ಬೆಳ್ತಂಗಡಿ: ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಸಿನಿಮೀಯ ರೀತಿಯಲ್ಲಿ ಅಪಹರಣ ನಡೆಸಿದ ಘಟನೆ ಗುರುವಾರ ಉಜಿರೆಯ ರಥಬೀದಿ ಅಶ್ವತ್ಥ ಕಟ್ಟೆ ಸಮೀಪ ನಡೆದಿದ್ದು, ಅಪಹರಣಕಾರರು 17 ಕೋ.ರೂ. ಗೆ ಬೇಡಿಕೆಯಿಸಿದ್ದಾರೆ.
ಉಜಿರೆ ಉದ್ಯಮಿ ರಥಬೀದಿ ನಿವಾಸಿ ಎ.ಕೆ.ಶಿವನ್ ಎಂಬುವರ ಮೊಮ್ಮಗ ಅನುಭವ್ (8) ವರ್ಷದ ಮಗುವನ್ನು ಮನೆ ಮುಂಭಾಗದಿಂದ ಆಟವಾಡುತ್ತಿದ್ದ ವೇಳೆ ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದು, ಮನೆ ಮಂದಿ ಕಾರಿನ ಬಳಿ ಬಂದಂತೆ ಪರಾರಿಯಾಗಿದ್ದಾರೆ. ಬಳಿಕ ಮಗುವಿನ ತಾಯಿಗೆ ಕರೆ ಮಾಡಿ 100 ಬಿಟ್ ಕಾಯಿನ್ ಅಂದರೆ 17 ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದಾರೆ.
ಘಟನೆಯ ಹಿಂದೆ ಹಣಕಾಸು ವ್ಯವಹಾರದ ಶಂಕೆ ಬಲವಾಗಿದೆ. ಅಪಹರಣಕಾರರು ಬೆಳ್ತಂಗಡಿ ತಾಲೂಕಿನಲ್ಲೇ ಓಡಾಟ ನಡೆಸುತ್ತಿರುವ ಬಗ್ಗೆಯೂ ಅನುಮಾನ ವ್ಯಕ್ತವಾಗಿದೆ ಎನ್ನಲಾಗಿದೆ.
ಮನೆಮಂದಿ ಎದುರೇ ಅಪಹರಣ
ಬಿಳಿ ಇಂಡಿಕಾ ಕಾರಿನಲ್ಲಿ ನಾಲ್ವರು ಮನೆಮುಂದೆ ಮಗು ಅಪಹರಣ ಆಗುವ 10 ನಿಮಿಷದಿಂದ ನಿಂತಿರುವುದನ್ನು ಮನೆ ಮಂದಿ ಗಮನಿಸಿದ್ದರು. ಬಳಿಕ ಸಂಜೆ 6.30 ರ ಸುಮಾರಿಗೆ ಅಪಹರಣ ನಡೆಸಿ ಚಾರ್ಮಾಡಿ ಅಥವಾ ಧರ್ಮಸ್ಥಳ ಮಾರ್ಗವಾಗಿ ಸಂಚರಿಸಿರುವ ಅನುಮಾನ ವ್ಯಕ್ತವಾಗಿದೆ. ಪೊಲೀಸರು ಶೋಧ ಕಾರ್ಯ ನಡೆಸಿದ್ದು, ಅಪಹರಣಕಾರರ ಮೊಬೈಲ್ ನೆಟ್ವರ್ಕ್ ಒಂದು ಬಾರಿ ಹಾಸನ, ಮತ್ತೊಮ್ಮೆ ಅಲೂರು ದಾಟಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ತಕ್ಷಣ ಮುಂಡಾಜೆ ಹಾಗೂ ಕೊಟ್ಟಿಗೆಹಾರದಲ್ಲಿ ನಾಕಾಬಂದಿ ವಿಧಿಸಲಾಗಿತ್ತು.
ಹಿಂದಿ ಭಾಷೆಯಲ್ಲಿ ವ್ಯವಹಾರ
ಅಪಹರಣಕಾರರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಕುರಿತು ಮನೆ ಮಂದಿ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ಒಂದು ವಾರಗಳಿಂದ ರಥಬೀದಿ ಸಮೀದಲ್ಲೆ ಬಿಳಿ ಇಂಡಿಕಾದಲ್ಲಿ ಅನುಮಾನಸ್ಪದ ವ್ಯಕ್ತಿಗಳು ಇರುತ್ತಿದ್ದ ಕುರಿತು ಮೈದಾನದಲ್ಲಿ ಆಟವಾಡುತ್ತಿದ್ದ ಯುವಕರು ಮಾಹಿತಿ ಸ್ಪಷ್ಟಪಡಿಸಿದ್ದಾರೆ. ಅಪಹರಣಗೊಳಿಸಿದ ಕಾರು ಹಳದಿ ನಂಬರ್ ಪ್ಲೇಟ್ ಇರುವುದಾಗಿ ಮನೆಮಂದಿ ಗಮನಿಸಿದ್ದಾರೆ.
ಇದನ್ನೂ ಓದಿ:ಉಜಿರೆ: ಆಟವಾಡುತ್ತಿದ್ದ 8 ವರ್ಷದ ಮಗುವಿನ ಅಪಹರಣ: ಪೊಲೀಸರಿಂದ ಶೋಧ ಕಾರ್ಯ
ಮಗು ಅಪಹರಣ ಸುದ್ದಿ ಸಂಜೆ ವೇಳೆಗೆ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿದ್ದು, ಪೊಲೀಸರು ಸಿಸಿ ಕೆಮರಾ ಪರಿಶೀಲನೆ ನಡೆಸಿದರೂ ವಾಹನದ ಗುರುತು ಪತ್ತೆಯಾಗಿಲ್ಲ. ಆತಂಕದಿಂದ ಮನೆಮಂದಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬಂಟ್ವಾಳ ಡಿವೈಎಸ್ ಪಿ ವೆಲೆಂಟೈನ್ ಡಿಸೋಜ ಅವರ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್, ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಪವನ್ ಕುಮಾರ್ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ.