ಉಕ್ರೇನ್ ಮೇಲಿನ ರಷ್ಯಾ ದಾಳಿ ಆರಂಭವಾಗಿ ಆಗಲೇ 44 ದಿನಗಳು ಮುಗಿದಿವೆ. ಇನ್ನೂ ರಷ್ಯಾ ರಣಕೇಕೆ ನಿಂತಿಲ್ಲ. ಈ ಮಧ್ಯೆ ಶುಕ್ರವಾರ ಕ್ರಮಟೋಸ್ಕ್ನ ರೈಲ್ವೇ ನಿಲ್ದಾಣವೊಂದರ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, 39ಕ್ಕೂ ಹೆಚ್ಚು ಮಂದಿ ಮೃತರಾಗಿದ್ದಾರೆ. ಇದರಲ್ಲಿ ಮಕ್ಕಳೂ ಸೇರಿದ್ದಾರೆ ಎಂಬುದು ನೋವಿನ ಸಂಗತಿ. ಇಡೀ ಜಗತ್ತೇ ರಷ್ಯಾ ವಿರುದ್ಧ ತಿರುಗಿಬಿದ್ದಿದ್ದರೂ ಇಲ್ಲಿವರೆಗೆ ಏಕೆ ಯುದ್ಧ ನಿಲ್ಲಿಸಿಲ್ಲ ಎಂಬುದೇ ಯಾರಿಗೂ ಅರ್ಥವಾಗದ ಸಂಗತಿಯಾಗಿದೆ. ಈಗಾಗಲೇ ಉಕ್ರೇನ್, ತಾನು ನ್ಯಾಟೋಗೆ ಸೇರ್ಪಡೆಯಾಗಲ್ಲ ಎಂದು ಖಚಿತವಾಗಿಯೇ ಹೇಳಿದೆ. ಇದೇ ವಿಷಯ ಇರಿಸಿಕೊಂಡು ಯುದ್ಧ ಸಾರಿರುವ ರಷ್ಯಾ, ಉಕ್ರೇನ್‌ನ ಭರವಸೆ ಬಳಿಕವೂ ಯುದ್ಧ ನಿಲ್ಲಿಸುವ ಮಾತು ಆಡುತ್ತಿಲ್ಲ. ಆರಂಭದ ದಿನಗಳಲ್ಲಿ ಕಟ್ಟಡಗಳು, ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದ ರಷ್ಯಾ, ಈಗ ಮನುಷ್ಯರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ಮೂಲಕ ನೇರವಾಗಿಯೇ ನರಮೇಧಕ್ಕೂ ಕೈಹಾಕಿದೆ.
ಶುಕ್ರವಾರ ರೈಲ್ವೇ ನಿಲ್ದಾಣದ ಮೇಲೆ ನಡೆದ ಕ್ಷಿಪಣಿ ದಾಳಿಯೂ ನರಮೇಧಕ್ಕೆ ಪೂರಕವಾದದ್ದೇ. ಯಾರ ತಂಟೆಗೂ ಹೋಗದೇ, ತಮ್ಮ ಪಾಡಿಗೆ ರೈಲು ಹತ್ತಲು ಬಂದಿದ್ದ ಜನರು, ರಷ್ಯಾ ಕ್ಷಿಪಣಿಯ ಆರ್ಭಟಕ್ಕೆ ನಲುಗಿಹೋಗಿದ್ದಾರೆ. ಕ್ರಮಟೋಸ್ಕ್ನ ಸುತ್ತಲಿನ ಪ್ರದೇಶಗಳಂತೂ ನರಕಸದೃಶವಾದಂತೆ ಕಾಣಿಸುತ್ತಿವೆ.
ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾವನ್ನು ಯಾರೊಬ್ಬರೂ ಸಮರ್ಥಿಸಿಕೊಳ್ಳಲು ತಯಾರಿಲ್ಲ. ವಿಶ್ವಸಂಸ್ಥೆಯಲ್ಲಿ ಭಾರತ, ರಷ್ಯಾ ವಿರುದ್ಧವಾಗಿ ಮತ ಹಾಕದೇ ಇದ್ದರೂ ಗೈರು ಹಾಜರಾಗಿ ರಷ್ಯಾ ಪರ ನಿಂತುಕೊಂಡಿಲ್ಲ ಎಂಬ ಸಂದೇಶವನ್ನು ಅಂತಾರಾಷ್ಟ್ರೀಯ ಸಮುದಾಯಕ್ಕೆ ರವಾನಿಸಿದೆ. ಜತೆಗೆ ಇತ್ತೀಚಿನ ನರಮೇಧಗಳನ್ನು ತೀವ್ರವಾಗಿ ವಿರೋಧಿಸಿದ್ದು, ಸ್ವತಂತ್ರ ತನಿಖೆಯಾಗಬೇಕು ಎಂದೂ ಭಾರತ ಒತ್ತಾಯಿಸಿದೆ.
ಯುದ್ಧ ಆರಂಭವಾದಾಗಿನಿಂದ ರಷ್ಯಾದ ಮೇಲೆ ಅಂತಾರಾಷ್ಟ್ರೀಯ ಸಮುದಾಯ ಒಂದಲ್ಲ ಒಂದು ರೀತಿ, ದಿಗ್ಬಂಧನ ವಿಧಿಸಿಕೊಂಡೇ ಬರುತ್ತಿದೆ. ಆದರೆ ರಷ್ಯಾ ಇದ್ಯಾವುದಕ್ಕೂ ಬಗ್ಗಿಲ್ಲ. ಆದರೆ ಭಾರೀ ದೊಡ್ಡ ಬೆಳವಣಿಗೆ ಎಂಬಂತೆ, ಗುರುವಾರ ರಾತ್ರಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಹೊರದಬ್ಬಲಾಗಿದೆ. ಇದುವರೆಗಿನ ಎಲ್ಲ ನಿರ್ಧಾರಗಳಿಗಿಂತ ಇದು ಅತೀದೊಡ್ಡ ತೀರ್ಮಾನ ಎಂಬುದು ವಿಶೇಷ. ಸದ್ಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯ ಸ್ಥಾನದಿಂದ ರಷ್ಯಾವನ್ನು ಹೊರಹಾಕುವುದು ಅಷ್ಟು ಸಲೀಸಲ್ಲ. ಇದಕ್ಕೆ ಕಾರಣ ರಷ್ಯಾ ಹೊಂದಿರುವ ಖಾಯಂ ಸದಸ್ಯ ಸ್ಥಾನ ಮತ್ತು ವಿಟೋ ಅಧಿಕಾರ. ಹೀಗಾಗಿ ಭದ್ರತಾ ಮಂಡಳಿಯಲ್ಲಿ ತೆಗೆದುಕೊಳ್ಳಲಾಗದ ಕ್ರಮಗಳನ್ನು ಬೇರೆ ಕಡೆಗಳಲ್ಲಿ ತೆಗೆದುಕೊಳ್ಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಉಕ್ರೇನ್ ಮೇಲಿನ ದಾಳಿಯನ್ನು ಗಮನಿಸಿದರೆ, ರಷ್ಯಾ ಅಸಹನೆಯಿಂದ ವರ್ತಿಸುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕಾರಣ, ಈ ಯುದ್ಧದಲ್ಲಿ ರಷ್ಯಾಗೆ ಆಗಿರುವ ಹಿನ್ನಡೆ. ತನ್ನ ಕಡೆಯ ಸಾವಿರಾರು ಸೈನಿಕರನ್ನು ಕಳೆದುಕೊಂಡಿರುವ ರಷ್ಯಾ ಸೇಡು ತೀರಿಸಿಕೊಳ್ಳುವಂತೆ ನಾಗರಿಕರ ಮೇಲೆ ಅಮಾನುಷವಾಗಿ ದಾಳಿ ನಡೆಸುತ್ತಿದೆ. ರಷ್ಯಾದ ಈ ವರ್ತನೆಯನ್ನು ನಾಗರಿಕ ಸಮಾಜ ಒಪ್ಪಲು ಸಾಧ್ಯವೇ ಇಲ್ಲ. ಇದಕ್ಕಿಂತ ಪ್ರಮುಖವಾಗಿ ಮೊದಲು ಈ ಯುದ್ಧ ನಿಲ್ಲಿಸಲು ಜಗತ್ತಿನ ಎಲ್ಲ ದೇಶಗಳು ಒಂದಾಗಬೇಕಾದ ಅನಿವಾರ್ಯತೆಯೂ ಇದೆ.