Advertisement

6 ದಿನಗಳ ಬಳಿಕ ಯುಕೆ ವಿಮಾನ ಸಂಚಾರ

02:48 PM Jan 09, 2021 | |

ಹೊಸದಿಲ್ಲಿ: ಬ್ರಿಟನ್ನಿನಲ್ಲಿನ ರೂಪಾಂತರಿ ಕೊರೊನಾ ಭೀತಿಯಿಂದಾಗಿ 16 ದಿನಗಳ ಕಾಲ ಸ್ಥಗಿತಗೊಂಡಿದ್ದ ಯುಕೆ ಪ್ಯಾಸೆಂಜರ್‌ ವಿಮಾನಗಳ ಸಂಚಾರ ಶುಕ್ರವಾರದಿಂದ ಪುನರಾರಂಭಗೊಂಡಿವೆ.

Advertisement

ಮೊದಲ ವಿಮಾನವಾಗಿ ಲಂಡನ್‌ನಿಂದ “ಎಐ112 ಏರ್‌ ಇಂಡಿಯಾ’ ಹಾರಾಟ ನಡೆಸಿದ್ದು, ಶುಕ್ರವಾರ ಬೆಳಗ್ಗೆ 10.30ಕ್ಕೆ ದಿಲ್ಲಿ ಏರ್‌ಪೋರ್ಟ್‌ಗೆ ಬಂದಿಳಿದಿದೆ. ಒಟ್ಟು 256 ಪ್ರಯಾಣಿಕರು ಇಳಿದಿದ್ದಾರೆ. ಲಂಡನ್ನಿಂದ ಹೊರಟಿರುವ ಇನ್ನೊಂದು ವಿಸ್ತಾರಾ ವಿಮಾನದಲ್ಲಿ 291 ಪ್ರಯಾಣಿಕರಿದ್ದು, ಶನಿವಾರ ದಿಲ್ಲಿ ತಲುಪಲಿದ್ದಾರೆ.

7 ದಿನ ಕ್ವಾರಂಟೈನ್‌: ಇಂಗ್ಲೆಂಡಿನಿಂದ ಆಗಮಿಸಿದ ಎಲ್ಲ ಪ್ರಯಾಣಿಕರಿಗೂ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮತ್ತು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯ. ನೆಗೆಟಿವ್‌ ವರದಿ ಬಂದವರು ಹೋಂ ಕ್ವಾರಂಟೈನ್‌ಗೆ ಒಳಪಡಬೇಕು ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸೂಚಿಸಿದ್ದಾರೆ.

ಮತ್ತೆ 9 “ರೂಪಾಂತರಿ’!: ನವೆಂಬರ್‌ ಅಂತ್ಯದಿಂದ ಇಂಗ್ಲೆಂಡಿನಿಂದ ಮರಳಿದವರಲ್ಲಿ ಮತ್ತೆ 9 ಮಂದಿಗೆ ರೂಪಾಂತರಿ ಸೋಂಕು ದೃಢಪಟ್ಟಿದೆ.

ಶೇ. 2.16 ಮಾತ್ರ “ಸಕ್ರಿಯ’: ದೇಶದ ಒಟ್ಟು ಸೋಂಕಿತರಲ್ಲಿ ಶೇ.2.16ರಷ್ಟು ಮಾತ್ರವೇ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಶುಕ್ರವಾರ ಒಂದೇ ದಿನ 18,139 ಮಂದಿಗೆ ಸೋಂಕು ತಗಲಿದ್ದು, 234 ಸಾವುಗಳಾಗಿವೆ.

Advertisement

 

ಲಸಿಕೆ ಮೇಲೆ ನಂಬಿಕೆ ಇಲ್ಲ :

ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಖೊಮೇನಿ ತಮ್ಮ ದೇಶದಲ್ಲಿ ಅಮೆರಿಕದ ಫೈಜರ್‌ ಮತ್ತು ಬ್ರಿಟನ್‌ನ ಆಸ್ಟ್ರಾಜೆನೆಕಾ ಲಸಿಕೆಯ ಆಮದು ಹಾಗೂ ಪ್ರಯೋಗದ ಮೇಲೆ  ನಿಷೇಧ ಹೇರಿದ್ದಾರೆ. ಈ ಕುರಿತು ಮಾತನಾಡಿದ ಅವರು “ಬ್ರಿಟನ್‌ ಹಾಗೂ ಅಮೆರಿಕದಲ್ಲಿ ಕೊರೊನಾ ಸಾವಿನ ಪ್ರಕರಣಗಳು ಅಧಿಕವಿವೆ. ಹೀಗಾಗಿ ಆ ರಾಷ್ಟ್ರಗಳ ಲಸಿಕೆಯ ಮೇಲೆ ನನಗೆ ನಂಬಿಕೆಯಿಲ್ಲ. ನಾವು ಸುರಕ್ಷಿತ ದೇಶಗಳಿಂದ ಲಸಿಕೆ ತರಿಸಿಕೊಳ್ಳುತ್ತೇವೆ’ ಎಂದಿದ್ದಾರೆ!

 

27 ಸಾವಿರ ಕೋಟಿ ವೆಚ್ಚ  :

ಕೋವಿಡ್ ಲಸಿಕೆ ವಿತರಣೆ ವಿಚಾರ ಸುಲಭದ್ದೇನಲ್ಲ. ಮೊದಲ ಹಂತದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡಲು ಕೇಂದ್ರ ಸರಕಾರ ಬರೋಬ್ಬರಿ 21 ರಿಂದ 27 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ಎಸ್‌ಬಿಐನ ಸಂಶೋಧನ ವರದಿಯೊಂದು ಈ ಬಗ್ಗೆ ಮಾಹಿತಿ ನೀಡಿದೆ. ಮೊದಲ ಹಂತದಲ್ಲಿ 3 ಕೋಟಿ ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತದೆ. 2ನೇ ಹಂತದಲ್ಲಿ 50 ಕೋಟಿ ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, ಇದಕ್ಕೆ 35 ರಿಂದ 45 ಸಾವಿರ ಕೋಟಿ ರೂ.ಗಳು ಬೇಕು ಎಂದು ಈ ವರದಿ ತಿಳಿಸಿದೆ. ಮೊದಲ ಹಂತದ ಲಸಿಕೀಕರಣ ಆಗಸ್ಟ್‌ನಲ್ಲಿ ಮುಗಿದರೆ, 2ನೇ ಹಂತದ ಲಸಿಕೀಕರಣ 2022ರ ಅಂತ್ಯದೊಳಗೆ ಮುಗಿಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next