ಲಂಡನ್: ಭಾರತ ಮೂಲದ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರು ಇಂಗ್ಲೆಂಡ್‌ನಲ್ಲಿ ವಲಸೆ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ!
ಕಳೆದ ಗುರುವಾರ ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆಯಲ್ಲಿ ಸ್ವತಃ ಸುನಕ್ ಅವರೂ ಪಾಲ್ಗೊಂಡಿದ್ದು, ವಲಸೆ ಅಧಿಕಾರಿಗಳೊಂದಿಗೆ ಶೋಧ ಕಾರ್ಯ ನಡೆಸಿ, 105 ಅಕ್ರಮ ವಲಸಿಗರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುನಕ್, ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂಬ ನನ್ನ ಭರವಸೆಗೆ ಬದ್ಧನಾಗಿದ್ದೇನೆ. ಯಾರು ಈ ದೇಶಕ್ಕೆ ಬರಬೇಕು ಎನ್ನುವುದನ್ನು ಈ ದೇಶ ನಿರ್ಧರಿಸುತ್ತದೆ, ಕ್ರಿಮಿನಲ್‌ಗಳ ಗ್ಯಾಂಗಲ್ಲ ಎಂದು ಹೇಳಿದ್ದಾರೆ.
ವಲಸೆ ಇಲಾಖೆ ಅಧಿಕಾರಿಯಂತೆ ಕೋಟ್ ಧರಿಸಿ, ಸುನಕ್ ಅವರು ಅಧಿಕಾರಿಗಳೊಂದಿಗೆ ಸಂಚರಿಸಿದ್ದಾರೆ. ಈ ವೇಳೆ 20 ದೇಶಗಳಿಗೆ ಸೇರಿದ 105 ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಇಂಗ್ಲೆಂಡ್ ಅಭಿವೃದ್ಧಿ ಹೊಂದಿದ ದೇಶವಾಗಿರುವುದರಿಂದ ಆ ದೇಶದಲ್ಲಿ ನೌಕರಿ ಪಡೆಯಲು ಅಕ್ರಮ, ಅಪಾಯಕಾರಿ ಮಾರ್ಗಗಳ ಮೂಲಕ ಪ್ರವೇಶಿಸುವುದು ಹೆಚ್ಚಾಗಿದೆ.
ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ರಾಷ್ಟ್ರೀಯ ಚುನಾವಣೆಯಿದೆ, ಈ ಹಿನ್ನೆಲೆಯಲ್ಲಿ ಸುನಕ್ ಅವರ ಕ್ರಮ ಭಾರೀ ಮಹತ್ವ ಪಡೆದುಕೊಂಡಿದೆ. ಅಕ್ರಮ ವಲಸಿಗರನ್ನು ನಿರ್ಮೂಲನೆ ಮಾಡಲಾಗುವುದು ಎಂದು ಅವರು ಹಿಂದೆಯೇ ಭರವಸೆ ನೀಡಿದ್ದರು.