Advertisement

ಉಕ್ರೇನ್‌: ಸಂಘರ್ಷಗಳ ಸರಮಾಲೆ; ಮೂವತ್ತು ವರ್ಷಗಳ ಹಿಂದೆ ಉದಯಿಸಿದ ರಾಷ್ಟ್ರದ ಕುತೂಹಲ ಐತಿಹ್ಯ

12:03 AM Feb 27, 2022 | Team Udayavani |

ಉಕ್ರೇನ್‌…! ತೀರಾ ನೂರಾರು ವರ್ಷಗಳ ಇತಿಹಾಸವಿರುವ ದೇಶ ಅಲ್ಲವೇ ಅಲ್ಲ. ಈ ದೇಶ ಜನ್ಮ ತಾಳಿದ್ದು ಕೇವಲ 30 ವರ್ಷಗಳ ಹಿಂದೆ.  1991ರಲ್ಲಿ ಸೋವಿಯತ್‌ ಯೂನಿಯನ್‌ ಛಿದ್ರವಾದ ಮೇಲೆ ರಷ್ಯಾದಿಂದ ಸಿಡಿದ ದೇಶವಿದು. ಒಂದು ಕಡೆ ಯೂರೋಪ್‌, ಮತ್ತೊಂದು ಕಡೆ ರಷ್ಯಾ, ಮಗದೊಂದು ಕಡೆ ಕಪ್ಪು ಸಮುದ್ರ ಹಾಗೂ ಮೋಲ್ಡೋವಾ, ರೋಮ್ಯಾನಿಯಾ, ಹಂಗೇರಿ, ಸ್ಲೋವಾಕಿಯಾ, ಪೋಲೆಂಡ್‌ ಮತ್ತು ಬೆಲಾರಸ್‌ ದೇಶಗಳ ಜತೆಯಲ್ಲಿ ಗಡಿ ಹಂಚಿಕೊಂಡಿದೆ.

Advertisement

ಯೂರೋಪ್‌ ಖಂಡದಲ್ಲಿರುವ‌ ಎರಡನೇ ಅತ್ಯಂತ ದೊಡ್ಡ ದೇಶ ಇದು. 6,03,550 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಯೂರೋಪ್‌ ಖಂಡದ ಶೇ.6ರಷ್ಟು ಭಾಗ ಹೊಂದಿದೆ. ಈ ದೇಶದ ಜನಸಂಖ್ಯೆ 4.37 ಕೋಟಿ. ಇದರಲ್ಲಿ ಶೇ.77.8ರಷ್ಟು ಮೂಲ ಉಕ್ರೇನಿಯನ್ನರು ಮತ್ತು ಶೇ.17.3ರಷ್ಟು ಮಂದಿ ರಷ್ಯನ್ನರಿದ್ದಾರೆ. ರಷ್ಯನ್ನರು ರಷ್ಯಾ ಗಡಿಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ರಷ್ಯಾ ಶಸ್ತ್ರಾಸ್ತ್ರಗಳನ್ನು ನೀಡಿ, ಉಕ್ರೇನ್‌ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಉತ್ತೇಜನ ನೀಡುತ್ತಿದೆ ಎಂಬ ಆರೋಪಗಳಿವೆ.

ಜಿಡಿಪಿ ಮತ್ತು ರಾಷ್ಟ್ರೀಯ ತಲಾದಾಯದ ಲೆಕ್ಕಾಚಾರದಲ್ಲಿ ಯೂರೋಪ್‌ನಲ್ಲಿ ಅತ್ಯಂತ ಬಡ ದೇಶವೆಂದರೆ ಉಕ್ರೇನ್‌. ಇಲ್ಲಿ ಕಬ್ಬಿಣದ ಅದಿರು, ಕಲ್ಲಿದ್ದಲು, ಮೆಕ್ಕೆಜೋಳ, ಸೂರ್ಯಕಾಂತಿ ಎಣ್ಣೆ, ಕಬ್ಬಿಣ ಮತ್ತು ಕಬ್ಬಿಣಕ್ಕೆ ಸಂಬಂಧಿಸಿದ ವಸ್ತುಗಳ ಉತ್ಪಾದನೆ ಮತ್ತು ಗೋಧಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.

ತೀರಾ ಹಿಂದೆ ಈಸ್ಟ್‌ ಸ್ಲೇವಿಕ್‌ ಎಂಬ ಫೆಡರೇಶನ್‌ನಲ್ಲಿ ಉಕ್ರೇನ್‌ ಇತ್ತು. ಇದಕ್ಕೆ ಕಿವಿಯನ್‌ ರಸ್‌ ಲ್ಯಾಂಡ್‌ ಎಂದೇ ಕರೆಯಲಾಗುತ್ತಿತ್ತು. ಇದರಲ್ಲಿ ಈಗಿನ ಉಕ್ರೇನ್‌, ರಷ್ಯಾ, ಬೆಲಾರಸ್‌ ಸೇರಿದಂತೆ ಹಲವಾರು ದೇಶಗಳು ಇದರೊಳಗೇ ಇದ್ದವು. 10 ಮತ್ತು 11ನೇ ಶತಮಾನದಲ್ಲಿ ಕಿವಿಯನ್‌ ರಸ್‌ ಅತ್ಯಂತ ದೊಡ್ಡದಾದ ದೇಶ ಮತ್ತು ಬಲಿಷ್ಠ ರಾಷ್ಟ್ರವಾಗಿ ಗುರುತಿಸಿಕೊಂಡಿತ್ತು. ಆಗ ವ್ಲಾದಿಮಿರ್‌ ದಿ ಗ್ರೇಟ್‌ ಎಂಬ ರಾಜ ಆಳ್ವಿಕೆ ನಡೆಸುತ್ತಿದ್ದ. ಇವನ ನಂತರದಲ್ಲಿ ಈ ದೇಶ ಕೊಂಚ ದುರ್ಬಲವಾಗಿ ಕಂಡರೂ, ನಂತರದಲ್ಲಿ ರಷ್ಯಾದ ತ್ಸಾರ್‌ ಸೇನೆ ಜತೆ ಸೇರಿಕೊಂಡಿತ್ತು. ಅಲ್ಲದೆ, ಮೊದಲ ಜಾಗತಿಕ ಯುದ್ಧದಲ್ಲೂ ಪಾಲ್ಗೊಂಡಿತ್ತು.

1917ರಲ್ಲಿ ರಷ್ಯಾ ಕ್ರಾಂತಿ ವೇಳೆ ಉಕ್ರೇನ್‌, ತ್ಸಾರ್‌ ಹಿಡಿತದಿಂದ ಹೊರಗೆ ಬಂದಿತ್ತು. ಆದರೆ, ಮತ್ತೆ ಆಂತರಿಕ ಸಂಘರ್ಷಗಳಾಗಿದ್ದರಿಂದ 1922ರಲ್ಲಿ ಸೋವಿಯತ್‌ ಒಕ್ಕೂಟಕ್ಕೆ ಸೇರ್ಪಡೆಯಾಯಿತು.

Advertisement

1991ರ ಬಳಿಕ…
1991ರಲ್ಲಿ ಯುಎಸ್‌ಎಸ್‌ಆರ್‌ ಪತನಹೊಂದಿದ ಮೇಲೆ ಉಕ್ರೇನ್‌ ಸ್ವತಂತ್ರ ದೇಶವಾಗಿ ಉದಯವಾಯಿತು. ಆಗ ಲಿಯೋನಿಡ್‌ ಕ್ರೇವ್‌ಚುಕ್‌ ಅಧ್ಯಕ್ಷರಾಗಿ ಆಯ್ಕೆಯಾದರು. 1994 ಮತ್ತು 1999ರಲ್ಲಿ ಲಿಯೋನಿಡ್‌ ಕುಚಾ¾ ಚುನಾವಣೆಯಲ್ಲಿ ಗೆದ್ದು ಆಳ್ವಿಕೆ ನಡೆಸಿದರು. 2004ರಲ್ಲಿ ರಷ್ಯಾ ಬಗ್ಗೆ ಸಹಾನುಭೂತಿ ಹೊಂದಿದ್ದ ವಿಕ್ಟರ್‌ ಯೋನುಕೋವಿಚ್‌ ಅಧ್ಯಕ್ಷರಾದರು. ಈ ಚುನಾವಣೆಯಲ್ಲಿ ಅಕ್ರಮಗಳಾಗಿವೆ ಎಂಬ ಆರೋಪದ ಮೇಲೆ ಭಾರೀ ಪ್ರಮಾಣದ ಪ್ರತಿಭಟನೆಗಳಾದ್ದವು. ಮರು ಎಣಿಕೆ ಮಾಡಿದ ಮೇಲೂ ವಿಕ್ಟರ್‌ ಅವರೇ ಅಧ್ಯಕ್ಷರಾಗಿ ಆಯ್ಕೆಯಾದರು. ಇವರು ಉಕ್ರೇನ್‌ ಅನ್ನು ರಷ್ಯಾ ಹಿಡಿತದಿಂದ ಹೊರತಂದು, ನ್ಯಾಟೋ ಮತ್ತು ಐರೋಪ್ಯ ಒಕ್ಕೂಟಕ್ಕೆ ಸೇರುವ ಬಗ್ಗೆ ಭರವಸೆ ನೀಡಿದ್ದರು.

2008ರಲ್ಲಿ ನ್ಯಾಟೋ ಕೂಡ ಒಂದಲ್ಲ ಒಂದು ದಿನ ಉಕ್ರೇನ್‌ ಅನ್ನು ಸೇರಿಸಿಕೊಳ್ಳುವುದಾಗಿ ಹೇಳಿತ್ತು. ಆದರೆ, 2013ರಲ್ಲಿ ಐರೋಪ್ಯ ಒಕ್ಕೂಟದ ಜತೆ ಇದ್ದ ಸಂಬಂಧವನ್ನು ಕಡಿದುಕೊಂಡ ಯೋನುಕೋವಿಚ್‌, ರಷ್ಯಾ ಜತೆಗೆ ಮತ್ತೆ ವ್ಯಾಪಾರ ಸಂಬಂಧವನ್ನು ಹೆಚ್ಚಿಸಿಕೊಳ್ಳುವುದಾಗಿ ಹೇಳಿದರು. 2014ರಲ್ಲಿ ಇದನ್ನು ವಿರೋಧಿಸಿ ಭಾರೀ ಪ್ರಮಾಣದ ಪ್ರತಿಭಟನೆಗಳಾದವು. ಆಗ ಪೊಲೀಸರ ಗುಂಡಿಗೆ ಹಲವಾರು ಮಂದಿ ಸಾವನ್ನಪ್ಪಿದರು.

2014ರಲ್ಲಿ ಉಕ್ರೇನ್‌ ಪಾರ್ಲಿಮೆಂಟ್‌, ಯೋನುಕೋವಿಚ್‌ರನ್ನು ತೆಗೆದುಹಾಕಲು ನಿರ್ಧರಿಸಿತು. ಇವರು ದೇಶ ಬಿಟ್ಟು ಓಡಿಹೋದರು. ಅದೇ ಹೊತ್ತಿಗೆ ಉಕ್ರೇನ್‌ನ ಡಾನ್‌ಬಾಸ್‌ ಪ್ರದೇಶದ ಕ್ರಿಮಿಯಾದಲ್ಲಿ ಸಶಸ್ತ್ರಧಾರಿ ಪ್ರತ್ಯೇಕ ತಾವಾದಿಗಳು ರಷ್ಯಾ ಧ್ವಜ ಹಾರಿಸಿದರು. ರಷ್ಯಾ ಕ್ರಿಮಿಯಾವನ್ನು ತನ್ನೊಳಗೆ ಸೇರಿಸಿಕೊಳ್ಳಲು ನಿರ್ಧರಿಸಿತು.

ಅದೇ ಹೊತ್ತಿಗೆ ಡಾನ್‌ಬಾಸ್‌ ಪ್ರದೇಶದ ಉಳಿದ ಭಾಗಗಳು ತಾವು ಸ್ವತಂತ್ರ ಎಂದು ಘೋಷಿಸಿಕೊಂಡವು. ಆಗಿನಿಂದಲೂ ಉಕ್ರೇನ್‌ನಲ್ಲಿ ಸಂಘರ್ಷ ನಡೆಯುತ್ತಲೇ ಇದೆ. ಇದೇ ಕಾರಣಕ್ಕಾಗಿ ಉಕ್ರೇನ್‌, ಐರೋಪ್ಯ ಒಕ್ಕೂಟದ ಜತೆ ಉತ್ತಮ ಸಂಬಂಧ ಮತ್ತು ನ್ಯಾಟೋಗೆ ಸೇರಲು ಹವಣಿಸುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿಯೇ ರಷ್ಯಾ ಭಾರೀ ಪ್ರಮಾಣದ ಪ್ರಯತ್ನ ನಡೆಸಿತ್ತು.

ಅಲ್ಲದೆ, ಈಗಾಗಲೇ ಸತತ ಸಂಘರ್ಷಗಳಿಂದಾಗಿ ಉಕ್ರೇನ್‌ನ ಹಣಕಾಸು ಸ್ಥಿತಿ ಹದಗೆಟ್ಟು ಹೋಗಿದೆ. ಐಎಂಎಫ್ ಕೂಡ ಸಾಲ ನೀಡಿ, ಆರ್ಥಿಕ ಪುನಶ್ಚೇತನಕ್ಕೆ ಪ್ರಯತ್ನಿಸಿದೆ. ಇದರ ನಡುವೆಯೇ ಈಗ ರಷ್ಯಾ ದಾಳಿ ಮಾಡಿ ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಿದೆ.

ಇದರ ನಡುವೆಯೇ, 2014ರಲ್ಲಿ ಆಮ್‌ಸ್ಟರ್‌ಡಂನಿಂದ ಕೌಲಾಲಂಪುರಕ್ಕೆ ತೆರಳುತ್ತಿದ್ದ ನಾಗರಿಕ ವಿಮಾನ ವೊಂದನ್ನು ಕ್ಷಿಪಣಿಯೊಂದು ಹೊಡೆದುಹಾಕಿತ್ತು. ಈ ವೇಳೆ 298 ಮಂದಿ ಸಾವನ್ನಪ್ಪಿದ್ದರು. ಇದನ್ನು ಉಕ್ರೇನ್‌ನ ಸೇನೆ ಹೊಡೆದುಹಾಕಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ, ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಇದನ್ನು ಹೊಡೆದುಹಾಕಿದ್ದಾರೆ ಎಂದು ಆರೋಪಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next