Advertisement
ಉಜ್ವಲಾ ಯೋಜನೆ ಸಂಬಂಧ ಕೇಂದ್ರ ಸರಕಾರವೇ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ. ಆದ್ದರಿಂದ ರಾಜ್ಯ ಸರಕಾರದ ಅಧಿಕಾರಿಗಳು ಹಸ್ತಕ್ಷೇಪ ಮಾಡುತ್ತಿಲ್ಲ. ಈ ಅವಕಾಶವನ್ನು ಕೆಲವು ಏಜೆನ್ಸಿಯವರು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ. ಈ ಮಧ್ಯೆ ಉದಯವಾಣಿಯಲ್ಲಿ ಜು. 4ರಂದು ವರದಿ ಪ್ರಕಟವಾದ ಹಿನ್ನೆಲೆಯಲ್ಲಿ ಜಾಗೃತಗೊಂಡಿರುವ ಯೋಜನೆಯ ನೋಡಲ್ ಅಧಿಕಾರಿಗಳು ಜಾಗೃತಗೊಂಡಿದ್ದು, ಫಲಾನುಭವಿಗಳ ಸಮಗ್ರ ವಿವರಗಳನ್ನು ನೀಡುವಂತೆ ಸಂಬಂಧಪಟ್ಟ ಗ್ಯಾಸ್ ವಿತರಕರಿಗೆ ಸೂಚಿಸಿದೆ.
ಬೈಂದೂರು, ಗಂಗೊಳ್ಳಿ ಮತ್ತಿತರ ಕಡೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿರೀಕ್ಷಕರು ಭೇಟಿ ನೀಡಿ ವಿತರಕರಿಂದ ಉಜ್ವಲಾ ಫಲಾನುಭವಿಗಳ ವಿವರ ಪಡೆದಿದ್ದಾರೆ. ಕುಂದಾಪುರ ವರದಿ
ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಒಟ್ಟು 6 ಅಡುಗೆ ಅನಿಲ ವಿತರಕರಿಗೆ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಅಡುಗೆ ಅನಿಲ ವಿತರಿಸಲು ಅವಕಾಶ ನೀಡಲಾಗಿದೆ. ಬೈಂದೂರಿನ ಶಾಂತೇರಿ ಕಾಮಾಕ್ಷಿ ಏಜೆನ್ಸಿಯವರಿಗೆ 457 ಅರ್ಜಿ ಬಂದಿದ್ದು ಅಷ್ಟೂ ಮಂದಿಗೆ ನೀಡಿದ್ದಾರೆ. ಗಂಗೊಳ್ಳಿಯ ಮಲ್ಲಿಕಾರ್ಜುನ ಏಜೆನ್ಸಿಯವರಿಗೆ 6,187 ಅರ್ಜಿ ಬಂದಿದ್ದು 2,200 ಮಂದಿಗೆ ನೀಡಿದ್ದಾರೆ. ಕುಂದಾಪುರದ ಆಂಜನೇಯ ಗ್ಯಾಸ್ ಏಜೆನ್ಸಿಗೆ 369 ಅರ್ಜಿ ಬಂದಿದ್ದು, ಮಧು ಏಜೆನ್ಸಿಯವರಿಗೆ 11 ಅರ್ಜಿ, ಸಿದ್ದಾಪುರದ ಮುಕ್ತ ಏಜೆನ್ಸಿಯವರಿಗೆ 752, ಕೋಟೇಶ್ವರದ ಸುರಕ್ಷಾ ಏಜೆನ್ಸಿಯವರಿಗೆ 957 ಅರ್ಜಿ ಬಂದಿದ್ದು ಎಲ್ಲರಿಗೂ ಅಡುಗೆ ಅನಿಲ ವಿತರಿಸಲಾಗಿದೆ.
Related Articles
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನಲ್ಲಿ ಇದುವರೆಗೆ ಯಾವುದೇ ಅಕ್ರಮ ನಡೆದ ಬಗ್ಗೆ ದೂರು ಬಂದಿಲ್ಲ. ಜತೆಗೆ ಈ ಯೋಜನೆಯಡಿ ಗ್ಯಾಸ್ ಸಂಪರ್ಕ ನೀಡುವಾಗ ಎಚ್ಚರಿಕೆ ವಹಿಸಿ ಅರ್ಹ ಫಲಾನುಭವಿಗಳಿಗೆ ಮಾತ್ರ ವಿತರಿಸುವಂತೆ ಇಲಾಖೆಯ ವತಿಯಿಂದ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ರೀತಿಯ ಅಕ್ರಮದ ಬಗ್ಗೆ ದೂರುಗಳು ಬಂದರೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದಿದ್ದಾರೆ.
Advertisement
10,613 ಗ್ಯಾಸ್ ಸಂಪರ್ಕ ಈ ಯೋಜನೆಯಡಿ ಗ್ಯಾಸ್ ಸಂಪರ್ಕ ಕೋರಿ 14,635 ಅರ್ಜಿ ಬಂದಿದ್ದು, 10,613 ಮಂದಿಗೆ ನೀಡ ಲಾಗಿದೆ. ಬಿಪಿಸಿ ವತಿಯಿಂದ 2,856 ಅರ್ಜಿಗಳ ಪೈಕಿ 2,195 ಮಂದಿಗೆ, ಎಚ್‌ಪಿಸಿ ವತಿಯಿಂದ 9,208 ಅರ್ಜಿಗಳ ಪೈಕಿ 6,536 ಜನರಿಗೆ ಹಾಗೂ ಐಒಸಿಯಿಂದ 2,571 ಆರ್ಜಿಗಳ ಪೈಕಿ 1,882 ಮಂದಿಗೆ ಸಂಪರ್ಕ ಕಲ್ಪಿಸಲಾಗಿದೆ. 4,922 ಅರ್ಜಿ ಬಾಕಿ ಇದ್ದು, ಕೂಲಂಕಷ ಪರಿಶೀಲಿಸಿ ಸಂಪರ್ಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ನಿಮ್ಮ ಗ್ಯಾಸ್ ಸಂಪರ್ಕ ಖಚಿತಪಡಿಸಿಕೊಳ್ಳಿ
ರಾಜ್ಯಮಟ್ಟದಲ್ಲಿ ಹಲವು ಕಡೆ ಈ ಪ್ರಕರಣಗಳು ಆಗಿರಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಬಿಪಿಎಲ್ ಕಾರ್ಡ್‌ದಾರರು ನಿಮ್ಮ ಗ್ಯಾಸ್ ವಿತರಕರನ್ನು ಭೇಟಿ ಮಾಡಿ ತಮ್ಮ ಖಾತೆಯಲ್ಲೇ ಇತರರಿಗೆ ಮಂಜೂರಾಗಿದೆಯೆ ಅಥವಾ ದಾಖಲೆ ಸರಿಯಾಗಿ ನಮೂದಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕಾಗಿದೆ. ಒಂದು ವೇಳೆ ತಪ್ಪಿದ್ದು, ಗ್ಯಾಸ್ ವಂಚಿತರಾಗಿದ್ದರೆ 99641 69554ಗೆ ವಿವರ (ಹೆಸರು, ಗ್ಯಾಸ್ ಏಜೆನ್ಸಿ, ಊರು, ಫೋನ್ ನಂಬರ್) ಕಳಿಸಿ. ಬ್ರಹ್ಮಾವರದಲ್ಲಿ ಇದೇ ರೀತಿಯ ಪ್ರಕರಣ ಕಂಡುಬಂದಿವೆ. ಉಜ್ವಲಾ ಯೋಜನೆ ಮೇಲುಸ್ತುವಾರಿಗೆ ಪ್ರತ್ಯೇಕ ನೋಡೆಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಯೋಜನೆ ದುರುಪಯೋಗವಾದರೆ ಕಂಪೆನಿಗೆ ಕಳಂಕ ಉಂಟಾಗುತ್ತದೆ. ಹೀಗಾಗಿ ಆಯಾಯ ಕಂಪೆನಿ ಇದರ ಸ್ಪಷ್ಟತೆ ನಿರ್ಧರಿಸುತ್ತದೆ. ಜಿಲ್ಲಾಡಳಿತದಿಂದ ಉಜ್ವಲಾ ಯೋಜನೆ ಸಮಗ್ರ ಪರಿಶೀಲನೆ ಕುರಿತು ಅಧಿಕಾರಿಗಳಿಗೆ ಆದೇಶ ನೀಡಲಾಗುತ್ತದೆ.
– ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ಜಿಲ್ಲಾಧಿಕಾರಿ ಉಡುಪಿ ಎಚ್.ಪಿ. ಕಂಪೆನಿಯಿಂದ ಇದುವರೆಗೆ ಯಾವುದೇ ರೀತಿಯ ಇಂತಹ ಪ್ರಕರಣ ಕಂಡುಬಂದಿಲ್ಲ. ವರದಿಗೆ ಸಂಬಂಧಿಸಿದಂತೆ ವಿತರಕರಿಂದ ಸಮಗ್ರ ವಿವರ ಪಡೆಯಾಗುತ್ತದೆ. ಒಂದೊಮ್ಮೆ ದುರುಪಯೋಗ ಕಂಡುಬಂದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತದೆ.
– ಎನ್. ರಮೇಶ್, ಚೀಫ್ ರೀಜನಲ್ ಮ್ಯಾನೇಜರ್, ಹಿಂದೂಸ್ಥಾನ್ ಪಟ್ರೋಲಿಯಂ. ಭಾರತ್ ಗ್ಯಾಸ್‌ನಲ್ಲಿ ಈಗಾಗಲೇ ಒಂದೆರಡು ಪ್ರಕರಣ ಕಂಡು ಬಂದಿದ್ದು, ವಿವರ ಪಡೆಯಲಾಗುತ್ತಿದೆ. ಯಾವ ರೀತಿಯಲ್ಲಿ ಅರ್ಹ ಫಲಾನುಭವಿಗಳಿಗೆ ವಂಚನೆಯಾಗಿದೆ ಎನ್ನುವ ವಿವರ ಪಡೆದು ಅಕ್ರಮವೆಸಗಿದ ವಿತರಕರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.
– ನಾರಾಯಣ ಸ್ವಾಮಿ, ಚೀಫ್ ರೀಜನಲ್ ಡೈರೆಕ್ಟರ್, ಭಾರತ್ ಪೆಟ್ರೋಲಿಯಂ ಲಿ. ಗ್ಯಾಸ್ ಸಂಪರ್ಕ ಕಲ್ಪಿಸುವಲ್ಲಿ ಬೈಂದೂರಿನಲ್ಲಿ ನಡೆದಿರುವುದು ತಪ್ಪು. ಏಜೆನ್ಸಿಯವರು ಸರಿಯಾಗಿ ಪರಿಶೀಲಿಸದೇ ಸಂಪರ್ಕ ಕಲ್ಪಿಸಿದ್ದಾರೆ. ಆದರೆ ಅದು ಅಕ್ರಮವಲ್ಲ.
– ನಿತ್ಯಾನಂದ ಪೈ, ಎಚ್‌ಪಿ ಗ್ಯಾಸ್‌ನ ಮಂಗಳೂರು ಪ್ರಾದೇಶಿಕ ವಲಯದ ಅಧ್ಯಕ್ಷ ಉಡುಪಿಯಲ್ಲಿ ಬೆಳಕಿಗೆ ಬಂದಿಲ್ಲ, ಬ್ರಹ್ಮಾವರದಲ್ಲಿ ‘ರಾಂಗ್ ಕನೆಕ್ಷನ್’?
ಉಡುಪಿ: ಈ ಯೋಜನೆಯ ಗ್ಯಾಸ್ ಸಂಪರ್ಕ ಕುರಿತು ಉಡುಪಿಯ ಭಾಗದಲ್ಲಿ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೆ ಬ್ರಹ್ಮಾವರದಲ್ಲಿ ಸುಮಾರು ಶೇ. 70ರಷ್ಟು ರಾಂಗ್ ಕನೆಕ್ಷನ್ ಆಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸರಕಾರ ಕುಟಂಬದವರೆಲ್ಲರ ಆಧಾರ್ ಕಾರ್ಡ್ ಪಡೆಯುವುದು ಕಡ್ಡಾಯ ಮಾಡಿದ ಮೇಲೆ ಹೊಸ ಪ್ರಕರಣಗಳು ನಡೆಯದು ಎನ್ನುತ್ತಾರೆ ಉಡುಪಿಯ ಡೀಲರ್‌ಗಳು. ಸರಕಾರ 2011ರ ಸಮೀಕ್ಷೆಯ ಆಧಾರದಲ್ಲಿ ಡೀಲರ್ ಗಳಿಗೆ ಪಟ್ಟಿ ಕಳುಹಿಸಿರುತ್ತದೆ. ಆ ಪಟ್ಟಿಯಲ್ಲಿ ಒಂದೇ ಹೆಸರಿನ ಹಲವು ಮಂದಿ ಇರುವ ಸಾಧ್ಯತೆ ಹೆಚ್ಚು. ಅರ್ಹರ ಟಿನ್ ನಂಬರ್ ಮತ್ತು ಆಧಾರ್ ಸಂಖ್ಯೆ ಲಿಂಕ್ ಮಾಡಬೇಕೆಂಬುದು ನಿಯಮ. ಆದರೆ ಹಲವರು ಇದನ್ನು ಮಾಡುವುದಿಲ್ಲ ಎನ್ನುತ್ತಾರೆ ಮತ್ತೋರ್ವ ಡೀಲರ್. ►►ಯಾರದ್ದೋ ಹೆಸರು; ಇನ್ಯಾರಿಗೋ ಕನೆಕ್ಷನ್ -https://bit.ly/2KIgE3b