Advertisement

Ullal ವಿದ್ಯಾರ್ಥಿಗಳ ತಂಡದಲ್ಲಿ ಅನ್ಯಮತೀಯ ಯುವಕ; ತಪ್ಪಿದ ನೈತಿಕ ಪೊಲೀಸ್‌ಗಿರಿ

12:27 AM Dec 26, 2023 | Team Udayavani |

ಉಳ್ಳಾಲ: ಸೋಮೇಶ್ವರ ದೇವಸ್ಥಾನ ಮತ್ತು ಬೀಚ್‌ ಸುತ್ತಿ ಉಳ್ಳಾಲದಲ್ಲಿರುವ ಕಾಲೇಜಿಗೆ ತೆರಳಲು ಬಸ್‌ ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿಗಳ ತಂಡವನ್ನು ಸ್ಥಳೀಯರು ಪ್ರಶ್ನಿಸಿದ್ದು, ವಿದ್ಯಾರ್ಥಿಗಳ ತಂಡದಲ್ಲಿ ಓರ್ವ ಮುಸ್ಲಿಂ ವಿದ್ಯಾರ್ಥಿ ಇದ್ದ ಕಾರಣ ನೈತಿಕ ಪೊಲೀಸ್‌ಗಿರಿಯಾಗುವ ಮೊದಲೇ ಪೊಲೀಸರಿಗೆ ಮಾಹಿತಿ ನೀಡಿ ಪೊಲೀಸರ ವಶಕ್ಕೆ ವಿದ್ಯಾರ್ಥಿಗಳನ್ನು ಒಪ್ಪಿಸಿದ ಘಟನೆ ಸೋಮೇಶ್ವರ ಬಸ್‌ ನಿಲ್ದಾಣದ ಬಳಿ ನಡೆದಿದೆ.

Advertisement

ಉಳ್ಳಾಲದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ತಂಡ ಸೋಮೇಶ್ವರ ದೇವಸ್ಥಾನ ಮತ್ತು ಬೀಚ್‌ಗೆ ಆಗಮಿಸಿದ್ದು, ಸಂಜೆ ಕೆಲವು ವಿದ್ಯಾರ್ಥಿಗಳು ತಮ್ಮ ವಾಹನಗಳಲ್ಲಿ ತೆರಳಿದರೆ, ನಾಲ್ವರು ವಿದ್ಯಾರ್ಥಿನಿಯರು ಮತ್ತು ಮೂವರು ವಿದ್ಯಾರ್ಥಿಗಳು ಬಸ್‌ ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ಸಂದರ್ಭ ವಿದ್ಯಾರ್ಥಿನಿಯೊಂದಿಗೆ ಇದ್ದ ಓರ್ವ ವಿದ್ಯಾರ್ಥಿಯನ್ನು ಪ್ರಶ್ನಿಸಿದಾಗ ಆ ವಿದ್ಯಾರ್ಥಿ ಮುಸ್ಲಿಂ ವಿದ್ಯಾರ್ಥಿ ಎಂದು ತಿಳಿದುಬಂದಿತ್ತು. ಈ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಪೊಲೀಸರಿಗೆೆ ಮಾಹಿತಿ ನೀಡಿದ್ದು, ಕೆಲವೇ ಕ್ಷಣದಲ್ಲಿ ಪೊಲೀಸರು ಆಗಮಿಸಿದ್ದರಿಂದ ನೈತಿಕ ಪೊಲೀಸ್‌ಗಿರಿ ತಪ್ಪಿದಂತಾಗಿದೆ.

ಈ ಕುರಿತು ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಎಚ್‌.ಎನ್‌. ಅವರು ವಿದ್ಯಾರ್ಥಿಗಳ ಹೆತ್ತವರಿಗೆ ಮಾಹಿತಿ ನೀಡಿದಾಗ ಎಲ್ಲ ವಿದ್ಯಾರ್ಥಿಗಳು ಕೇರಳದ ಒಂದೇ ಊರಿನವರಾಗಿದ್ದು, ವಿದ್ಯಾರ್ಥಿಯ ಪರಿಚಯವಿದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಬಿಡಲಾಗಿದ್ದು, ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next