Advertisement

‘ಯುವಪೀಳಿಗೆಯಲ್ಲಿ ಪ್ರಯೋಗಶೀಲ ಬದ್ಧತೆಯಿರಲಿ’

07:47 AM Mar 22, 2019 | Team Udayavani |

ಬೆಳ್ತಂಗಡಿ : ಶೈಕ್ಷಣಿಕ ಕಲಿಕೆಯ ನೆರವಿನೊಂದಿಗೆ ಕಂಡುಕೊಂಡ ಜ್ಞಾನವನ್ನು ಪ್ರಪಂಚದ ಒಳಿತಿಗಾಗಿ ಸದುಪಯೋಗಿಸಿಕೊಳ್ಳುವ ಪ್ರಯೋಗಶೀಲ ಬದ್ಧತೆ ಯುವ ಪೀಳಿಗೆಯಿಂದ ವ್ಯಕ್ತವಾಗಬೇಕು ಎಂದು ಇಸ್ರೋದ ನಿಕಟಪೂರ್ವ ಅಧ್ಯಕ್ಷ ಎ.ಎಸ್‌. ಕಿರಣ್‌ಕುಮಾರ್‌ ಅಭಿಪ್ರಾಯಪಟ್ಟರು.

Advertisement

ಎಸ್‌.ಡಿ.ಎಂ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಮಾತನಾಡಿ, ವಿಶ್ವದ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತೀಯರು ಐದನೇ ಸ್ಥಾನದ ಮನ್ನಣೆ ಪಡೆದಿದ್ದಾರೆ. ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳ ನಿರಂತರ ಶ್ರಮದ ಮೂಲಕ ಇಂಥ ಸಾಧನೆ ಸಾಧ್ಯವಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ಇಸ್ರೋ ಸಂಸ್ಥೆಯು ಭಾರತದ ರಕ್ಷಣಾ ವಲಯಕ್ಕೆ ಹೊಸ ಆಯಾಮ ನೀಡಿದ ಹೆಗ್ಗಳಿಕೆ ಹೊಂದಿದೆ. ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಾಗುವ ಸಾಧನೆಯನ್ನು ಸೂಕ್ಷ್ಮವಾಗಿ ಯುವ ಪೀಳಿಗೆ ಅವಲೋಕಿಸಬೇಕು. ಅವುಗಳಿಂದ ಪ್ರೇರಣೆ ಪಡೆದು ಸಾಧನೆಯ ಹಾದಿ ಕ್ರಮಿಸಬೇಕು. ಸಮಯವನ್ನು ಸದುಪಯೋಗಪಡಿಸಿಕೊಳ್ಳುವ ಅಪೇಕ್ಷೆಗಳೊಂದಿಗೆ ಶೈಕ್ಷಣಿಕ ಕಲಿಕೆ ರೂಢಿಸಿಕೊಳ್ಳಬೇಕು ಎಂದರು.

ಸಾಧಕರಿಗೆ ಸಮ್ಮಾನ
ಪಿ.ಎಚ್‌.ಡಿ. ಪದವಿ ಪಡೆದ ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ| ಲಕ್ಷ್ಮೀನಾರಾಯಣ, ಡಾ| ಸವಿತಾ ಕುಮಾರಿ, ಡಾ| ಪ್ರಿಯಾಕುಮಾರಿ, ಡಾ| ಪುರಂದರ, ಡಾ| ರಾಕೇಶ್‌ ಟಿ.ಎಸ್‌., ಡಾ| ಸತೀಶ್‌ ಗಣಪ ನಾಯಕ, ಶೈಕ್ಷಣಿಕ- ಕ್ರೀಡಾ ವಲಯದಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಮತ್ತು ಪ್ರತಿಭಾನ್ವಿತರನ್ನು ಸಮ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪ್ರೊ| ಟಿ.ಎನ್‌. ಕೇಶವ್‌ ಸ್ವಾಗತಿಸಿ, ಕಲಾ ನಿಕಾಯದ ಡೀನ್‌ ಡಾ| ಎ. ಜಯಕುಮಾರ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ಡಾ| ಬಿ.ಎ. ಕುಮಾರ ಹೆಗ್ಡೆ, ಡಾ| ಶ್ರೀಧರ ಭಟ್ಟ, ಶ್ರುತಿ ನಿರೂಪಿಸಿದರು. ಡಾ| ಬಿ.ಪಿ. ಸಂಪತ್‌ಕುಮಾರ್‌ ವಂದಿಸಿದರು.

ಆವಿಷ್ಕಾರಗಳಿಗೆ ಆದ್ಯತೆ
ಶೈಕ್ಷಣಿಕ ಕಲಿಕೆಯ ಹಿನ್ನೆಲೆಯನ್ನು ವೈಯಕ್ತಿಕ ಬೆಳವಣಿಗೆಯ ಉದ್ದೇಶಕ್ಕಷ್ಟೇ ಸೀಮಿತಗೊಳಿಸಿಸಬಾರದು. ಜತೆಗೆ ರಾಜ್ಯ, ರಾಷ್ಟ್ರ ಮತ್ತು ಪ್ರಪಂಚಕ್ಕೆ ಉಪಯುಕ್ತವೆನಿಸುವ ಕೊಡುಗೆ ನೀಡುವುದಕ್ಕೂ ಅನ್ವಯಿಸಿಕೊಳ್ಳಬೇಕು. ತಂಡ ಸ್ಫೂರ್ತಿಯ ಬೆಂಬಲದೊಂದಿಗೆ ನಮ್ಮ ದೇಶದ ಹೆಮ್ಮೆಯನ್ನು ಹೆಚ್ಚಿಸುವಂಥ ಆವಿಷ್ಕಾರಗಳಿಗೆ ಆದ್ಯತೆ ನೀಡಬೇಕು.
-ಎ.ಎಸ್‌. ಕಿರಣ್‌ಕುಮಾರ್‌,
ನಿಕಟಪೂರ್ವ ಅಧ್ಯಕ್ಷರು, ಇಸ್ರೋ

Advertisement

Udayavani is now on Telegram. Click here to join our channel and stay updated with the latest news.

Next