Advertisement

ಕೀವ್‌ಗೂ ಲಗ್ಗೆ ಇಟ್ಟ ರಷ್ಯಾ; ಉಕ್ರೇನ್‌ನ ರಾಜಧಾನಿ ಸ್ವಾಧೀನಕ್ಕೆ ಯತ್ನ

12:57 AM Feb 26, 2022 | Team Udayavani |

ಕೀವ್‌/ಮಾಸ್ಕೋ: ಉಕ್ರೇನ್‌ನ ಸೇನಾ ನೆಲೆ, ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಗುರುವಾರ ಯುದ್ಧಕ್ಕೆ ಮುನ್ನುಡಿ ಬರೆದಿದ್ದ ರಷ್ಯಾ, ಎರಡನೇ ದಿನವಾದ ಶುಕ್ರವಾರ ರಾಜಧಾನಿ ಕೀವ್‌ಗೆ ಲಗ್ಗೆಯಿಟ್ಟಿದೆ.

Advertisement

ಗುರುವಾರ ತಡರಾತ್ರಿಯೇ ರಷ್ಯಾ ಪಡೆಗಳು ಚೆರ್ನೋಬಿಲ್‌ ಅಣುಸ್ಥಾವರವನ್ನು ತಮ್ಮ ವಶಕ್ಕೆ ಪಡೆದಿದ್ದವು. ಇದರ ಬೆನ್ನಲ್ಲೇ ಶುಕ್ರವಾರ ಬೆಳ್ಳಂಬೆಳಗ್ಗೆ ಕೀವ್‌ನತ್ತ ಶೆಲ್‌, ಕ್ಷಿಪಣಿಗಳು ತೂರಿಬಂದಿದ್ದು, ಉಕ್ರೇನ್‌ ರಾಜಧಾನಿಯನ್ನು ಸುಪರ್ದಿಗೆ ಪಡೆಯಲು ಎಲ್ಲ ರೀತಿಯ ಪ್ರಯತ್ನಗಳನ್ನೂ ರಷ್ಯಾ ನಡೆಸಿದೆ. ಮೊದಲಿಗೆ ಕೀವ್‌ಗೆ ಸಂಪರ್ಕ ಕಲ್ಪಿಸುವ ಸೇತುವೆಯನ್ನೇ ರಷ್ಯಾ ಸ್ಫೋಟಿಸಿದೆ. ನಂತರ ಉತ್ತರ ಕೀವ್‌ನ ಒಬೊಲಾನ್‌ ಜಿಲ್ಲೆಯ ಮೂಲಕ ಸೈನಿಕರು ನುಗ್ಗಿದ್ದಾರೆ. ಮುನ್ನುಗ್ಗಿ ಬರುತ್ತಿರುವ ಪುಟಿನ್‌ ಸೈನಿಕರನ್ನು ತಡೆಯಲು ಉಕ್ರೇನ್‌ ಸೈನಿಕರು ಹರಸಾಹಸ ಪಡುತ್ತಿದ್ದು, ಕೀವ್‌ ಹೊರವಲಯದಲ್ಲಿ ಭಾರೀ ಕಾಳಗವೇ ನಡೆದಿದೆ.

ಕೀವ್‌ ಹೊರವಲಯದಲ್ಲಿರುವ ವ್ಯೂಹಾತ್ಮಕ ಹೋಸ್ಟೋಮೆಲ್‌ ಏರೋಡ್ರೋಮ್‌ ಕೂಡ ರಷ್ಯಾ ವಶವಾಗಿದೆ. ಕೀವ್‌ ಹೆದ್ದಾರಿಯುದ್ದಕ್ಕೂ ನಿಂತಿರುವ ಉಕ್ರೇನ್‌ ಸೈನಿಕರು, ನಗರದೊಳಕ್ಕೆ ನುಗ್ಗಿರುವ ರಷ್ಯಾ ಪಡೆಯನ್ನು ಎದುರಿಸಲು ಸನ್ನದ್ಧವಾಗಿದ್ದಾರೆ. ರಾಜಧಾನಿಯ ನಿವಾಸಿಗಳು ಕ್ಷಿಪಣಿ ಹಾಗೂ ಬಾಂಬುಗಳ ಸದ್ದಿನೊಂದಿಗೇ ಭಯಾನಕ ರಾತ್ರಿಯನ್ನು ಕಳೆದಿದ್ದಾರೆ.

ಸೇನಾಬಲವನ್ನು ಕುಗ್ಗಿಸುವುದಷ್ಟೇ ನಮ್ಮ ಗುರಿ ಎಂದು ಹೇಳಿದ್ದ ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಈಗ ಉಕ್ರೇನ್‌ನ ಒಂದೊಂದೇ ನಗರಕ್ಕೆ ಲಗ್ಗೆಯಿಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜಧಾನಿ ಕೀವ್‌ ಅನ್ನು ವಶಪಡಿಸಿಕೊಂಡರೆ, ಸಿಕೋರ್‌ಸ್ಕೈ ಅಥವಾ ಬೋರಿಸ್ಪಿಲ್‌ನಂತಹ ಪ್ರಮುಖ ಏರ್‌ಪೋರ್ಟ್‌ಗಳು ರಷ್ಯಾ ಹಿಡಿತಕ್ಕೆ ಸಿಗಲಿವೆ. ಆಗ ಆ ವಿಮಾನನಿಲ್ದಾಣಗಳಿಗೆ ರಷ್ಯಾದಿಂದ ಸುಮಾರು 10 ಸಾವಿರ ಪ್ಯಾರಾಟ್ರೂಪರ್‌ಗಳನ್ನು ಕರೆಸಿಕೊಂಡು, ಕೀವ್‌ ಅನ್ನು ಹಿಡಿತಕ್ಕೆ ಪಡೆಯುವುದು ರಷ್ಯಾದ ಉದ್ದೇಶ ಎಂದು ಹೇಳಲಾಗಿದೆ.

ಒಂದು ಬಾರಿ ಪ್ಯಾರಾಟ್ರೂಪರ್‌ಗಳು ರಾಜಧಾನಿಗೆ ಪ್ರವೇಶ ಪಡೆದರೆ, ಉಕ್ರೇನ್‌ ಅಧ್ಯಕ್ಷ ಝೆಲೆನ್‌ಸ್ಕಿ, ಅವರ ಸಂಪುಟದ ಸಚಿವರು, ಸಂಸದರನ್ನು ಬಂಧಿಸಿ, ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದು, ಆ ಮೂಲಕ ಮತ್ತೆ ಉಕ್ರೇನ್‌ ಅನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ರಷ್ಯಾದ ಯೋಜನೆಯಾಗಿದೆ.

Advertisement

ಕಾಲುವೆ ವಶಕ್ಕೆ:
ಇನ್ನೊಂದೆಡೆ, ಉಕ್ರೇನ್‌ನಲ್ಲಿನ ಪ್ರಮುಖ ಕಾಲುವೆಯನ್ನು ರಷ್ಯಾ ಪಡೆಗಳು ಸುಪರ್ದಿಗೆ ಪಡೆದಿವೆ. ಮಾಸ್ಕೋ ಆಕ್ರಮಿತ ಕ್ರಿಮಿಯಾದಲ್ಲಿ ಕಳೆದ 8 ವರ್ಷಗಳಿಂದಲೂ ನೀರಿಗೆ ಭಾರೀ ಅಭಾವ ತಲೆದೋರಿದ್ದು, ಈ ಕಾಲುವೆಯ ಮೂಲಕ ಅಲ್ಲಿನ ಜನರಿಗೆ ನೀರು ಪೂರೈಸಲಾಗುವುದು ಎಂದು ರಷ್ಯಾ ಹೇಳಿದೆ. 2014ರವರೆಗೂ ಕ್ರಿಮಿಯಾಗೆ ಇದೇ ಕಾಲುವೆ ಮೂಲಕ ಉಕ್ರೇನ್‌ ನೈಪರ್‌ ನದಿಯಿಂದ ನೀರು ಪೂರೈಸಲಾಗುತ್ತಿತ್ತು. ಆದರೆ, ಯಾವಾಗ ರಷ್ಯಾವು ಕ್ರಿಮಿಯಾವನ್ನು ಆಕ್ರಮಿಸಿಕೊಂಡಿತೋ, ಆಗ ಉಕ್ರೇನ್‌ ಸರ್ಕಾರವು ನೀರು ಪೂರೈಕೆಯನ್ನು ಬಂದ್‌ ಮಾಡಿತ್ತು.

ಪೆಟ್ರೋಲ್‌ ಬಾಂಬ್‌ ಬಳಸಿ:
ರಷ್ಯಾ ಪಡೆ ನುಗ್ಗುತ್ತಿರುವಂತೆಯೇ ನಾಗರಿಕರಿಗೆ ಸಂದೇಶ ರವಾನಿಸಿರುವ ಉಕ್ರೇನ್‌ ರಕ್ಷಣಾ ಇಲಾಖೆ, “ರಷ್ಯಾ ಸೈನಿಕರ ಚಲನವಲನಗಳ ಬಗ್ಗೆ ನಮಗೆ ಮಾಹಿತಿ ನೀಡಿ, ಪೆಟ್ರೋಲ್‌ ಬಾಂಬ್‌ (ಮೊಲೋಟೋವ್‌ ಕಾಕ್‌ಟೈಲ್‌) ಎಸೆಯುವ ಮೂಲಕ ಸೈನಿಕರನ್ನು ಹಿಮ್ಮೆಟ್ಟಿಸಿ’ ಎಂದು ಸೂಚಿಸಿದೆ. ಶುಕ್ರವಾರ ಬೆಳಗ್ಗೆ ಕೀವ್‌ನ ಆಗಸದಲ್ಲಿ ಹಾರುತ್ತಿದ್ದ ಶತ್ರು ವಿಮಾನವನ್ನು ಉಕ್ರೇನ್‌ ಪಡೆಗಳು ಹೊಡೆದುರುಳಿಸಿವೆ. ಆ ವಿಮಾನವು ವಸತಿ ಕಟ್ಟಡವೊಂದರ ಮೇಲೆ ಬಿದ್ದು, ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದೆ.

ಮಾತುಕತೆಗೆ ರೆಡಿ, ಆದರೆ!
ಮಾತುಕತೆ ಮೂಲಕ ರಷ್ಯಾದ ಆಕ್ರಮಣಕ್ಕೆ ಅಂತ್ಯಹಾಡುವುದಾದರೆ ಅದಕ್ಕೆ ನಾವು ಸಿದ್ಧರಿದ್ದೇವೆ. ಆದರೆ, ನಮಗೆ ಭದ್ರತೆಯ ಖಚಿತತೆ ನೀಡಬೇಕು ಎಂದು ಉಕ್ರೇನ್‌ ಅಧ್ಯಕ್ಷ ವೋಲೋಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಷ್ಯಾ ವಿದೇಶಾಂಗ ಸಚಿವ ಸರ್ಗಿ ಲವರೋವ್‌, “ಉಕ್ರೇನ್‌ನ ಸೇನೆಯು ಶಸ್ತ್ರವನ್ನು ತ್ಯಜಿಸಿದರೆ, ನಾವು ಉಕ್ರೇನ್‌ ಜೊತೆ ಸಂಧಾನ ಮಾತುಕತೆಗೆ ಸಿದ್ಧರಿದ್ದೇವೆ’ ಎಂದು ಹೇಳಿದ್ದಾರೆ. ಇದೇ ವೇಳೆ, ರಷ್ಯಾ ಸೇನಾ ಕಾರ್ಯಾಚರಣೆಗೆ ಸಂಬಂಧಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಿರ್ಣಯ ಕೈಗೊಳ್ಳುವ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದ್ದು, ಅಲ್ಲಿ ಭಾರತವು ನಮ್ಮ ಬೆಂಬಲಕ್ಕೆ ನಿಲ್ಲಲಿದೆ ಎನ್ನುವ ನಿರೀಕ್ಷೆಯಿದೆ ಎಂದೂ ರಷ್ಯಾ ಹೇಳಿದೆ.

137+1,000 ಸಾವು
ಯುದ್ಧ ಆರಂಭವಾದ ಎರಡೇ ದಿನದಲ್ಲಿ ಉಕ್ರೇನ್‌ನ 137 ಮಂದಿ ನಾಗರಿಕರು ಮತ್ತು ಸೈನಿಕರು ಹತರಾಗಿದ್ದಾರೆ. ಉಕ್ರೇನ್‌ ಅಧ್ಯಕ್ಷ ವೋಲೋಡಿಮಿರ್‌ ಝೆಲೆನ್‌ಸ್ಕಿ ಅವರೇ ಈ ಮಾಹಿತಿ ನೀಡಿದ್ದಾರೆ. ಕೇವಲ ಸೇನಾ ಟಾರ್ಗೆಟ್‌ಗಳ ಮೇಲೆ ದಾಳಿ ಮಾಡುತ್ತೇವೆ ಎಂದು ಹೇಳಿದ್ದ ರಷ್ಯಾ, ನಮ್ಮ ನಾಗರಿಕರ ಹತ್ಯೆಯಲ್ಲೂ ತೊಡಗಿದೆ ಎಂದೂ ಅವರು ಆರೋಪಿಸಿದ್ದಾರೆ. ಜತೆಗೆ, ಉಕ್ರೇನ್‌ ಸೇನೆ ನಡೆಸಿರುವ ಪ್ರತಿದಾಳಿಗೆ ರಷ್ಯಾದ 1,000 ಸೈನಿಕರು ಮೃತಪಟ್ಟಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಮತ್ತಷ್ಟು ಆರ್ಥಿಕ ದಿಗ್ಬಂಧನ
ಉಕ್ರೇನ್‌ ಮೇಲೆ ಯುದ್ಧ ಸಾರುವ ಮೂಲಕ ರಷ್ಯಾವು ಭಾರೀ ಪ್ರಮಾಣದ ದಿಗ್ಬಂಧನವನ್ನು ಎದುರಿಸುವಂತಾಗಿದೆ. ಗುರುವಾರ ರಾತ್ರೋರಾತ್ರಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ರಷ್ಯಾದ ನಾಲ್ಕು ಪ್ರಮುಖ ಬ್ಯಾಂಕುಗಳಿಗೆ ಆರ್ಥಿಕ ದಿಗ್ಬಂಧನ ಹೇರಿ ಆದೇಶ ಹೊರಡಿಸಿದ್ದಾರೆ. ಕೆಲವು ಪ್ರಮುಖ ಬಿಡಿಭಾಗಗಳ ರಫ್ತಿಗೂ ನಿರ್ಬಂಧ ಹೇರಲಾಗಿದ್ದು, ಇದರಿಂದ ರಷ್ಯಾದ ಹೈಟೆಕ್‌ ಆಮದಿನ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಜಪಾನ್‌ ಕೂಡ ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೇರಿವೆ. ಯುಕೆ ಕೂಡ ರಷ್ಯಾ ಬ್ಯಾಂಕ್‌ನ ಆಸ್ತಿ ಸ್ತಂಭನ, ರಫ್ತಿನ ಮೇಲೆ ನಿರ್ಬಂಧ, ಬ್ಯಾಂಕುಗಳ ಮೊತ್ತಕ್ಕೆ ಮಿತಿ, ಪ್ರಮುಖ ಕಂಪನಿಗಳಿಗೆ ದಿಗ್ಬಂಧನ ವಿಧಿಸಿದೆ. ಈ ಹಿನ್ನೆಲೆಯಲ್ಲಿ ಯುಕೆ ವಿರುದ್ಧ ಕಿಡಿಕಾರಿರುವ ರಷ್ಯಾವು, ಅದಕ್ಕೆ ಪ್ರತಿಯಾಗಿ ಶುಕ್ರವಾರದಿಂದಲೇ ಅನ್ವಯವಾಗುವಂತೆ ಯುಕೆಯಿಂದ ರಷ್ಯಾಗೆ ಬರುವ ಎಲ್ಲ ವಿಮಾನಗಳನ್ನೂ ನಿಷೇಧಿಸಿದೆ.

ನಾವೀಗ ಏಕಾಂಗಿಯಾಗಿದ್ದೇವೆ. ಯಾರೊಬ್ಬರೂ ನಮ್ಮೊಂದಿಗೆ ನಿಲ್ಲುತ್ತಿಲ್ಲ. ಇಂದು ನೀವು ನಮ್ಮ ಸಹಾಯಕ್ಕೆ ಬರದಿದ್ದರೆ, ನಾಳೆ ಯುದ್ಧವು ನಿಮ್ಮ ಬಾಗಿಲನ್ನು ತಟ್ಟಲಿದೆ.
– ವೋಲೋಡಿಮಿರ್‌ ಝೆಲೆನ್‌ಸ್ಕಿ, ಉಕ್ರೇನ್‌ ಅಧ್ಯಕ್ಷ

ಶೆಲ್‌ ಶಬ್ದ ಬಿಟ್ಟು ಏನೂ ಗೊತ್ತಾಗುತ್ತಿಲ್ಲ
ಹೊರಗಿನಿಂದ ನಿರಂತರ ಶೆಲ್‌ ದಾಳಿಯ ಶಬ್ದ ಕೇಳಿಸುತ್ತಿದೆ. ಅಲ್ಲಿ ಏನಾಗು ತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ನಾವು ಕಾಲೇಜು ಕಟ್ಟಡದ ಬಂಕರ್‌ನಲ್ಲಿ ಸುರಕ್ಷಿತ ವಾಗಿದ್ದೇವೆ. ಕಾಲೇಜಿ ನಿಂದಲೇ ಆಹಾರ ಒದಗಿಸ ಲಾಗು ತ್ತಿದೆ. ಪ್ರತಿ ಕ್ಷಣವನ್ನೂ ಭಯದಿಂದಲೇ ಕಳೆಯುತ್ತಿದ್ದೇವೆ.

ಇದು ಉಕ್ರೇನ್‌ನಲ್ಲಿ ವೈದ್ಯ ಶಿಕ್ಷಣಕ್ಕೆ ಹೋಗಿ ಯುದ್ಧ ಪೀಡಿತ ಖಾರ್ಕಿವ್‌ನಲ್ಲಿ ಸಿಲುಕಿರುವ ಜಮಖಂಡಿ ತೊದಲಬಾಗಿಯ ರೋಹಿತ್‌ ಅವರ ಮಾತು.

ಗುರುವಾರದಿಂದ ಸುಮಾರು 200 ವಿದ್ಯಾರ್ಥಿಗಳು ಬಂಕರ್‌ನಲ್ಲಿದ್ದೇವೆ. ಹೊರಗಡೆ ಅಂಗಡಿ, ಎಟಿಎಂ ಸಹಿತ ಎಲ್ಲವೂ ಮುಚ್ಚಿವೆ. ಸದ್ಯ ಸಾಮಾಜಿಕ ಜಾಲತಾಣ ಮಾತ್ರ ನಮಗೆ ಮಾಹಿತಿಯ ಮೂಲ. ಖಾರ್ಕಿವ್‌ನಲ್ಲಿ ಕರ್ನಾಟಕದ 700 ಮಂದಿ ಇದ್ದಾರೆ. ನಮ್ಮ ಕಾಲೇಜಿನಲ್ಲೇ 80 ಮಂದಿ ಇದ್ದಾರೆ. ಇದುವರೆಗೆ ನಮಗೆ ರಾಯಭಾರ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ. ಸದ್ಯ ನಾವು ಉಕ್ರೇನ್‌ನ ಪೂರ್ವ ಭಾಗದಲ್ಲಿದ್ದೇವೆ. ನನ್ನ ಜತೆ ಅಥಣಿಯ ರಕ್ಷಿತ್‌, ಬಾಗಲಕೋಟೆಯ ಅಪೂರ್ವಾ, ಬೀದರ್‌ನ ಮಲ್ಲಿನಾಥ, ಬೆಂಗಳೂರಿನ ಪೂರನ್‌, ಗುಲ್ಬರ್ಗದ ಶಶಾಂಕ್‌, ಮನೋಜ್‌, ಪ್ರವೀಣ್‌ ಸಹಿತ ಹಲವರಿದ್ದೇವೆ. ಎಲ್ಲರೂ ಕ್ಷೇಮವಾಗಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next