ಬೆಳ್ತಂಗಡಿ: ಯುವಕರನ್ನು ತರಬೇತಿಗೊಳಿಸುವ ಸಂಸ್ಥೆಯೆಂದೇ ಪ್ರಸಿದ್ಧವಾಗಿರುವ ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆಯಾದ ಜೇಸಿ ಸಂಸ್ಥೆ, ಯುವಕರಿಗೆ ತರಬೇತಿಗಳನ್ನು ಸಂಘಟಿಸುವ ಮೂಲಕ ಸಮಾಜಕ್ಕೆ ಜವಾಬ್ದಾರಿಯುತ, ಪ್ರಬುದ್ಧ ನಾಯಕರನ್ನು ನೀಡುವ ಶಕ್ತಿಯನ್ನು ಹೊಂದಿದೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ| ಕೆ. ಎಸ್. ಮೋಹನ ನಾರಾಯಣ ಹೇಳಿದರು.
ಅವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಜೇಸಿಐ ಉಜಿರೆ ವತಿಯಿಂದ ಜೇಸಿ ಸದಸ್ಯರಿಗೆ ಮತ್ತು ಆಸಕ್ತರಿಗೆ ಆಯೋಜಿಸಿದ ಒಂದು ದಿನದ ಪರಿಣಾಮಕಾರಿ ಭಾಷಣ ಕಲೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ತರಬೇತಿಯ ಸಹಭಾಗಿತ್ವ ವಹಿಸಿ, ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಬೆಳ್ತಂಗಡಿ ನೂತನ ಅಧ್ಯಕ್ಷ ಡಾ| ಸುಧೀರ್ ಪ್ರಭು ಮಾತನಾಡಿ, ಸಮಾಜಕ್ಕೆ ಪ್ರಬುದ್ಧ ನಾಯಕರನ್ನು ಸೃಷ್ಟಿಸಬಲ್ಲ ಸಾಮರ್ಥ್ಯವಿರುವ ಇಂತಹ ತರಬೇತಿಯ ಸಹಭಾಗಿತ್ವ ವಹಿಸುತ್ತಿರುವುದಕ್ಕೆ ಹೆಮ್ಮೆ ಇದೆ ಎಂದರು.ಜೇಸಿಐ ಉಜಿರೆ ಅಧ್ಯಕ್ಷ ದೇವುದಾಸ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪೂರ್ವಾಧ್ಯಕ್ಷ ರಮೇಶ್ ಪೈಲಾರ್ ಸ್ವಾಗತಿಸಿದರು. ಜೆಜೆಸಿ ಆತ್ಮೀಯ ಶೆಟ್ಟಿ ಜೇಸಿ ವಾಣಿ ಉದ್ಘೋಷಿಸಿದರು. ನಿಕಟಪೂರ್ವ ಅಧ್ಯಕ್ಷ ಮಹೇಶ್ ಕುಮಾರ್ ಶೆಟ್ಟಿ, ಜೇಸಿರೆಟ್ ಸುಗುಣಾ ದೇವುದಾಸ್ ನಾಯಕ್ ಅತಿಥಿಗಳನ್ನು ಮತ್ತು ಜೆಜೆಸಿ ಅಧ್ಯಕ್ಷ ಜಿನಪ್ರಸಾದ್ ಜೈನ್ ತರಬೇತಿದಾರರನ್ನು ಸಭೆಗೆ ಪರಿಚಯಿಸಿದರು.
ಶಿಬಿರಾರ್ಥಿಗಳಿಗೆ ಜೇಸಿಐ ಭಾರತದ ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್, ಜೇಸಿ ವಲಯ ತರಬೇತಿದಾರ ರಾಮಚಂದ್ರ ರಾವ್ ತರಬೇತಿಯನ್ನು ನಡೆಸಿಕೊಟ್ಟರು.
ಸಮಾರೋಪ
ಜೇಸಿಐ ಉಜಿರೆ ಸಂಸ್ಥಾಪಕ ಸದಸ್ಯ ಹಾಗೂ ಜೇಸಿಐ ಭಾರತದ ರಾಷ್ಟ್ರೀಯ ತರಬೇತಿದಾರ ಪ್ರೊ| ಟಿ. ಕೃಷ್ಣಮೂರ್ತಿ ಮಾತನಾಡಿ, ತನಗೆ ಜೇಸಿ ಸಂಸ್ಥೆಯಿಂದ ಬೆಳೆಯಲು ಸಹಾಯವಾಗಿದ್ದು, ತರಬೇತಿಯಲ್ಲಿ ಭಾಗವಹಿಸಿದವರೆಲ್ಲರೂ ಜೇಸಿ ಸಂಸ್ಥೆಗೆ ಸೇರಿ, ತಾವೂ ಬೆಳೆದು ಇತರರನ್ನೂ ಬೆಳೆಸಬೇಕೆಂದು ಆಶಿಸಿದರು.
ಉಜಿರೆ ಜೇಸಿಐನ ಪೂರ್ವಾಧ್ಯಕ್ಷರು ಮತ್ತು ಹಿರಿಯ ಸದಸ್ಯರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಘಟಕ ಕಾರ್ಯದರ್ಶಿ ವಿಜಯೇಂದ್ರ ದೇವಾಡಿಗ ವಂದಿಸಿದರು.