Advertisement

ಉಜಿರೆಗೆ ಬೇಕಿದೆ ವ್ಯವಸ್ಥಿತ ವಾಹನ ನಿಲುಗಡೆ ಸೌಲಭ್ಯ

06:33 AM Feb 27, 2019 | |

ಉಜಿರೆ : ರಾಜ್ಯ ಹೆದ್ದಾರಿ ಮತ್ತು ರಾ.ಹೆ.ಗಳು ಸಂಧಿಸುವ ಉಜಿರೆಯಲ್ಲಿ ವಾಹನದಟ್ಟಣೆ ಮುಖ್ಯ ಸಮಸ್ಯೆಯಾಗಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಉಜಿರೆ ಪೇಟೆಯಲ್ಲಿ ವಾಹನ ನಿಲುಗಡೆಗೆ ನಿರ್ದಿಷ್ಟ ಸ್ಥಳಾವಕಾಶ ನಿಗದಿ ಪಡಿಸದಿರುವುದು ಸಮಸ್ಯೆಯ ಹೆಚ್ಚಳಕ್ಕೆ ಎಡೆಮಾಡಿಕೊಟ್ಟಿದೆ.

Advertisement

ಮುಖ್ಯ ರಸ್ತೆಯ ಆಸುಪಾಸಿನಲ್ಲಿ, ಅಂಗಡಿಗಳ ಮುಂಭಾಗದಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದೆ. ವಿದ್ಯಾರ್ಥಿಗಳು ಅಧಿಕವಾಗಿರುವ ಸ್ಥಳದಲ್ಲಿ ವಾಹನಗಳನ್ನು ಹಾಗೆ ನಿಲ್ಲಿಸುವುದು ಅಪಾಯಕಾರಿ. ವಾಹನಗಳು ಎಲ್ಲೆಂದರಲ್ಲಿ ನಿಂತ ಪರಿಣಾಮ ಉಜಿರೆಯಂತಹ ಸಣ್ಣ ಪೇಟೆ ಯಲ್ಲೂ ವಾಹನಗಳೆಲ್ಲ ಹಾರನ್‌ ಹಾಕುತ್ತಾ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಮುಖ್ಯ ರಸ್ತೆಯು ವಾಹನಗಳ ದಟ್ಟಣೆ ತಡೆಯುವಷ್ಟು ಸಮರ್ಥವಾಗಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

ವಾಹನ ನಿಲುಗಡೆಗೆ ಸ್ಥಳವಿಲ್ಲ
ವಾಹನ ನಿಲುಗಡೆಗೆ ವ್ಯವಸ್ಥೆ ಇಲ್ಲದೇ ಇರುವುದೇ ಈ ಸಮಸ್ಯೆಗಳಿಗೆ ಮೂಲ. ಪಾದಚಾರಿಗಳಿಗೆ ಕ್ರಮಿಸಲು ಪ್ರತ್ಯೇಕ ಮಾರ್ಗವಿಲ್ಲ. ರಸ್ತೆಯ ಎರಡು ಬದಿಗಳ ಸ್ಥಳಾವಕಾಶದಲ್ಲಿಯೇ ಅಂಗಡಿಗಳಿಗೂ ಸ್ಥಳವಾಗಬೇಕು, ಪಾದಚಾರಿಗಳೂ ಕ್ರಮಿಸಬೇಕು, ಜತೆಗೆ ವಾಹನಗಳೂ ನಿಲುಗಡೆಯಾಗಬೇಕು ಎಂದಾಗ ಸಹಜವಾಗಿಯೇ ಸಮಸ್ಯೆಯಾಗುತ್ತಿದೆ.

ಏನಾಗಬೇಕು?
ಪಾದಚಾರಿ ಮಾರ್ಗವನ್ನು ನಿರ್ಮಿಸಿ, ವಾಹನ ನಿಲುಗಡೆಗೆ ನಿಗದಿತ ಸ್ಥಳವನ್ನು ಪಂಚಾಯತ್‌ ಗುರುತಿಸಿದರೆ ಸಮಸ್ಯೆಗೆ ಪರಿಹಾರ ಸಾಧ್ಯ. ಜತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಜೀಬ್ರಾ ಕ್ರಾಸನ್ನು ಗುರುತಿಸಿ ರಸ್ತೆ ದಾಟಲು ವ್ಯವಸ್ಥೆ ರೂಪಿಸಬೇಕು. ಜತೆಗೆ ಸಣ್ಣ ಅಂಗಡಿಗಳಿಗೆ ನಿರ್ದಿಷ್ಟ ಜಾಗವನ್ನು ನಿಗದಿಪಡಿಸಬೇಕಿದೆ. 

ಶೀಘ್ರ ಪರಿಹಾರ
ಪಾರ್ಕಿಂಗ್‌ ಸಮಸ್ಯೆ ಈಗಾಗಲೇ ನಮ್ಮ ಗಮನಕ್ಕೂ ಬಂದಿದೆ. ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇವೆ. ಶೀಘ್ರದಲ್ಲೇ ಪರಿಹಾರ ಕ್ರಮ ಕೈಗೊಳ್ಳಲಾಗುವುದು.
 - ಪ್ರಕಾಶ್‌ ಶೆಟ್ಟಿ ಪಿಡಿಒ, ಉಜಿರೆ ಗ್ರಾ.ಪಂ.

Advertisement

 ಫ‌ುಟ್‌ಪಾತ್‌ ಅಗತ್ಯ
ಪಾರ್ಕಿಂಗ್‌ಗೆ ನಿರ್ದಿಷ್ಟ ಸ್ಥಳ ಗುರುತಿಸಿದರೆ ಒಳ್ಳೆಯದು. ಇದರಿಂದ ಪಾದಚಾರಿಗಳಿಗೆ ಸಂಚರಿಸಲು ಸಹಾಯವಾಗುತ್ತದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರ ಓಡಾಟಕ್ಕೆ ಫ‌ುಟ್‌ಪಾತ್‌ ಆವಶ್ಯಕತೆ ಇದೆ.
 -ಶರತ್‌ ಕುಮಾರ್‌, ವಿದ್ಯಾರ್ಥಿ

ಶಿವಪ್ರಸಾದ್‌ ಹಳುವಳ್ಳಿ
ಉದಯವಾಣಿ ವಿದ್ಯಾರ್ಥಿ ಪತ್ರಕರ್ತ ಯೋಜನೆ (ಯುಎಸ್‌ಜೆಪಿ)ಯ ಶಿಕ್ಷಣಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next