ವಾರ್‌ಟೈಮ್ ಲೀಡರ್ ಎಂದೇ ಖ್ಯಾತಿ ಗಳಿಸಿರುವ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್‌ಸ್ಕಿ ಬುಧವಾರ ಅಮೆರಿಕ ಸಂಸತ್‌ನಲ್ಲಿ ಮಾತನಾಡಿದ್ದಾರೆ.
ರಷ್ಯಾ ಆಕ್ರಮಣದ ವಿರುದ್ಧ ಜಾಗತಿಕ ಬೆಂಬಲ ಪಡೆಯುವ ನಿಟ್ಟಿನಲ್ಲಿ ಅವರು ಮಾಡಿರುವ ಭಾಷಣವನ್ನು ಸಂಸತ್‌ನಲ್ಲಿ ನೇರಪ್ರಸಾರ ಮಾಡಲಾಗಿದೆ. ತಮ್ಮ ಭಾಷಣದಲ್ಲಿ ವಿನ್‌ಸ್ಟನ್ ಚರ್ಚಿಲ್, ಹ್ಯಾಮ್ಲೆಟ್ ಹೆಸರನ್ನು ಪ್ರಸ್ತಾವಿಸಿದ ಅವರು, ಜಾಗತಿಕ ಅಭಿಮತದ ಶಕ್ತಿಯು ರಷ್ಯಾವನ್ನು ಹೇಗೆ ತಡೆಯಬಲ್ಲುದು ಎಂಬುದನ್ನು ವಿವರಿಸಿದ್ದಾರೆ.
“ನನಗೆ ಈಗ 45 ವರ್ಷ ವಯಸ್ಸು. ಆದರೆ ನನ್ನ ದೇಶದ 100 ಮಕ್ಕಳು ಕೊನೆಯುಸಿರೆಳೆದಿದ್ದನ್ನು ನೋಡಿದ ಮೇಲೆ ನನಗೆ ಬದುಕುವ ಆಸೆಯೇ ಕಮರಿಹೋಗಿದೆ. ರಷ್ಯಾ ನಡೆಸುತ್ತಿರುವ ದಾಳಿಯು 2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಮತ್ತು ಜಪಾನ್‌ನ ಪರ್ಲ್ಹಾರ್ಬರ್ ಮೇಲೆ ನಡೆಸಿದ ದಾಳಿಗೆ ಸಮನಾಗಿದೆ. ರಷ್ಯಾದ ಆಕ್ರಮಣ ನಿಲ್ಲಬೇಕೆಂದರೆ ಇನ್ನಷ್ಟು ನಿರ್ಬಂಧ ಹೇರಬೇಕು, ಶಾಂತಿ ಮೂಡಬೇಕೆಂದರೆ, ಜವಾಬ್ದಾರಿಯುತ ದೇಶಗಳ ಹೊಸ ಮೈತ್ರಿ ಸೃಷ್ಟಿಯಾಗಬೇಕು.
ಅಮೆರಿಕದ ನಾಯಕ ಬೈಡೆನ್ ಜಗತ್ತಿನ ನಾಯಕರಾಗಿ ಹೊರಹೊಮ್ಮಬೇಕು, ಜಗತ್ತಿನ ಶಾಂತಿಯ ನಾಯಕರಾಗಬೇಕು. ಉಕ್ರೇನ್‌ನ ಆಗಸದಲ್ಲಿ ವಿಮಾನಗಳ ಹಾರಾಟ ನಿರ್ಬಂಧಿಸಬೇಕು’ ಎಂದು ಆಗ್ರಹಿಸಿದ್ದಾರೆ. ಅಮೆರಿಕನ್ನರೇ, ನಾವೂ ನಿಮ್ಮಂತೆ ಮನುಷ್ಯರೇ.
ಭವಿಷ್ಯದ ಬಗ್ಗೆ ನಮಗೂ ನೂರಾರು ಕನಸುಗಳಿವೆ. ಆ ಕನಸುಗಳಿಗೆ ರಷ್ಯಾ ಕೊಳ್ಳಿಯಿಟ್ಟಿದೆ ಎಂದೂ ಝೆಲೆನ್‌ಸ್ಕಿ ನುಡಿದಿದ್ದಾರೆ. ಅವರು ಭಾಷಣ ಮುಗಿಸುತ್ತಿದ್ದಂತೆ, ಸಂಸತ್‌ನಲ್ಲಿದ್ದ ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ ಗೌರವ ಸೂಚಿಸಿದ್ದಾರೆ. ಬಳಿಕ ಮಾತನಾಡಿರುವ ಬೈಡೆನ್, ಉಕ್ರೇನ್‌ಗೆ ದೀರ್ಘ ವ್ಯಾಪ್ತಿಯ ವಿಮಾನನಿಗ್ರಹ ವ್ಯವಸ್ಥೆಯನ್ನು ರವಾನಿಸುವುದಾಗಿ ಘೋಷಿಸಿದ್ದಾರೆ.