ಬೆಳ್ತಂಗಡಿ: ಹಲವಾರು ರೀತಿಯ ಅಭಿರುಚಿಯೊಂದಿಗೆ ಆಳವಾದ ಅಧ್ಯಯನ ಮತ್ತು ಯೋಚನೆಯನ್ನು ಯೋಜನೆಗಳ ಮೂಲಕ ನೂರಕ್ಕೆ ನೂರು ಅನುಷ್ಠಾನ ಮಾಡುವ ಸ್ವಭಾವ ಯಶೋವರ್ಮರದ್ದಾಗಿತ್ತು. ಸಸ್ಯಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು ಉಜಿರೆ ಗ್ರೀನ್ ಸಿಟಿ (ಹಸುರೀಕರಣ) ಆಗಬೇಕೆಂಬ ಕನಸು ಯಶೋವನದಿಂದ ಸಾಕಾರಗೊಂಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಹೇಳಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞರಾಗಿದ್ದ ದಿ| ಡಾ| ಬಿ.ಯಶೋವರ್ಮ ಅವರ ಸ್ಮರಣಾರ್ಥ ಮಾ.30ರಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಎಸ್.ಡಿ.ಎಂ. ಕಾಲೇಜಿನ ಆಬೋìರೇಟಂ- ಸಸ್ಯೋಧ್ಯಾನ “ಯಶೋವನ’ ಎಂದು ಮರುನಾಮಕರಣಗೊಳಿಸಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಡಾ| ಹೆಗ್ಗಡೆಯವರ ಆಶಯದಂತೆ ಯಶೋವನದಲ್ಲಿ ಬಾಲಿಯ ಲಿಂಪುಯಂಗ್ ದೇವಾಲಯದ ಆವರಣದಲ್ಲಿರುವ ವಿಶ್ವ ವಿಖ್ಯಾತ ಗೇಟ್ ಆಫ್ ಹೆವನ್ ಅಂದರೆ ಸ್ವರ್ಗದ ದ್ವಾರದ ಮಾದರಿಯ ಗೋಪುರವನ್ನು ನಿರ್ಮಿಸಿ ಆ ಮೂಲಕ ಸ್ವರ್ಗಸದೃಶ ಪ್ರಕೃತಿಯ ಲೋಕಕ್ಕೆ ಎಲ್ಲರಿಗೂ ಸ್ವಾಗತ ಕೋರುವಂತೆ ಮಾಡಲಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಸ್ಯ ರಕ್ಷಣೆ ಪ್ರಾಮುಖ್ಯತೆ ಎಲ್ಲರಿಗೂ ಬೇಕಿದೆ. ಹಸುರು ಎಂದರೆ ಉಸಿರು, ಹಸುರಿದ್ದರೆ ಉಸಿರು ಎಂಬಂತೆ ಉಜಿರೆಯನ್ನು ಹಸುರೀಕರಣಗೊಳಿಸಿದವರು ಡಾ| ಯಶೋವರ್ಮರವರು. ದಶದಿಕ್ಕುಗಳಲ್ಲಿ ದಶಯೋಜನೆ ರೂಪಿಸುವ ಶಕ್ತಿ ಅವರಿಗಿತ್ತು. ಎಲ್ಲ ವಿದ್ಯಾಸಂಸ್ಥೆಗಳಲ್ಲಿ ಹಸುರು ಬೆಳೆಸುವ ಕೆಲಸವಾಗಬೇಕಿದೆ ಎಂದರು.
ಡಾ| ಹೇಮಾವತಿ ವೀ.ಹೆಗ್ಗಡೆ, ಡಿ.ಹರ್ಷೆàಂದ್ರ ಕುಮಾರ್, ಮಂಗಳೂರು ವಿ.ವಿ.ಯ ಉಪಕುಲಪತಿ ಪಿ.ಎಲ್.ಧರ್ಮ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಎಸ್.ಸತೀಶ್ಚಂದ್ರ ಸುರ್ಯಗುತ್ತು, ಡಾ| ಚಿನ್ನಪ್ಪ ಗೌಡ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್. ಸೋನಿಯಾ ಯಶೋವರ್ಮ, ಎಸ್.ಡಿ.ಎಂ. ಐಟಿ ವಿಭಾಗ ಸಿಇಒ ಪೂರಣ್ ವರ್ಮ, ಕೆಯೂರು ವರ್ಮ ಮೊದಲಾದವರು ಉಪಸ್ಥಿತರಿದ್ದರು.
ಉಜಿರೆ ಕಾಲೇಜು ಪ್ರಾಚಾರ್ಯ ಡಾ| ಕುಮಾರ ಹೆಗ್ಡೆ ಸ್ವಾಗತಿಸಿದರು, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ| ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು.
ಏನಿದು ಯಶೋವನ?
1999ರಲ್ಲಿ ಡಾ| ಬಿ.ಯಶೋವರ್ಮ ಅವರ ಮುತುವರ್ಜಿಯಿಂದ ಆರಂಭವಾದ ಅಪರೂಪದ ಸಸ್ಯಸೌರಭಗಳನ್ನು ರಕ್ಷಿಸುವ ಸಸ್ಯೋದ್ಯಾನವೇ ಈ ಯಶೋವನ. ಪಶ್ಚಿಮಘಟ್ಟಗಳ ಅಪರೂಪದ ಸಸ್ಯ ಸಂಕುಲಗಳನ್ನು ಸಂರಕ್ಷಿಸುವ ಮತ್ತು ಅವುಗಳ ತಳಿಗಳನ್ನು ದಾಖಲಿಸುವ ಸಲುವಾಗಿ ಉಜಿರೆಯ ಸಿದ್ಧವನ ಸಮೀಪದಲ್ಲಿ 8 ಎಕರೆ ಜಾಗದಲ್ಲಿ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಆಬೊìàರೇಟಂ (ಸಸ್ಯೋದ್ಯಾನ) ಹೆಸರಿನಲ್ಲಿ ಈ ಸಂರಕ್ಷಣ ವನವನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಇಲ್ಲಿ 1116 ಮರಗಳಿವೆ. ನವಗ್ರಹ ವನ, ತೀರ್ಥಂಕರ ವನ, ಅಶೋಕ ವನ, ಪಂಪವನ ಹಾಗೂ ಕುವೆಂಪು ವನಗಳು, ಇವಿಷ್ಟೇ ಅಲ್ಲದೆ ಹಲವು ತೋಟಗಾರಿಕಾ ಸಸ್ಯ, ವಿವಿಧ ಔಷಧೀಯ ಸಸ್ಯ, ಮನೆ ಮದ್ದು ಸಹಿತ ಸುಮಾರು 500ಕ್ಕೂ ಹೆಚ್ಚಿನ ಜಾತಿಯ ಸಸ್ಯ ಪ್ರಭೇದಗಳು ಇಲ್ಲಿವೆ. ಈ ಮೂಲಕ ಪರಿಸರ ಕಾಳಜಿಯ ದ್ಯೋತಕವಾಗಿದ್ದ ಡಾ| ಬಿ. ಯಶೋವರ್ಮರ ಹೆಸರನ್ನು ಚಿರಸ್ಥಾಯಿಯಾಗಿಸಿದೆ.