Advertisement

ಬಿರುಸುಗೊಂಡ ಮನೆ, ಮನೆ ಮತಯಾಚನೆ

10:45 AM Aug 29, 2018 | |

ಉಳ್ಳಾಲ: ಉಳ್ಳಾಲ ನಗರಸಭೆ ಚುನಾವಣೆಗೆ ಎರಡು ದಿನಗಳು ಬಾಕಿ ಉಳಿದಿದ್ದು, ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬಿದ್ದಿದೆ. ಈ ಬಾರಿಯ ಚುನಾವಣೆಯ ಪ್ರಚಾರದಲ್ಲಿ ಸ್ಥಳೀಯ ನಾಯಕರೇ ತೊಡಗಿಸಿಕೊಂಡಿದ್ದು, ಬಹಿರಂಗ ಪ್ರಚಾರಕ್ಕೆ ಪ್ರಾಮುಖ್ಯತೆ ನೀಡದೆ ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರು ಮನೆ, ಮನೆಗೆ ಭೇಟಿ ನೀಡುವ ಮೂಲಕ ಮತದಾರರ ಓಲೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಪ್ರಮುಖ ಪಕ್ಷವಾದ ಕಾಂಗ್ರೆಸ್‌ನಿಂದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮಂಗಳವಾರ ಧರ್ಮನಗರ ವಾರ್ಡ್‌ ವ್ಯಾಪ್ತಿಯಲ್ಲಿ ಮನೆ, ಮನೆಗೆ ತೆರಳಿ ಮತಯಾಚನೆ ನಡೆಸಿದರೆ, ನಾಯಕರಾದ ರಾಜಶೇಖರ್‌ ಕೋಟ್ಯಾನ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಜಿಲ್ಲಾ ಪಂಚಾಯತ್‌ ಸದಸ್ಯೆ ಮಮತಾ ಗಟ್ಟಿ, ಮರಿಯಮ್ಮ ತೋಮಸ್‌, ಭಾಗವಹಿಸಿದ್ದರು.

ಬಿಜೆಪಿಯಿಂದ ಸಂಸದ ನಳಿನ್‌ ಕುಮಾರ್‌ ಕಟೀಲು, ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೊರತುಪಡಿಸಿದರೆ ಸ್ಥಳೀಯ ನಾಯಕರು ಮನೆ, ಮನೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಜಾತ್ಯಾತೀತ ಜನತಾದಳ, ಸಿಪಿಐಎಂ, ಎಸ್‌ಡಿಪಿಐಯಿಂದ ಸ್ಥಳೀಯ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಮೂಲಸೌಕರ್ಯ ಪ್ರಮುಖ ಅಂಶ
ಕಾಂಗ್ರೆಸ್‌ ಆಡಳಿತವಿರುವ ಉಳ್ಳಾಲ ನಗರಸಭೆಯಲ್ಲಿ ನನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿಯ ವೈಫಲ್ಯತೆ, 24 ಗಂಟೆ ಕುಡಿಯುವ ನೀರಿನ ಭರವಸೆ, ಘನತ್ಯಾಜ್ಯ ನಿರ್ವಹಣೆ ಘಟಕ ಸ್ಥಾಪನೆ, ಒಂಭತ್ತುಕೆರೆಯಲ್ಲಿ ಆಶ್ರಯ ಮನೆಯ ವಿಚಾರವೇ ಪ್ರಮುಖ ಪಕ್ಷಗಳಾದ ಬಿಜೆಪಿ, ಜೆಡಿಎಸ್‌, ಎಸ್‌ಡಿಪಿಐ, ಸಿಪಿಐಎಂನ ಚುನಾವಣಾ ವಿಚಾರವಾಗಿದೆ.

ಕಾರ್ಯಕರ್ತರ ದಂಡು
ಐದು ದಿನಗಳಿಂದ ಇದ್ದ ಚುನಾವಣಾ ಕಾವು ಬಹಿರಂಗ ಪ್ರಚಾರದ ಕೊನೆಯ ದಿನವಾದ ಮಂಗಳವಾರ ಹೆಚ್ಚಾಗಿದ್ದು, ಪ್ರತೀ ವಾರ್ಡ್‌ಗಳಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ ದಂಡು ಮನೆ, ಮನೆಗೆ ತೆರಳಿ ಮತಯಾಚನೆಯಲ್ಲಿ ನಡೆಸಿದರು. ರಾತ್ರಿವರೆಗೂ ಮತ ಯಾಚನೆ ಮುಂದುವರೆದಿದ್ದು, ಯಾವುದೇ ಅಬ್ಬರದ ಪ್ರಚಾರಕ್ಕೆ ಮಹತ್ವ ನೀಡದೆ ಕರಪತ್ರಗಳ ಮೂಲಕ ನೇರವಾಗಿ ಮತದಾರರನ್ನೇ ಸಂಪರ್ಕಿಸುವ ಕಾರ್ಯ ನಡೆಯುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next