ನವದೆಹಲಿ: ನಾಲ್ಕು ವರ್ಷಗಳ ಪದವಿಯನ್ನು ಪೂರ್ಣಗೊಳಿಸಿದ ಬಳಿಕವೇ ವಿದ್ಯಾರ್ಥಿಗಳಿಗೆ “ಆನರ್ಸ್’ (honours) ಪದವಿ ನೀಡಲು ಸಾಧ್ಯ. ಹೀಗೆಂದು ಯುಜಿಸಿಯ ಹೊರ ಕರಡು ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಹೊಸ ಶಿಕ್ಷಣ ನೀತಿ (ಎನ್‌ಇಪಿ)ಯ ಅನ್ವಯ ರಚಿಸಲಾಗಿರುವ ಪಠ್ಯಕ್ರಮ ಮತ್ತು ನಾಲ್ಕು ವರ್ಷದ ಪದವಿಗಾಗಿ ಇರುವ ಕ್ರೆಡಿಟ್ ಫ್ರೆಮ್‌ವರ್ಕ್‌ನ ಕರಡು ಪ್ರತಿಯಲ್ಲಿ ಅದನ್ನು ವಿವರಿಸಲಾಗಿದೆ. ಸೋಮವಾರ (ಡಿ.12) ಅದನ್ನು ಬಿಡುಗಡೆಗೊಳಿಸಲಾಗುತ್ತದೆ.
120 ಕ್ರೆಡಿಟ್‌ಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ಪದವಿ ನೀಡಲಾಗುತ್ತದೆ. ಇದರ ಜತೆಗೆ ಅಗತ್ಯ ಇರುವ ಶೈಕ್ಷಣಿಕ ಅವಧಿಯೂ ಪೂರೈಕೆಯಾಗಿರಬೇಕು.
ಸಂಶೋಧನೆ ನಡೆಸುವ ಬಗ್ಗೆ ವಿದ್ಯಾರ್ಥಿಗಳು ಆಸಕ್ತಿ ಹೊಂದಿದ್ದಾರೆ ಎಂದಾದರೆ ನಾಲ್ಕನೇ ವರ್ಷದ ಅವಧಿಯಲ್ಲಿ ಅವರು ಅದನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಅದನ್ನು ಪೂರ್ತಿಗೊಳಿಸಿದ ಬಳಿಕ ನಾಲ್ಕು ವರ್ಷಗಳ ಪದವಿ ಪೂರ್ಣಗೊಂಡು ಆನರ್ಸ್ ಎಂಬ ಪ್ರಮಾಣಪತ್ರ ಬೇಕಾಗಿದ್ದರೆ 160 ಕ್ರೆಡಿಟ್‌ಗಳು ಪೂರ್ಣಗೊಂಡಿರಬೇಕು ಎಂದು ಹೊಸ ನಿಯಮಗಳಲ್ಲಿದೆ.
ಮೂರು ವರ್ಷದ ಪದವಿ ಕೋರ್ಸ್‌ಗಳಿಗೆ ನೋಂದಣಿ ಮಾಡಿಸಿಕೊಂಡು ಪ್ರವೇಶ ಪಡೆದವರಿಗೆ ಕೂಡ ಹಾಲಿ ಇರುವ ಆಯ್ಕೆ ಆಧಾರಿತ ಕ್ರೆಡಿಟ್ ವ್ಯವಸ್ಥೆ (ಸಿಬಿಸಿಎಸ್)ಯ ಅನ್ವಯ ನಾಲ್ಕು ವರ್ಷದ ಪದವಿ ಕೋರ್ಸ್ ಪಡೆಯಲೂ ಅವಕಾಶ ಕಲ್ಪಿಸಲಾಗಿದೆ. ಆಯಾ ವಿವಿಗಳು ಬ್ರಿಡ್ಜ್ ಕೋರ್ಸ್‌ಗಳ ಮೂಲಕ ಈ ವ್ಯವಸ್ಥೆಯನ್ನು ಪಡೆದುಕೊಳ್ಳಲು ಅನುವು ಮಾಡಿಕೊಡಬಹುದಾಗಿ ಎಂದು ಯುಜಿಸಿ ಹೇಳಿದೆ.