Advertisement

ಉಜಿರೆ ಟು ಕೋಲಾರ: ಬಾಲಕ ಅನುಭವ್ ಅಪಹರಣಕಾರರ ಬಂಧನ ಹೇಗಾಯ್ತು?

09:44 AM Dec 19, 2020 | keerthan |

ಬೆಳ್ತಂಗಡಿ: ಉಜಿರೆಯ ಎಂಟು ವರ್ಷದ ಬಾಲಕ ಅನುಭವ್ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಅಪಹರಣವಾಗಿ 48 ಗಂಟೆಯ ಒಳಗಾಗಿ ಪೊಲೀಸರು ಬಾಲಕನನ್ನು ರಕ್ಷಿಸಿ, ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

Advertisement

ಕೋಲಾರದ ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊರ್ನಹೊಸಳ್ಳಿ ಗ್ರಾಮದಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ಸಹಾಯದಿಂದ ಮಂಗಳೂರು ಪೊಲೀಸರ ತಂಡ ಬಾಲಕನನ್ನು ರಕ್ಷಿಸಿ, ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಸಫಲವಾಗಿದೆ.

ಕೋಲಾರದ ಮಂಜುನಾಥ್, ಮಂಡ್ಯದ ಗಂಗಾಧರ್, ಬೆಂಗಳೂರಿನ ಕೋಮಲ್, ಕೋಲಾರದ ಮಹೇಶ್ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಉಜಿರೆ ಉದ್ಯಮಿ ರಥಬೀದಿ ನಿವಾಸಿ ಎ.ಕೆ.ಶಿವನ್ ಎಂಬುವರ ಮೊಮ್ಮಗ ಅನುಭವ್ (8) ವರ್ಷದ ಮಗುವನ್ನು ಗುರುವಾರ ಸಂಜೆ ಮನೆ ಮುಂಭಾಗದಿಂದ ದುಷ್ಕರ್ಮಿಗಳು ಕಾರಿನಲ್ಲಿ ಅಪಹರಣ ಮಾಡಿದ್ದರು. ಮನೆ ಮಂದಿ ನೋಡನೋಡುತ್ತಿದ್ದಂತೆ ಸಿನಿಮೀಯ ರೀತಿಯಲ್ಲಿ ಬಾಲಕನ ಅಪಹರಣ ನಡೆಸಲಾಗಿತ್ತು. ಬಾಲಕನ ಬಿಡುಗಡೆಗೆ ಮೊದಲು 17 ಕೋಟಿ ರೂ. ಬೇಡಿಕೆಯಿರಿಸಿದ್ದ ದುಷ್ಕರ್ಮಿಗಳು ನಂತರ 10 ಕೋಟಿ ರೂ. ನೀಡುವಂತೆ ಆಗ್ರಹಿಸಿದ್ದರು.

Advertisement

ಉಜಿರೆ ಟು ಕೋಲಾರ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಉಜಿರೆಯಲ್ಲಿ ಅಪಹರಣಕ್ಕೊಳಗಾದ ಬಾಲಕ ಪತ್ತೆಯಾಗಿದ್ದು ಸುಮಾರು 380 ಕಿ.ಮೀ ದೂರದ ಕೋಲಾರದಲ್ಲಿ. ಗುರುವಾರ ಸಂಜೆ ಬಾಲಕನ ಅಪಹರಣ ಮಾಡಿದ್ದ ಅರೋಪಿಗಳು ನಂತರ ಹಲವೆಡೆ ಸುತ್ತಾಡಿ ಕೋಲಾರಕ್ಕೆ ಕರೆದೊಯ್ದಿದ್ದರು ಎನ್ನಲಾಗಿದೆ.

ಇದನ್ನೂ ಓದಿ:ಅನುಭವ್ ಅಪಹರಣದ ಹಿಂದೆ ಹಲವು ಆಯಾಮ:ಪರಿಚಿತರಿಂದಲೇ ಅಪಹರಣ ಶಂಕೆ! ಏನಿದು ಬಿಟ್ ಕಾಯಿನ್ ರಹಸ್ಯ?

ಬಾಲಕನನ್ನು ಕೋಲಾರದ ಕೊರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಅವರ ಮನೆಯಲ್ಲಿರಿಸಿದ್ದರು. ಆರೋಪಿಗಳ ಮೊಬೈಲ್ ನೆಟ್ ವರ್ಕ್ ನ ನಿಗಾ ಇರಿಸಿದ್ದ ಪೊಲೀಸರು ಪತ್ತೆಗಾಗಿ ಬಲೆ ಬೀಸಿದ್ದರು. ಗುರುವಾರ ರಾತ್ರಿ ಮಂಜುನಾಥ್ ಮೊಬೈಲ್ ಬಳಕೆ ಮಾಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ತಂಡ ಇಂದು ಮುಂಜಾನೆ 3.30ರ ಸುಮಾರಿಗೆ ಕೊರ್ನಹೊಸಳ್ಳಿಯ ಮಂಜುನಾಥ್ ಮನೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, ಬಾಲಕನನ್ನು ಸುರಕ್ಷಿತವಾಗಿ ಮರಳಿ ಪಡೆದಿದ್ದಾರೆ.

ಬೆಳಗ್ಗೆ 11 ಗಂಟೆಗೆ ಆರೋಪಿಗಳನ್ನು ಕೋಲಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ನಂತರ ಬೆಳ್ತಂಗಡಿಗೆ ಕರೆತರಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next