ಕುರುಗೋಡು: ರಾಜ್ಯದಲ್ಲಿ ಉತ್ತಮ ಮಳೆಯಾಗಿ ರೈತ ಬೆಳೆದ ಪಸಲಿಗೆ ಉತ್ತಮ ಬೆಲೆ ಸಿಗುವಂತಾಗಲಿ ಹಾಗೂ ಸಮಾಜದ ಸರ್ವಜನಾಂಗಕ್ಕೂ ಒಳಿತಾಗಲಿ ಎಂದು ಶ್ರೀ ಉಜ್ಜಯಿನಿ ಜಗದ್ಗುರು ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರು ನುಡಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಹಂಪಿ ಸಾವಿರ ದೇವರ ಮಠದಲ್ಲಿ ಸ್ಥಳೀಯ ಹಂಪಿ ರಾಜಗುರುಗಳಾದ ಲಿಂಗೈಕ್ಯ ಶ್ರೀಗುರು ಸಿದ್ಧಲಿಂಗ ಮಹಾಂತ ದೇಶಿಕೇಂದ್ರ ಶಿವಾಚಾರ್ಯರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನಿಧ್ಯವಹಿಸಿ ಮಾತನಾಡಿ, ಜಾತಿ ಮತ ಪಂಥ ಭೇದಗಳನ್ನು ಮರೆತು ಶ್ರಾವಣದಲ್ಲಿ ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದರೆ ಸರ್ವರಿಗೂ ಶುಭವಾಲಿದೆ ಎಂದು ಸಂದೇಶ ನೀಡಿದರು.
ಪ್ರತಿಯೊಬ್ಬ ಮನುಷ್ಯನಿಗೂ ಗುರುವಿನ ಮೇಲೆ ನಂಬಿಕೆ, ಸೇವಾಮನೋಭಾವ ಹಾಗೂ ಆದರ್ಶ ಗುಣಗಳು ಇದ್ದರೆ ಮಾತ್ರ ಗುರುವಿನ ಶಕ್ತಿ ಅರ್ಥಮಾಡಿಕೊಂಡು ಶಾಶ್ವತ ಸುಖ ಅನುಭವಿಸಲು ಸಾಧ್ಯ ಎಂದು ಹೇಳಿದರು.
ಹಂಪೆ ಸಾವಿರ ಮಠದ ಶ್ರೀ ವಾಮದೇವ ಮಹಾಂತಿನ ಶಿವಚಾರ್ಯರು ಮಾತನಾಡಿ, ಮಕ್ಕಳಿಗೆ ಧರ್ಮ ಸಂಸ್ಕಾರ, ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ಬಾಲ್ಯದಲ್ಲೇ ಬೆಳೆಸಿಕೊಳ್ಳುವಲ್ಲಿ ಜಾಗೃತಿವಹಿಸಬೇಕು. ಗುರು ಪಂರಪರೆ ಮಠಗಳೊಂದಿಗೆ ನಿರಂತರ ಅವಿನಾಭಾವ ಸಂಬಂಧ ಇಟ್ಟುಕೊಳ್ಳುವ ಮೂಲಕ ಧರ್ಮ ಪರಂಪರೆಗಳನ್ನು ಪೋಷಿಸುವಲ್ಲಿ ಮುಂದಾಗಬೇಕು ಎಂದು ಹೇಳಿದರು.
ಅಂದು ಬೆಳಿಗ್ಗೆ. ಮಠದಲ್ಲಿ ಗದ್ದುಗೆ ನಸಿಕಿನ ಜಾವ ಮಹಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ, ಅಭಿಷೇಕ,ಪುಪ್ಪಅರ್ಚನೆ, ಇತರೆ ಧಾರ್ಮಿಕ ವಿಶೇಷ ಪೂಜೆಗಳು ಮಹಾಪ್ರಸಾದ ವಿತರಣೆ ಜರುಗಿತು. ಈ ವೇಳೆ ಮುಕ್ತಿಮಂದಿರ ವಿಮಲಾ ರೇಣುಕಾ ಶಿವಾಚಾರ್ಯರು, ಮಸ್ಕಿ ವರರುದ್ರಮುನಿ ಸ್ವಾಮಿಜಿ, ಹರಗಿನಡೋಣಿ ಸಿದ್ದಲಿಂಗ ಸ್ವಾಮಿಜಿ, ಕಮ್ಮರುಚೇಡು ಕಲ್ಯಾಣ ಸ್ವಾಮಿಜಿ, ಹರಳಳ್ಳಿ ಭುವನೇಶ್ವರ ತಾತ,
ಕಂಪ್ಲಿ ಶಾಸಕ ಜೆ ಎನ್ ಗಣೇಶ, ಮಾಜಿ ಶಾಸಕ ಟಿ ಎಚ್ ಸುರೇಶ ಬಾಬು, ಮುಖಂಡರಾದ ಬಿ. ಮಹೇಶಗೌಡ, ಬಿ. ಸದಾಶಿವಪ್ಪ, ಬಾದನಹಟ್ಟಿ ತಿಮ್ಮಪ್ಪ, ಬಾಜರ್ ಬಸವನಗೌಡ, ಘನಮಠೆಸ್ವಾಮಿ, ಮಸೀದಿಪುರದ ಸಿದ್ದರಾಮಗೌಡ, ಗ್ರಾಪಂ ಸದಸ್ಯರು ಸೇರಿದಂತೆ ಸುತ್ತಮುತ್ತಲಿನ ನೂರಾರು ಭಕ್ತರು ಭಾಗವಹಿಸಿದ್ದರು.