Advertisement

ಬೀದಿಗಿಳಿದ ಉಕ ಅನ್ನದಾತ

04:53 PM Nov 23, 2018 | |

ಹುಬ್ಬಳ್ಳಿ: ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಉತ್ತರ ಕರ್ನಾಟಕ ರೈತ ಸಂಘ ವತಿಯಿಂದ ಗುರುವಾರ ಚನ್ನಮ್ಮ
ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಸಿದ್ಧಾರೂಢಮಠದಿಂದ ಚನ್ನಮ್ಮ ವೃತ್ತದವರೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಪ್ರತಿಕೃತಿ ಮೆರವಣಿಗೆ ನಡೆಸಲಾಯಿತು. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ನೂರಾರು ರೈತರು ಪಾಲ್ಗೊಂಡಿದ್ದರು.

Advertisement

ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ರೈತರ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್‌ ಪೂರೈಸಬೇಕು. ಮೂರು ತಲೆಮಾರುಗಳಿಂದ ಅರಣ್ಯ ಭೂಮಿಯಲ್ಲಿ ನಿರಂತರ ಸಾಗುವಳಿ ಮಾಡಿದ ರೈತರಿಗೆ ಬಗರ್‌ಹುಕುಂ ಹಕ್ಕು ಪತ್ರ ನೀಡಬೇಕು. ರೈತರು ಬೆಳೆದ ಗೋವಿನಜೋಳ, ಹೆಸರು, ಗೋಧಿ, ಹತ್ತಿ ಹಾಗೂ ಇತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕು. ಬರದ ಹಿನ್ನೆಲೆಯಲ್ಲಿ ರೈತ ಮಹಿಳೆಯರ ಸ್ವ ಸಹಾಯ ಸಂಘದ ಸಾಲ ಮನ್ನಾ ಮಾಡಬೇಕು. ರೈತ ಮಹಿಳೆಯರಿಗೆ ಉಪ ಕಸಬು ಮಾಡಲು ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡಬೇಕು.

ಒಂದು ವೇಳೆ ಬೇಡಿಕೆ ಈಡೇರದಿದ್ದರೆ ಅಧಿವೇಶನ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ರೈತರು ಎಚ್ಚರಿಸಿದರು. ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
 
ಉತ್ತರ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಕರಿಗಾರ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆ. ಎಪಿಎಂಸಿಗಳಲ್ಲಿ ಈರುಳ್ಳಿ ಕ್ವಿಂಟಲ್‌ಗೆ 100ರೂ.ನಂತೆ ಬಿಕರಿಯಾಗುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಸರಕಾರ ಕೂಡಲೇ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ರಾಜವಿದ್ಯಾಶ್ರಮದ ಶ್ರೀ ಷಡಕ್ಷರಿ ಸ್ವಾಮೀಜಿ ಮಾತನಾಡಿದರು.  ಶರೀಫ‌ಮಠದ ಶ್ರೀ ಗುರು ಸ್ವಾಮೀಜಿ, ಹನುಮರಹಳ್ಳಿ ಶಿವಾನಂದಮಠದ ಸ್ವಾಮೀಜಿ, ಚಿನ್ನಾಪುರದ ಶ್ರೀ ಸಿದ್ಧಾರೂಢಸ್ವಾಮೀಜಿ, ಹೆಬ್ಬಳ್ಳಿ ಯಲ್ಲಾಲಿಂಗಮಠದ ಸ್ವಾಮೀಜಿ ನೇತೃತ್ವ ವಹಿಸಿದ್ದರು.
 
ಬೆಳಗಾವಿಯ ಪ್ರಾದೇಶಿಕ ಆಯುಕ್ತರೇ ಬಂದು ಮನವಿ ಸ್ವೀಕರಿಸಬೇಕೆಂದು ರೈತರು ಪಟ್ಟು ಹಿಡಿದರು. ಆದರೆ ಪೊಲೀಸರು ಮನವೊಲಿಸಿದ ನಂತರ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಶಂಕರಪ್ಪ ಅಂಬಲಿ, ಲಕ್ಷ್ಮಣ ಬಕ್ಕಾಯಿ, ಮಂಜುನಾಥ ಬೆಣ್ಣಿ ಮಾತನಾಡಿದರು. ಎಲ್‌.ಎಸ್‌.ಗೌಡರ, ಅಣ್ಣಪ್ಪಗೌಡ ದೇಸಾಯಿ, ಈರಪ್ಪ ಕುಸುಗಲ್ಲ, ಮಹದೇವಪ್ಪ ಉಳ್ಳಾಗಡ್ಡಿ, ಸೋಮಶೇಖರ ಬರಗುಂಡಿ, ಹನುಮಂತ ಸೊನ್ನದ, ಹನುಮಂತಪ್ಪ ದೇವಗಿಹಳ್ಳಿ, ರಾಜಶೇಖರ ದೂದಿಹಳ್ಳಿ ಮೊದಲಾದವರಿದ್ದರು.

ಸಿಎಂಗೆ ತಾಕತ್ತಿದ್ದರೆ ಮಂಡ್ಯ ರೈತರಿಗೆ ಬೈಯಲಿ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ನಿರೀಕ್ಷಿತ ಮಟ್ಟದ ಸ್ಥಾನಗಳು ಲಭಿಸಿಲ್ಲ ಎಂಬ ಕಾರಣಕ್ಕೆ ಉತ್ತರ ಕರ್ನಾಟಕದ ರೈತರ ಬಗ್ಗೆ ರೈತ ಮಹಿಳೆಯರ ಬಗ್ಗೆ ಸಿಎಂ ಕುಮಾರಸ್ವಾಮಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಉತ್ತರ ಕರ್ನಾಟಕದ ರೈತರಿಗೆ ಗೂಂಡಾಗಳು ಎಂದು ಜರಿದಿದ್ದಲ್ಲದೇ, ಇಲ್ಲಿನ ರೈತ ಮಹಿಳೆಗೆ 4 ವರ್ಷ ಎಲ್ಲಿ ಮಲಗಿದ್ದಿ? ಎಂದು ಅವಮಾನಿಸಿದ್ದಾರೆ. ಕುಮಾರಸ್ವಾಮಿಗೆ ತಾಕತ್ತಿದ್ದರೆ ಮಂಡ್ಯ ರೈತರಿಗೆ ಬೈಯಲಿ ನೋಡೋಣ ಎಂದು ರೈತ ಮುಖಂಡ ಶಂಕರಪ್ಪ ಅಂಬಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next