ಉಳ್ಳಾಲ: ರಾಜ್ಯ ಕಾಂಗ್ರೆಸ್ ಸರಕಾರ ವಿರುದ್ದ ಮಂಗಳೂರು ಮಂಡಲ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ಪೊಲೀಸ್ ಹಾಗೂ ಕಾರ್ಯಕರ್ತರ ನಡುವಿನ ಮಾತಿನಚಕಮಕಿಯಿಂದ ಕೊನೆಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ ತಡೆಗೆ ಮುಂದಾದ ಬಿಜೆಪಿ ಮಂಗಳೂರು ಮಂಡಲದ ಯುವಮೋರ್ಚ ಅಧ್ಯಕ್ಷ ಮುರಳಿ ಕೊಣಾಜೆ ಅವರನ್ನು ಉಳ್ಳಾಲ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ಹಿಡಿದು ಎಳೆದಾಡಿದ ಪರಿಣಾಮ ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆದಿದೆ.
ರಾಜ್ಯ ಕಾಂಗ್ರೆಸ್ ಸರಕಾರದ ಪೆಟ್ರೋಲ್ ,ಡೀಸೆಲ್ ತೈಲ ಬೆಲೆ ಏರಿಕೆ ನೀತಿಯ ವಿರುದ್ಧ ಬಿಜೆಪಿ ಮಂಗಳೂರು ಮಂಡಲದ ವತಿಯಿಂದ ತೊಕ್ಕೊಟ್ಟು ಜಂಕ್ಷನ್ ಫ್ಲೈಓವರ್ ನಡಿ ಗುರುವಾರ ರಸ್ತೆ ತಡೆ ನಡೆಸಲಾಗಿತ್ತು. ಸಭೆಯಲ್ಲಿ ಬಿಜೆಪಿ ಮುಖಂಡರುಗಳಾದ ಮಾಜಿ ಶಾಸಕ ಜಯರಾಮ ಶೆಟ್ಟಿ, ಸಂತೋಷ್ ರೈ ಬೋಳಿಯಾರ್,ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ದಿನೇಶ್ ಅಮ್ಟೂರು, ಮಹೇಶ್ ಜೋಗಿ , ಮಂಡಲ ಪ್ರಭಾರ ಅಧ್ಯಕ್ಷ ಹೇಮಂತ್ ಶೆಟ್ಟಿ ದೇರಳಕಟ್ಟೆ, ಧನಲಕ್ಷ್ಮೀ ಗಟ್ಟಿ ಸೇರಿದಂತೆ ಮಂಗಳೂರು ಮಂಡಲದ ಮುಖಂಡರು ರಾಜ್ಯ ಸರಕಾರದ ಬೆಲೆಯೇರಿಕೆ ನೀತಿಯ ವಿರುದ್ಧ ಖಂಡನಾ ಭಾಷಣ ಮಾಡಿದ್ದರು.
ಬಳಿಕ ಸೇರಿದ್ದ ಬಿಜೆಪಿ ಕಾರ್ಯಕರ್ತರು ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾದಾಗ ಸ್ಥಳದಲ್ಲಿ ಬಂದೋಬಸ್ತ್ ನಲ್ಲಿದ್ದ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು ತಡೆಹಿಡಿದಿದ್ದಾರೆ. ಮೇಲಾಧಿಕಾರಿಗಳ ಆದೇಶ ಇದ್ದು, ಹೆದ್ದಾರಿ ತಡೆದಲ್ಲಿ ಕಾನೂನು ಕ್ರಮಕೈಗೊಳ್ಳಲು ಆದೇಶವಿರುವುದಾಗಿ ಹೇಳಿದ್ದಾರೆ. ಈ ನಡುವೆ ಮಂಡಲದ ಬಿಜೆಪಿ ಯುವ ಮೋರ್ಚದ ಅಧ್ಯಕ್ಷ ಮುರಳಿ ಕೊಣಾಜೆ ರಾ.ಹೆ ತಡೆಯಲು ರಸ್ತೆಗೆ ಬಂದ ಸಂದರ್ಭದಲ್ಲೇ ಶರ್ಟ್ ನ ಕೋಲಾರ್ ಪಟ್ಟಿಯನ್ನು ಹಿಡಿದ ಠಾಣಾಧಿಕಾರಿ ಬಾಲಕೃಷ್ಣ ಹೆಚ್.ಎನ್ ಹೆದ್ದಾರಿಯಿಂದ ಬದಿಗೆ ಕರೆತಂದರು.
ಇದು ಯುವಮೋರ್ಚಾ ಕಾರ್ಯಕರ್ತರ ಹಾಗೂ ಠಾಣಾಧಿಕಾರಿ ವಿರುದ್ಧ ವಾಗ್ವಾದಕ್ಕೆ ಕಾರಣವಾಯಿತು. ಮುರಳೀ ಠಾಣಾಧಿಕಾರಿ ಅವರನ್ನು ಪ್ರಶ್ನಿಸುತ್ತಿದ್ದಂತೆ ಕಾರ್ಯಕರ್ತರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ಮಧ್ಯ ಪ್ರವೇಶಿಸಿದ ಮಂಗಳೂರು ದಕ್ಷಿಣ ಉಪವಿಭಾಗದ ಪ್ರಬಾರ ಎಸಿಪಿ ರವೀಶ್ ನಾಯ್ಕ್ ಅವರು ಬಿಜೆಪಿ ಪ್ರಮುಖರಲ್ಲಿ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಯುವಮೋರ್ಚಾ ಮುಖಂಡನ ಗತಿ ಹೀಗಾದರೆ , ಇನ್ನು ಕಾರ್ಯಕರ್ತರ ಪಾಡೇನು ಎಂಬುದನ್ನು ಕಾರ್ಯಕರ್ತರು ಮುಖಂಡರನ್ನು ಪ್ರಶ್ನಿಸಿದ್ದಾರೆ.