ಕೀವ್: ರಷ್ಯಾ ದಾಳಿಯ ವಿರುದ್ಧ ಫೆ.24ರಿಂದ ಈಚೆಗೆ ಹೋರಾಟ ನಡೆಸುತ್ತಿರುವ ಉಕ್ರೇನ್ ಸೇನಾ ಪಡೆಗಳಿಗೆ ಸೋಮವಾರ ಮಹತ್ವದ ಜಯ ಲಭಿಸಿದೆ ಎಂದು ವರದಿಯಾಗಿದೆ.
ಆ ದೇಶದ ದಕ್ಷಿಣ ಭಾಗದಲ್ಲಿ ಇರುವ ಡಿನಿಪ್ರೋ ನದಿ ಗುಂಟ ಇರುವ ರಷ್ಯಾ ಸೇನಾಪಡೆಗಳಿಗೆ ಅಗತ್ಯ ವಸ್ತುಗಳ ಪೂರೈಕೆಗೆ ತಡೆಯೊಡ್ಡಿರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
ಮಾಸ್ಕೋದಲ್ಲಿ ರಷ್ಯಾ ಸರಕಾರ ಕೂಡ ಈ ಬೆಳವಣಿಯನ್ನು ಪುಷ್ಟೀಕರಿಸಿದೆ ಎನ್ನಲಾಗುತ್ತಿದೆ. ರಷ್ಯಾ ಸೇನೆಯ ವಶದಲ್ಲಿ ಇರುವ ಖೇರ್ಸನ್ ಪ್ರದೇಶದಲ್ಲೇ ಈ ಬೆಳವಣಿಗೆ ನಡೆದಿದೆ.
ನದಿಯ ಪಶ್ಚಿಮ ದಂಡೆಯಲ್ಲಿ ರಷ್ಯಾ ಸೇನೆಯ ವಶದಲ್ಲಿ ಇದ್ದ ಗ್ರಾಮಗಳನ್ನು ಉಕ್ರೇನ್ ಸೇನೆ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಜತೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಸೇನೆಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ವ್ಯವಸ್ಥೆಯ ಮೇಲೆ ಕೂಡ ಧಕ್ಕೆ ತರಲಾಗಿದೆ.
ಇತ್ತೀಚೆಗಷ್ಟೇ ಪೂರ್ವ ಭಾಗದಲ್ಲಿ ರಷ್ಯಾ ಸೇನೆಯ ವಿರುದ್ಧ ಉಕ್ರೇನ್ ಸೇನೆ ಮೇಲುಗೈ ಸಾಧಿಸಿತ್ತು.