೆಯಿಂದ ತೊಕ್ಕೊಟ್ಟು ಜಂಕ್ಷನ್‌ಗೆ ಬರುವ ವಾಹನಗಳು ಸಾಗಿದರೆ ಇಲ್ಲೊಂದು ಕಡೆಯಲ್ಲಿ ಉಳ್ಳಾಲ ಪಡೆಗೆ ಹೋಗುವವರು ಮತ್ತು ಉಳ್ಳಾಲ ಕಡೆಯಿಂದ ಬರುವ ವಾಹನಗಳು ಸಂಚರಿಸುತ್ತವೆ. ಭಟ್ನಗರ ಕಡೆಗೆ ಹೋಗುವ ಸರ್ವಿಸ್‌ ರಸ್ತೆಯಲ್ಲಿ ಉಲ್ಟಾ ಸಂಚಾರವಿದೆ.

ಉಳ್ಳಾಲ ಕ್ರಾಸ್‌ ಸಂಚಾರಕ್ಕೆ ಮುಕ್ತ ಅಗತ್ಯ
ಓವರ್‌ಬ್ರಿಡ್ಜ್ ಮಾರ್ಗವಾಗಿ ಉಳ್ಳಾಲ ಕಡೆ ಸಂಪರ್ಕಿಸುವ ಹೆದ್ದಾರಿಯ ತೊಕ್ಕೊಟ್ಟು ಭಟ್ನಗರದ ಉಳ್ಳಾಲ ಕ್ರಾಸ್‌ ಜಂಕ್ಷನ್‌ ಸಂಚಾರಕ್ಕೆ ಮುಕ್ತ ಮಾಡಿದರೆ, ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಶೇ. 40 ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಿದೆ. ಈ ಜಂಕ್ಷನ್‌ನಿಂದ ಉಳ್ಳಾಲದಿಂದ ಕಾಪಿಕಾಡು, ಗಾಂಧಿನಗರ, ತಲಪಾಡಿ ಭಾಗಕ್ಕೆ ವಾಹನಗಳು ಮತ್ತು ಗಾಂಧಿನಗರ, ಭಟ್ನಗರದಿಂದ ತೊಕ್ಕೊಟ್ಟು ಜಂಕ್ಷನ್‌ ಮತ್ತು ತೊಕ್ಕೊಟ್ಟು ಕಡೆಯಿಂದ ಉಳ್ಳಾಲಕ್ಕೆ ಸಂಚರಿಸುವ ವಾಹನಗಳು ಮುಕ್ತವಾಗಿ ಸಂಚಿಸಲು ಸಾಧ್ಯವಿದೆ. ಈ ರಸ್ತೆ ತೆರವಾದರೆ ಕಾಪಿಕಾಡು ಬಳಿಯೂ ಹೆದ್ದಾರಿ ತಿರುವು ಬಂದ್‌ ಮಾಡಿ ಅಪಘಾತ ತಪ್ಪಿಸಲು ಸಾಧ್ಯವಿದೆ.

ರಾತ್ರಿ ವೇಳೆಯ ಸಂಚಾರ ಪ್ರಾಣಕ್ಕೆ ಹಾನಿ
ಈ ರಸ್ತೆ ಇಕ್ಕಟ್ಟಾಗಿರುವ ಕಾರಣ ಹಗಲಿನ ಸಂದರ್ಭದಲ್ಲಿ ವಾಹನಗಳ ನಿಭಿಡತೆಯಿಂದ ನಿಧಾನಗತಿಯ ಸಂಚಾರವಿರುತ್ತದೆ. ಹೀಗಾಗಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ರಾತ್ರಿ ವೇಳೆ ವಾಹನಗಳು ವೇಗವಾಗಿ ಸಾಗುವುದರಿಂದ ಅಪಘಾತಗಳು ಸಂಭವಿಸಿ ಪ್ರಾಣ ಹಾನಿಯಾಗುತ್ತಿದೆ. ವಾರದ ಹಿಂದೆ ರಾತ್ರಿ ಪಾಳಿಯಲ್ಲಿ ಬಾರ್‌ನಲ್ಲಿ ಕೆಲಸ ನಿರ್ವಹಿಸಿ ವಾಪಾಸಾಗುತ್ತಿದ್ದ ಸ್ಕೂಟರ್‌ ಸವಾರ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಏನೇನು ಮಾಡಬಹುದು?
- ಉಳ್ಳಾಲ ಕಡೆಗೆ ಸಂಪರ್ಕಿಸುವ ಓವರ್‌ ಬ್ರಿಜ್‌ ಸಂಪರ್ಕ ರಸ್ತೆಯನ್ನು ಮುಕ್ತಗೊಳಿಸಿದರೆ ಅನುಕೂಲವಾಗುತ್ತದೆ.
-  ತೊಕ್ಕೊಟ್ಟು ಜಂಕ್ಷನ್‌ನಿಂದ ತೊಕ್ಕೊಟ್ಟು ಭಟ್ನಗರದವರೆಗಿನ ಸರ್ವೀಸ್‌ ರಸ್ತೆಯ ವಿಸ್ತರಣೆ ಮಾಡಬೇಕು
-  ಇಲ್ಲಿ ಸಂಚರಿಸುವ ವಾಹನಗಳು ಸಂಚಾರ ನಿಯಮದಂತೆ ಎಡಭಾಗದಲ್ಲೇ ವೇಗಮಿತಿಯೊಂದಿಗೆ ಸಂಚರಿಸಲು ಜಾಗೃತಿ ಮೂಡಿಸುವ ಕಾರ್ಯ ಆಗಬೇಕು.
-  ರಸ್ತೆಯಲ್ಲಿ ಪಾರ್ಕಿಂಗ್‌ ಮಾಡುವ ವಾಹನಗಳಿಗೆ ದಂಡ ವಿಧಿಸುವ ಕಾರ್ಯ ಆದರೆ ಇಲ್ಲಿನ ಸಮಸ್ಯೆ ಪರಿಹಾರ ಸಾಧ್ಯ.
-  ತೊಕ್ಕೊಟ್ಟು ಜಂಕ್ಷನ್‌ನಿಂದ ತಲಪಾಡಿ ಕಡೆ ತಿರುವು ವಿಸ್ತರಣೆ ಆಗಬೇಕು.
-  ಸರಿಯಾದ ಚರಂಡಿ ವ್ಯವಸ್ಥೆ, ಸರ್ವೀಸ್‌ ರಿಕ್ಷಾಗಳ ನಿಯಂತ್ರಣ ಮಾಡಿ ಅಲ್ಲಿ ಪ್ರಯಾಣಿಕರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು.
-  ತಲಪಾಡಿ ಕಡೆ ಸಂಚರಿಸುವ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಹಿಂದಿನ ಚೆಕ್‌ಪೋಸ್ಟ್‌ ಬಳಿ ತಂಗುದಾಣ ಮಾಡಿದರೆ ಜಂಕ್ಷನ್‌ ವಾಹನ ದಟ್ಟಣೆ ತಪ್ಪಿಸಲು ಸಾಧ್ಯ.

-ವಸಂತ ಕೊಣಾಜೆ

Advertisement

Udayavani is now on Telegram. Click here to join our channel and stay updated with the latest news.

Next