Advertisement
ಮಗುವಿನ ಅಪಹರಣ ಪ್ರಕರಣ ಡಿ.17ರ ಸಂಜೆ 6.30 ಹೊತ್ತಿಗೆ ನಡೆದು ಅರ್ಧ ತಾಸಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಗುವಿನ ಚಿತ್ರ ಸಹಿತ ಸಂದೇಶ ಹರಿದಾಡಲು ಆರಂಭಿಸಿದೆ. ಸಾಮಾಜಿಕ ಜಾಲತಾಣದ ಸಂದೇಶಗಳು ವಿಶ್ವಾಸಾರ್ಹ ಅಲ್ಲ ಎಂಬ ಚರ್ಚೆಗಳು ಒಂದೆಡೆಯಾದರೆ, ಸ್ಥಳೀಯರು ಹಾಗೂ ಪೋಷಕರು ಮಾಹಿತಿ ಖಚಿತ ಪಡಿಸುತ್ತಿದ್ದಂತೆ, ಇದು ಉಜಿರೆ ಗ್ರಾಮಲ್ಲಿ ಜನತೆಗೆ ಅರಗಿಸಿಕೊಳ್ಳದಷ್ಟು ಹೃದಯವಿದ್ರಾವಕ ಘಟನೆಯಾಗಿ ಬದಲಾಗಿತ್ತು.
Related Articles
Advertisement
ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ನಡೆಸಿದ ಘಟನೆ ತಾಲೂಕಿನಲ್ಲಿ ಮಾತ್ರವಲ್ಲದೆ ಜಿಲ್ಲೆಯಲ್ಲೇ ಕಳೆದ ಎರಡು ವರ್ಷಗಳಿಂದ ನಡೆದಿರಲಿಲ್ಲ ಎಂಬುದು ಪೊಲೀಸ್ ದಾಖಲೆಯಿಂದ ಸ್ಪಷ್ಟವಾಗುತ್ತಿದೆ. ಹೆಚ್ಚಾಗಿ ಪೋಷಕರು ಗದರಿರುವುದು, ತಪ್ಪು ಮಾಡಿದ ವಿಚಾರಕ್ಕೆ ಹೊಡೆದಿರುವ ಕೋಪದಲ್ಲೊ ಮನೆ ಬಿಟ್ಟು ಹೋಗಿರುವ ಪ್ರಕರಣ ಸರ್ವೇ ಸಾಮಾನ್ಯ. ಗ್ರಾಮಾಂತರ ಭಾಗದಲ್ಲಿ ಅಪಹರಣ ನಡೆಸಿ 17 ಕೋಟಿಗೆ ಬೇಡಿಕೆ ಇಟ್ಟಿರುವುದು ರಾಷ್ಟ್ರದ ಮಟ್ಟದ ಸುದ್ದಿಯಾಗಿದೆ.
ಬೆಂಗಳೂರು, ಮುಂಬೈ ಸೇರಿದಂತೆ ಮಹಾನಗರಗಳಲ್ಲಿ ದಿನಕ್ಕೊಂದರಂತೆ ಇಂತಹ ಪ್ರಕರಣಗಳು ನಡೆಯುವ ಸಾಧ್ಯತೆ ಇರುತ್ತದೆ. ಆದರೆ ಇದೊಂದು ಹೊಸ ಪ್ರಕರಣದಲ್ಲಿ ಹಣದ ವ್ಯವಹಾರದ ಕೆಲ ವದಂತಿಗಳು ಪೊಲೀಸ್ ಅಧಿಕಾರಿಗಳಿಗೆ ಸವಾಲಾಗಿದೆ. ಎಸ್.ಪಿ. ಲಕ್ಷ್ಮೀಪ್ರಸಾದ್ ಅವರ ನೇತೃತ್ವದಲ್ಲಿ ಐದು ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಮಧ್ಯಾಹ್ನ ಅಪಹರಣಕಾರರು ಪೊಲೀಸ್ ದೂರು ನೀಡಿರುವ ಬಗ್ಗೆ ಮಗುವಿನ ತಂದೆಗೆ ಎಚ್ಚರಿಕೆ ನೀಡಿದ್ದರಿಂದ ಮಾಧ್ಯಮದೊಂದಿಗೆ ಮಾತನಾಡಲು ಕೂಡ ಪೋಷಕರು ಹೆದರಿದ್ದರು. ಹಿಂದಿ ಭಾಷೆಯಲ್ಲಿ ವ್ಯವಹಾರ ನಡೆಸುತ್ತಿರುವ ಮಂದಿ, ಬಿಟ್ ಕಾಯಿನ್ ವಿಚಾರ ಪ್ರಸ್ತಾಪವಾಗಿರಿವುದರಿಂದ ತನಿಖೆ ದಿಕ್ಕು ಬದಲಾಗಿದೆ. ನಾನಾ ಆಯಾಮಗಳಿಂದ ತನಿಖೆ ಮುಂದುವರಸಲಾಗಿದೆ.
ಅಪಹರಣಕ್ಕೊಳಗಾದ ಮಗುವಿನ ತಂದೆ ಬಿಜೊಯ್ ಅವರಿಗೆ ನಿರಂತರ ಸಾಮಾಜಿಕ ಜಾಲತಾಣದಲ್ಲಿ ಅಪಹರಣಕಾರರ ಸಂದೇಶ ರವಾನೆಯಾಗುತ್ತಿದೆ. ಶುಕ್ರವಾರ ಮಧ್ಯಾಹ್ನ ವೇಳೆಗೆ 100 ಬಿಟ್ ಕಾಯಿನ್ ವಿಚಾರ 60 ಬಿಟ್ ಕಾಯಿನ್ ಅಂದರೆ 10 ಕೋಟಿ. ರೂ. ಗೆ ಬಂದು ನಿಂತಿದ್ದು ಮತ್ತಷ್ಟು ಕಡಿಮೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಸಂಜೆ ವೇಳೆಗೆ ಲಭ್ಯವಾಗಿದೆ.
ಮಧ್ಯಾಹ್ನ ಎಸ್.ಪಿ.ಲಕ್ಷ್ಮೀಪ್ರಸಾದ್ ಹಾಗೂ ಬಂಟ್ವಾಳ ಡಿವೈಎಸ್ ಪಿ ವೆಲೆಂಟೈನ್ ಡಿಸೋಜ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮನೆಮಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ: ಉಜಿರೆ ಮಗು ಅಪಹರಣ ಪ್ರಕರಣ: 17 ಕೋ.ರೂ. ಬೇಡಿಕೆಯಿಟ್ಟ ದುಷ್ಕರ್ಮಿಗಳು, ತೀವ್ರಗೊಂಡ ಶೋಧ
ಬಿಟ್ ಕಾಯಿನ್ ಎಂದರೇನು ?
ಅಪಹರಣಕಾರರು ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸಿದ್ದರಿಂದ ಘಟನೆ ಮತ್ತೊಂದು ಸ್ವರೂಪ ಪಡೆದಿದೆ. ಬಿಟ್ ಕಾಯಿನ್ ಡಿಜಿಟಲ್ ಹಣಕಾಸು ಅಥವಾ ಡಿಜಿಟಲ್ ಕರೆನ್ಸಿ ಆಗಿದೆ. ಅಂದರೆ ಆನ್ ಲೈನ್ ಮೂಲಕ ಪಾವತಿಸಲು ನಿಜವಾದ ನಾಣ್ಯವನ್ನು ನೀಡಬೇಕಾಗಿಲ್ಲ. ಇಂದು ಸುಮಾರು 800ರಷ್ಟು ಇಂತಹ ಕ್ರಿಪ್ಟೋಕರೆನ್ಸಿ (cryptocurrency) ಗಳಿವೆ. ಈ ತಂತ್ರಜ್ಞಾನವನ್ನು ಬ್ಲಾಕ್ಚೈನ್ (blockchain) ಎಂಬ ನೂತನ ವಿಧಾನದ ಆಧಾರದಲ್ಲಿ ಸಾರ್ವಜನಿಕರಿಗೆ ಮಿಥ್ಯಾಹಣದ ಮೂಲಕ ಸುಲಭವಾಗಿ ತಮ್ಮ ಹಣಕಾಸಿನ ವ್ಯವಹಾರಗಳನ್ನು ವಿಶ್ವಮಟ್ಟದಲ್ಲಿ ನಡೆಸಲು ಸಾಧ್ಯವಾಗುತ್ತದೆ.
ಕ್ರಿಪ್ಟೋಕರೆನ್ಸಿಯನ್ನು ಬಳಸಿ ಹಣದ ವ್ಯವಹಾರ ನಡೆಸುವ ವೀಸಾ, ಮಾಸ್ಟರ್ ಕಾರ್ಡ್ ಮೊದಲಾದ ವ್ಯವಸ್ಥೆಗಳು ಈಗಾಗಲೇ ಇವೆ. ಆದರೆ ಇವು ಒಂದು ದೇಶದಿಂದ ಇನ್ನೊಂದು ದೇಶದ ನಡುವಣ ವ್ಯವಹಾರದಲ್ಲಿ ಮೊದಲು ಈ ದೇಶದ ಹಣವನ್ನು ಡಾಲರುಗಳಿಗೂ, ಬಳಿಕ ಡಾಲರುಗಳಿಂದ ಆ ದೇಶದ ಹಣಕ್ಕೂ ಪರಿವರ್ತಿಸಿ ವಹಿವಾಟು ನಡೆಸುತ್ತವೆ. ಆದರೆ ಈ ಎರಡೂ ಪರಿವರ್ತನೆಗಳಲ್ಲಿ ಸಂಸ್ಥೆಗಳು ಅಪಾರವಾದ ಕಮೀಶನ್ ಅಥವಾ ದಲ್ಲಾಳಿ ಹಣವನ್ನು ಪಡೆಯುತ್ತವೆ. ಅಲ್ಲದೇ ಈ ವಹಿವಾಟು ಸರಕಾರದ ಆಧೀನದಲ್ಲಿಯೇ ಬ್ಯಾಂಕುಗಳ ಮುಖಾಂತರ ನಡೆಯುತ್ತದೆ. ಆದರೆ ಬಿಟ್ ಕಾಯಿನ್ ಗೆ ಯಾವುದೇ ನಿರ್ಬಂಧವಿಲ್ಲ. ನಮ್ಮ ದೇಶದ ವಿತ್ತ ಸಚಿವಾಲಯ ಹಾಗೂ ಆರ್ ಬಿಐ ಸದ್ಯಕ್ಕೆ ಈ ಹಣಕ್ಕೆ ಭಾರತದಲ್ಲಿ ಸರಕಾರದ ಮಾನ್ಯತೆ ಇಲ್ಲ ಎಂದಿದೆ.
ಇದನ್ನೂ ಓದಿ: ಉಜಿರೆ ಮಗು ಕಿಡ್ನಾಪ್ ಫಾಲೋಅಪ್: 17 ಕೋಟಿ ಬದಲು 10 ಕೋಟಿ ರೂ. ಬೇಡಿಕೆಯಿಟ್ಟ ಅಪಹರಣಕಾರರು
ತನಿಖೆ ಮುಂದುವರೆದಿದೆ:
ಮಗುವನ್ನು ಸುರಕ್ಷಿತವಾಗಿ ಕರೆತರಬೇಕಾಗಿದ್ದರಿಂದ ಎಲ್ಲಾ ಆಯಾಮಗಳಲ್ಲಿ ತನಿಖೆ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳು ರವಾನೆಯಾಗುತ್ತಿದ್ದು, ಸ್ಪಷ್ಟಮಾಹಿತಿ ಇಲ್ಲದೆ ಸಂದೇಶಗಳನ್ನು ಹರಿಬಿಡುತ್ತಿರುವುದರಿಂದ ತನಿಖೆಗೆ ಅಡ್ಡಿಯಾಗುತ್ತಿದೆ. ಸಾರ್ವಜನಿಕರು ಸಂಯಮದಿಂದ ವರ್ತಿಸಿ ತನಿಖೆಗೆ ಸಹಕರಿಸುವಂತೆಯೂ ದ.ಕ.ಪೊಲೀಸ್ ವರಿಷ್ಠಾಧಿಕಾರಿ ಲಕ್ಣ್ಮೀಪ್ರಸಾದ್ ವಿನಂತಿಸಿದ್ದಾರೆ.