Advertisement

ಅನ್ಯಾಯದ ಪಟ್ಟಿ ನೀಡಿದ್ದ ಉ.ಕ.ನಾಯಕರು

01:26 PM Dec 24, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ನಾಯಕರ ವಿರುದ್ಧ ಬಹಿರಂಗ ಬಂಡಾಯ ಸಾರಿದ್ದ ಉತ್ತರ ಕರ್ನಾಟಕ ಭಾಗದ ಪ್ರಮುಖ ನಾಯಕರು ಸಮ್ಮಿಶ್ರ ಸರ್ಕಾರದಲ್ಲಿ ಅನ್ಯಾಯವಾಗಿರುವ ಬಗ್ಗೆ ಅಂಕಿ ಅಂಶಗಳ ಸಮೇತ ಹೈಕಮಾಂಡ್‌ಗೆ ದಾಖಲೆ ನೀಡಿದ್ದರು ಎಂದು ತಿಳಿದು ಬಂದಿದೆ.

Advertisement

ಅಲ್ಲದೆ ಅನ್ಯಾಯ ಸರಿಪಡಿಸಲು ಉತ್ತರ ಕರ್ನಾಟಕಕ್ಕೆ ಮತ್ತೂಂದು ಉಪ ಮುಖ್ಯಮಂತ್ರಿ ಸ್ಥಾನ ಸೃಷ್ಟಿಸುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಒತ್ತಡ ಹೇರಿದ್ದರು ಎಂದು ಗೊತ್ತಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಶಾಸಕರು, ಆ ಭಾಗಕ್ಕೆ ದೊರೆತ ಸಚಿವ ಸ್ಥಾನ ಹಾಗೂ ಖಾತೆಗಳ ಹಂಚಿಕೆಯಲ್ಲಿ ಆಗಿರುವ ಅನ್ಯಾಯದ ಬಗ್ಗೆ ವಿವರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ 41 ಶಾಸಕರು ಆಯ್ಕೆಯಾಗಿದ್ದು 5 ಸಚಿವ ಸ್ಥಾನ ನೀಡಲಾಗಿದೆ. ದಕ್ಷಿಣ ಕರ್ನಾಟಕದಲ್ಲಿ 36 ಶಾಸಕರು ಆಯ್ಕೆಯಾಗಿದ್ದು 9 ಸಚಿವ ಸ್ಥಾನ ನೀಡಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳಿಂದ ದಕ್ಷಿಣ ಕರ್ನಾಟಕದಿಂದ 18 ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ಉತ್ತರ ಕರ್ನಾಟಕಕ್ಕೆ ನೀಡಿರುವ ಸ್ಥಾನದಲ್ಲಿ ಬೆಂಗಳೂರಿನ ಮಾಜಿ ಉಪ ಮೇಯರ್‌ ಆರ್‌. ಶಂಕರ್‌ ರಾಣೆಬೆನ್ನೂರು ಕ್ಷೇತ್ರದಿಂದ ಆಯ್ಕೆಯಾಗಿದ್ದು, ಅವರನ್ನೂ ಉತ್ತರ ಕರ್ನಾಟಕ ಸಚಿವರ ಪಟ್ಟಿಯಲ್ಲಿ ಸೇರಿಸಲಾಗಿದೆ.

ಅಲ್ಲದೇ ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಹುದ್ದೆಗಳಾದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಭಾಧ್ಯಕ್ಷ, ಸಭಾಪತಿ, ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿ ಅಧ್ಯಕ್ಷ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಎಲ್ಲವೂ ದಕ್ಷಿಣ ಕರ್ನಾಟಕದವರಿಗೇ ನೀಡಿರುವುದು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಿದೆ. ಇದರಿಂದ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯವಾದಂತಾಗಿದೆ. ಇಷ್ಟೇ ಅಲ್ಲದೇ ಪ್ರಮುಖ ಖಾತೆಗಳೆಲ್ಲವೂ ದಕ್ಷಿಣ ಕರ್ನಾಟಕದ ಸಚಿವರ ಪಾಲಾಗಿವೆ ಎಂದು ಉಲ್ಲೇಖೀಸಿದ್ದಾರೆ ಎನ್ನಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ ಶೇ. 41.67ರಷ್ಟು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಆದರೆ, ಶೇಕಡಾ 12.50 ರಷ್ಟು ಪ್ರಾತಿನಿಧ್ಯ ನೀಡಲಾಗಿದೆ. ಅದಕ್ಕೆ ವಿರುದ್ಧವಾಗಿ ದಕ್ಷಿಣ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಶೇ. 38.20 ರಷ್ಟು ಸ್ಥಾನ ಪಡೆದಿದ್ದು, ಶೇ. 26.47ರಷ್ಟು ಪ್ರಾತಿನಿಧ್ಯ ದೊರೆತಿದೆ ಎಂದು ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ತಾರತಮ್ಯದ ದಾಖಲೆಯನ್ನು ರಾಹುಲ್‌ ಗಾಂಧಿ ಅವರಿಗೆ ಒದಗಿಸಿದ್ದರು ಎನ್ನಲಾಗಿದೆ. ರಾಜ್ಯವನ್ನು ನಾಲ್ಕು ಭಾಗವಾಗಿ ವಿಂಗಡಿಸಿ ಪ್ರಾತಿನಿಧ್ಯದ ಮಾಹಿತಿ ಹೈಕಮಾಂಡ್‌ಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

ಉತ್ತರ ಕರ್ನಾಟಕ: ಬೆಳಗಾವಿ ಕಲಬುರಗಿ ವಿಭಾಗಗಳ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ 96 ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ 41 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಗೆಲುವಿನ ಪ್ರಮಾಣ ಪ್ರತಿಶತ ಶೇ. 42.71 ರಷ್ಟಿದ್ದು, ಕೇವಲ 5 ಜನರಿಗೆ ಸಚಿವ ಸ್ಥಾನ ನೀಡಲಾಗಿದೆ. ಅದು ಶೇ.12.20 ರಷ್ಟು.

ದಕ್ಷಿಣ ಕರ್ನಾಟಕ: ಬೆಂಗಳೂರು ನಗರ ಸೇರಿದಂತೆ 11 ಜಿಲ್ಲೆಯ 89 ವಿಧಾನಸಭಾ ಕ್ಷೇತ್ರಗಳಲ್ಲಿ 35 ಶಾಸಕರು ಆಯ್ಕೆಯಾಗಿದ್ದಾರೆ. ಗೆಲುವಿನ ಪ್ರಮಾಣ ಪ್ರತಿಶತ ಶೇ.39.33ರಷ್ಟಿದ್ದು, 9 ಜನರಿಗೆ ಸಚಿವ ಸ್ಥಾನ ಒದಗಿಸಲಾಗಿದೆ. ಅದು ಶೇಕಡಾ 25.71 ರಷ್ಟು.

ಮಧ್ಯಕರ್ನಾಟಕ: ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ ಸೇರಿ ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ 21 ವಿಧಾನಸಭಾ ಕ್ಷೇತ್ರಗಳಿದ್ದು, 4 ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದಾರೆ. ಯಾರಿಗೂ ಸಚಿವ ಸ್ಥಾನ ದೊರೆತಿಲ್ಲ.

ಕರಾವಳಿ ಕರ್ನಾಟಕ: ಉಡುಪಿ, ಮಂಗಳೂರು, ಚಿಕ್ಕಮಗಳೂರು ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಇಬ್ಬರು ಮಾತ್ರ ಶಾಸಕರು ಆಯ್ಕೆಯಾಗಿದ್ದು, ಅವರಲ್ಲಿ ಒಬ್ಬರಿಗೆ ಮಂತ್ರಿ ಸ್ಥಾನ ನೀಡಲಾಗಿದೆ. ರಾಜ್ಯ ನಾಯಕರು ಸಂಪುಟ ವಿಸ್ತರಣೆ ಕುರಿತು ಹೈ ಕಮಾಂಡ್‌ ಜೊತೆ ಮಾತುಕತೆ ನಡೆಸುವ ಮೊದಲೇ ಉತ್ತರ ಕರ್ನಾಟಕದ ಮುಖಂಡರು ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆಗಿರುವ ತಾರತಮ್ಯದ ಸಂಪೂರ್ಣ ಮಾಹಿತಿಯನ್ನು ರಾಹುಲ್‌ ಗಾಂಧಿ ಅವರಿಗೆ ತಲುಪಿಸಿದ್ದರು ಎನ್ನಲಾಗಿದೆ.

ಉತ್ತರ ಕರ್ನಾಟಕದ ನಾಯಕರು ನೀಡಿದ್ದ ವರದಿ ಆಧಾರದಲ್ಲಿ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಹುಲ್‌ ಗಾಂಧಿ ಸಂಪುಟ ಪುನಾರಚನೆ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ

●ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next