Advertisement

ಉಳ್ಳಾಲ: ದಿನದಿಂದ ದಿನಕ್ಕೆ ಕಡಲಾಳಕ್ಕೆ  ಜಾರುತ್ತಿದೆ ಬಾರ್ಜ್‌

02:40 PM Jun 08, 2017 | Harsha Rao |

ಉಳ್ಳಾಲ: ಉಳ್ಳಾಲದ ಮೊಗವೀರ ಪಟ್ಣದ ಬಳಿ ಸಮುದ್ರದ ನಡುವೆ ಅವಘಡಕ್ಕೆ ಸಿಲುಕಿರುವ ಕಡಲ್ಕೊರೆತ ಕಾಮಗಾರಿಯ ಬಾರ್ಜ್‌ ಸಮುದ್ರದಲ್ಲಿ ಇನ್ನಷ್ಟು ಅಳಕ್ಕೆ ಇಳಿಯುತ್ತಿದ್ದು ಜಲಸಮಾಧಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

Advertisement

ಆಂಧ್ರ ಮೂಲದ “ಧರ್ತಿ’ ಕಂಪೆನಿಗೆ ಸೇರಿದ ಬಾರ್ಜ್‌ ಕಳೆದ ಶನಿವಾರ ಅವಘಡಕ್ಕೀಡಾಗಿತ್ತು. ಶನಿವಾರದಿಂದ ಬುಧವಾರದವರೆಗೆ ಹಂತ ಹಂತವಾಗಿ ಸಮುದ್ರದ ಆಳಕ್ಕೆ ಇಳಿಯುತ್ತಿದ್ದು ಬಾರ್ಜ್‌ನೊಳಗಿನ ಕ್ರೇನ್‌ ಮತ್ತು ಬಾರ್ಜ್‌ನ ಡೆಕ್‌ ಮಾತ್ರ ಗೋಚರಿಸುತ್ತಿದೆ. ತೂಫಾನ್‌ ಬಂದರೆ ಯಾವುದೇ ಕ್ಷಣದಲ್ಲಿ ಬಾರ್ಜ್‌ ಮಗುಚಿ ಬೀಳುವ ಸಾಧ್ಯತೆ ಇದೆ.
ಕಳೆದ ನಾಲ್ಕು ದಿನಗಳಲ್ಲಿ ಪೂರ್ವದ ಕಡೆ ವಾಲಿದ್ದ ಬಾರ್ಜ್‌ ಬುಧವಾರ ಪಶ್ಚಿಮದ ಕಡೆ ವಾಲಿದೆ. ಬಾರ್ಜ್‌ನ ಒಂದು ಬದಿ ರೀಫ್‌ (ತಡೆಗೋಡೆ)ನಲ್ಲಿ ಸಿಲುಕಿಕೊಂಡಿದ್ದು, ಬಾರ್ಜ್‌ ಸಂಪೂರ್ಣ ಮುಳುಗ ದಿರಲು ಇದೂ ಒಂದು ಕಾರಣವಾಗಿದೆ.

ತೈಲ ಸೋರಿಕೆ?: ಬಾರ್ಜ್‌ನಲ್ಲಿ ಮಂಗಳವಾರ ತಡರಾತ್ರಿ ಅಲ್ಪಪ್ರಮಾಣದ ತೈಲ ಸೋರಿಕೆಯಾಗಿದ್ದು, ಪರಿಸರದಲ್ಲಿ ಡೀಸೆಲ್‌ ವಾಸನೆ ಬರುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಬುಧವಾರ ಯಾವುದೇ ವಾಸನೆ ಬರುತ್ತಿರಲಿಲ್ಲ. ಹೆಚ್ಚಾಗಿ ಬಾರ್ಜ್‌ನಲ್ಲಿ ದೊಡ್ಡ ಮಟ್ಟದ ತೈಲ ಸಂಗ್ರಹ ಇರುವುದಿಲ್ಲ ಎನ್ನಲಾಗಿದ್ದು, ವಿಶೇಷವಾಗಿ ಈ ಬಾರ್ಜ್‌ನಲ್ಲಿ ಎರಡು ಮೋಟಾರ್‌ಗಳಿರುವುದರಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವಾಗ ಮಾತ್ರ ಈ ಮೋಟಾರ್‌ಗಳನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.

ಸಾಮಗ್ರಿಗಳು ದಡದತ್ತ
ಕಳೆದ ಎರಡು ದಿನಗಳಿಂದ ಬಾರ್ಜ್‌ನೊಳಗಿದ್ದ ವಸ್ತುಗಳು ಸಮುದ್ರ ಪಾಲಾಗುತ್ತಿದ್ದು, ಲಕ್ಷಾಂತರ ರೂ. ಬೆಲೆ ಬಾಳುವ ವಸ್ತು ಗಳು ಕೇರಳ ಕಡೆ ಸಮುದ್ರದ ಅಲೆ ಗಳೊಂದಿಗೆ ಸಾಗುತ್ತಿದೆ. ಮಂಗಳ ವಾರ ಮೊಗವೀರಪಟ್ಣ ಬಳಿ ದಡಕ್ಕೆ ಬಂದಿರುವ ಕಂಟೈನರನ್ನು ಸಂಸ್ಥೆಯ ಸಿಬಂದಿ ಕ್ರೇನ್‌ ಬಳಸಿ ಎಳೆಯಲು ಯತ್ನಿಸಿ ವಿಫಲರಾದರು.

ಸರ್ವೇ ನಡೆಸಿ ಮರಳಿದ ತಂಡ
ಮುಳುಗಿರುವ ಬಾರ್ಜ್‌ನ ಬಳಿ ಹೋಗಲು ಅಸಾಧ್ಯವಾಗಿದ್ದು ಮಂಗಳವಾರ ತಂಡವೊಂದು ಟಗ್ಗೊಂದರಲ್ಲಿ ದೂರದಲ್ಲಿ ಸುತ್ತು ಹಾಕಿ ತೆರಳಿದೆ ಎಂದು ಮೂಲಗಳು ತಿಳಿಸಿವೆ. ಬಾರ್ಜ್‌ ಮೇಲೆತ್ತುವ ನಿಟ್ಟಿನಲ್ಲಿ ಮುಂಬಯಿ ಮತ್ತು ಸಿಂಗಾ ಪುರ ದಿಂದ ತಜ್ಞರ ತಂಡ ಬಂದಿದ್ದರೂ ಮುಳು ಗಿರುವ ಬಾರ್ಜ್‌ನ ವಿಚಾರದಲ್ಲಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next