Advertisement

ಉಳ್ಳಾಲ: ಶೇ. 65.36 ಮತದಾನ

11:00 AM Sep 01, 2018 | |

ಉಳ್ಳಾಲ: ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಹೊರತುಪಡಿಸಿ ಉಳ್ಳಾಲ ನಗರಸಭೆಯಲ್ಲಿ ಗುರುವಾರ ಶಾಂತಿಯುತ ಮತದಾನ ನಡೆದಿದೆ. ಶೇ. 65.36 ಮತದಾನವಾಗಿದ್ದು, ನಗರಸಭೆಯ 31 ವಾರ್ಡ್‌ಗಳ 102 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಉಳ್ಳಾಲ ಭಾರತ್‌ ಪ್ರೌಢಶಾಲೆಯಲ್ಲಿ ಬಿಗಿ ಬಂದೋ ಬಸ್ತ್ ನಲ್ಲಿ  ಮತಯಂತ್ರಗಳನ್ನು ಇಡಲು ವ್ಯವಸ್ಥೆ ಮಾಡಲಾಗಿದೆ. ನಗರಸಭೆಯ 31 ಸ್ಥಾನಗಳಿಗೆ 43 ಮತದಾನ ಕೇಂದ್ರದಲ್ಲಿ ಮತದಾನ ನಡೆದಿದ್ದು, ಕಲ್ಲಾಪು ಪಟ್ಲ,ಒಂಭತ್ತುಕೆರೆ, ಮುಕ್ಕಚ್ಚೇರಿ ಮತ್ತು ಉಳ್ಳಾಲ ಕೋಡಿಯಲ್ಲಿ ಸಣ್ಣಪುಟ್ಟ ಅಹಿತಕರ ಘಟನೆ, ಮಾತಿನ ಚಕಮಕಿ ಹೊರತುಪಡಿಸಿದರೆ ಉಳಿದ ಎಲ್ಲ ಮತಕೇಂದ್ರಗಳಲ್ಲಿ ಶಾಂತಿಯುತ ಮತದಾನವಾಗಿದೆ.

Advertisement

ಭಟ್ನಗರ ಮತ್ತು ಚೆಂಬುಗುಡ್ಡೆ ವಾರ್ಡ್‌ನಲ್ಲಿ ಕೆಲವು ಮತದಾರರ ಮತವನ್ನು ಮೊದಲೇ ಹೊರಗಿನವರು ಚಲಾಯಿಸಿದ್ದಾರೆ ಎಂದು ಆರೋಪಿಸಿದರು. ಸೇನೆರೆಬೈಲು ವಾರ್ಡ್‌ ನಲ್ಲಿ ನಕಲಿ ಮತದಾನಕ್ಕೆ ಯತ್ನಿಸಿದ್ದು, ಸರಿಯಾದ ದಾಖಲೆ ನೀಡದ ಕಾರಣ ಮತದಾನ ನಿರಾಕರಿಸಲಾಯಿತು. ಉಳಿದಂತೆ ಎಲ್ಲ ವಾರ್ಡ್‌ಗಳಲ್ಲಿ ಶಾಂತಿಯುತ ಮತದಾನವಾಯಿತು.

ವೃದ್ಧ ತಂದೆಯನ್ನು ಎತ್ತಿಕೊಂಡು ಬಂದರು
ಒಂಬತ್ತುಕೆರೆ ಬೂತ್‌ನಲ್ಲಿ ವೃದ್ಧ ಮತ್ತು ಅನಾರೋಗ್ಯ ಪೀಡಿತ ತಂದೆಯನ್ನು ಪುತ್ರ ಎತ್ತಿಕೊಂಡು ಬಂದು ಹಕ್ಕು ಚಲಾವಣೆ ಮಾಡಿಸಿದ್ದು ವಿಶೇಷವಾಗಿತ್ತು. ಮುಕ್ಕಚ್ಚೇರಿ ನಿವಾಸಿ ಅಬ್ದುಲ್‌ ಖಾದರ್‌ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಲ್ಲೀವರೆಗೆ ಒಂದು ಬಾರಿಯೂ ಮತದಾನ ಮಾಡುವುದನ್ನು ತಪ್ಪಿಸದ ಅಬ್ದುಲ್‌ ಖಾದರ್‌ ಅವರು, ಅನಾರೋಗ್ಯ ಅಥವಾ ವಯಸ್ಸಿನ ಕಾರಣಕ್ಕಾಗಿ ಮತದಾನದಿಂದ ದೂರು ಉಳಿಯಲು ಇಷ್ಟಪಡಲಿಲ್ಲ. ಅದಕ್ಕಾಗಿ ಪುತ್ರನ ಸಹಾಯದೊಂದಿಗೆ ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು.

ಸೂಕ್ತ ಪೊಲೀಸ್‌ ಬಂದೋಬಸ್ತ್ 
ಮತದಾನ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ ಎಂದು ಮುನ್ನೆಚ್ಚರಿಕೆಯಾಗಿ ಎಲ್ಲ ಮತಕೇಂದ್ರಗಳ ಸುತ್ತಮುತ್ತ ಸೂಕ್ತ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮತದಾನ ಆರಂಭವಾದ ಬೆಳಗ್ಗೆ ಏಳರಿಂದ ಮುಕ್ತಾಯದ ವೇಳೆ ಸಂಜೆ ಐದು ಗಂಟೆಯವರೆಗೂ ಪೊಲೀಸರು ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಪತಿ, ಪತ್ನಿಗೆ ಬೇರೆ ಬೇರೆ ವಾರ್ಡ್‌ 
ಹಿಂದಿನ ಪಟ್ಲ ಗಂಡಿ ವಾರ್ಡ್‌ ವಿಂಗಡನೆಯ ಸಂದರ್ಭದಲ್ಲಿ ಒಂದೇ ಮನೆಯಲ್ಲಿ ವಾಸವಾಗಿರುವ ಪತಿ, ಪತ್ನಿಯನ್ನು ಎರಡು ವಾರ್ಡ್‌ ಗಳಿಗೆ ವಿಂಗಡಿಸಿದ್ದಾರೆ. ಕಾಯಂಗಳ ನಿವಾಸಿ ವರದರಾಜ್‌ ಅವರು 17ನೇ ಪಟ್ಲಗಂಡಿ ವಾರ್ಡ್‌ನ ಅಭ್ಯರ್ಥಿಗೆ ಮತ ಚಲಾಯಿಸಿದರೆ ಅವರ ಪತ್ನಿ ಶಾಲಿನಿ ವರದರಾಜ್‌ ಸಹಿತ ಇತರ ಕುಟುಂಬದ ಸದಸ್ಯರು 18ನೇ ಪಟ್ಲಗಂಡಿವಾರ್ಡ್ ನ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಕೆಲವು ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದೆ ಮತದಾನದಿಂದ ವಂಚಿತರಾದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next