ಲಂಡನ್: ಕೋವಿಡ್ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯ ಮತ್ತಷ್ಟು ಸುಧಾರಿಸಿದ್ದು, ಆಸ್ಪತ್ರೆಯಲ್ಲಿಯಲ್ಲೇ ಬಿಡುವು ಮಾಡಿಕೊಂಡು ಕೆಲ ಕಾಲ ನಡೆದಾಡುತ್ತಿದ್ದಾರೆ.
ಜೊತೆಗೆ ಹಾಸಿಗೆಯಲ್ಲಿ ಮಲಗಿಕೊಂಡೇ ‘ಲಾರ್ಡ್ ಆಫ್ ದಿ ರಿಂಗ್ಸ್ ಟ್ರಿಲೋಜಿ’, ‘ವಿತ್‌ನೈಲ್ ಆ್ಯಂಡ್ ಐ’ ಸಿನಿಮಾ ವೀಕ್ಷಿಸಿದರು. ಸುಡುಕು ಒಗಟು ಆಡುವ ಮೂಲಕ ಕಾಲ ಕಳೆಯುತ್ತಿದ್ದಾರೆ.
ಬೋರಿಸ್ ಜಾನ್ಸನ್ ಗೆಳತಿ ಗರ್ಭಿಣಿಯಾಗಿದ್ದು, ಅವರ ಆರೋಗ್ಯದ ಬಗ್ಗೆಯೂ ಮಾಹಿತಿ ಪಡೆದರು. ಗೆಳತಿಯಲ್ಲಿ ಕೂಡ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವ ಕಾರಣ ಸೆಲ್ಫ್ ಕ್ವಾರಂಟೈನ್‌ಗೊಳಗಾಗಿದ್ದಾರೆ.
ಕಳೆದ 2 ವಾರಗಳ ಹಿಂದೆ ಬೋರಿಸ್ ಜಾನ್ಸನ್‌ಗೆ ಸೋಂಕು ದೃಢಪಟ್ಟ ಕಾರಣ ಐಸೋಲೆಷನ್‌ಗೆ ಒಳಗಾಗಿದ್ದರು. ಸೋಮವಾರ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಐಸಿಯುಗೆ ದಾಖಲಿಸಲಾಗಿತ್ತು.
10 ಸಾವಿರ ದಾಟಿದ ಸಾವಿನ ಸಂಖ್ಯೆ: ಬಿಟ್ರನ್‌ನಲ್ಲಿ ಶನಿವಾರ 917 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 10 ಸಾವಿರ ದಾಟಿದೆ. 5,234 ಹೊಸ ಪ್ರಕರಣಗಳು ಕಂಡು ಬಂದಿದ್ದು, ಇದರೊಂದಿಗೆ ದೇಶದಲ್ಲಿ 80 ಸಾವಿರ ಮಂದಿ ಸೋಂಕಿತರಾಗಿದ್ದಾರೆ.