ಕೋವಿಡ್-19 ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಅತ್ಯಂತ ಗಂಭೀರ ವಾದ ಪರಿಣಾಮವನ್ನುಂಟು ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಅಂದರೆ 2020-21ರ ಶೈಕ್ಷಣಿಕ ವರ್ಷ ಸಂಪೂರ್ಣ ಗೊಂದಲಮಯವಾಗಿ ಸಾಗಿದೆ. ಕೊರೊನಾ ಸೃಷ್ಟಿಸಿದ ಅವಾಂತರಗಳಿಂದಾಗಿ ದೇಶದ ಶಿಕ್ಷಣ ವ್ಯವಸ್ಥೆ ಹೊಸ ಮಗ್ಗುಲಿಗೆ ಹೊರಳಲೇಬೇಕಾದ ಅನಿವಾರ್ಯ ಸೃಷ್ಟಿ ಯಾಯಿತು. ಇದರಿಂದಾಗಿ ಈ ಸಾಲಿನ ಪ್ರತಿಯೊಂದೂ ಉಪಕ್ರಮಗಳು ಪ್ರಯೋಗಾತ್ಮಕವಾಗಿಯೇ ನಡೆದವು. ಶಿಕ್ಷಣ ಎನ್ನುವುದು ಕೇವಲ ಭೌತಿಕ ತರಗತಿಗಳಿಗೆ ಸೀಮಿತ ಎಂಬ ನಮ್ಮ ಕಲ್ಪನೆ ಈಗ ಬದಲಾಗತೊಡಗಿದೆ. ಆನ್‌ಲೈನ್ ಶಿಕ್ಷಣದ ಪರಿಕಲ್ಪನೆಗೆ ದೇಶದ ಇಡೀ ವ್ಯವಸ್ಥೆ ತನ್ನ ಗಮನವನ್ನು ಕೇಂದ್ರೀಕರಿಸಲೇಬೇಕಾಗಿದೆ.
ಈ ಗೋಜಲುಮಯ ಪರಿಸ್ಥಿತಿ ಈ ಸಾಲಿಗೆ ಸೀಮಿತವಾಗಿರಲಿದೆ ಎಂಬ ನಮ್ಮೆಲ್ಲರ ಕಲ್ಪನೆಯನ್ನು ಕೊರೊನಾ ಎರಡನೇ ಅಲೆ ಹುಸಿ ಮಾಡಿದೆ. ಮುಂಬರುವ ಅಂದರೆ 2021-22ನೇ ಸಾಲಿನ ಶೈಕ್ಷಣಿಕ ವರ್ಷವೂ ಈ ಬಾರಿಗಿಂತಲೂ ಇನ್ನಷ್ಟು ಗೊಂದಲಮಯವಾಗಿರಲಿದೆ ಎಂಬ ಸುಳಿವು ಈಗಾಗಲೇ ಲಭಿಸಿದೆ. ಹಾಲಿ ಶೈಕ್ಷಣಿಕ ಋತುವಿನ ಉದ್ದಕ್ಕೂ ಆನ್‌ಲೈನ್, ಆಫ್ಲೈನ್ ಎಂಬ ಜಿಜ್ಞಾಸೆಯಲ್ಲೇ ಮುಳುಗಿದ್ದ ಸರಕಾರ ಮತ್ತು ಶಿಕ್ಷಣ ಸಂಸ್ಥೆಗಳು ಇದೀಗ ಮುಂದೇನು? ಎಂಬ ಬಗೆಗೆ ಗಂಭೀರವಾಗಿ ಯೋಚಿಸಲಾರಂಭಿಸಿವೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾನಿಲ ಯಗಳ ಧನ ಸಹಾಯ ಆಯೋಗ (ಯುಜಿಸಿ) ಮುಂದಿನ ಶೈಕ್ಷಣಿಕ ಋತುವಿನಿಂದ ಎಲ್ಲ ವಿಶ್ವವಿದ್ಯಾನಿಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆನ್‌ಲೈನ್ ಮತ್ತು ಆಫ್ಲೈನ್ ತರಗತಿಗಳನ್ನು ಒಳಗೊಂಡ ಸಮ್ಮಿಶ್ರ ಬೋಧನೆ ಮತ್ತು ಕಲಿಕಾ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಯುಜಿಸಿಯ ಸಮಿತಿಯೊಂದು ಈ ಸಂಬಂಧ ವಿಶ್ವವಿದ್ಯಾನಿಲಯಗಳ ಬೋಧನ ವ್ಯವಸ್ಥೆ, ಪರೀಕ್ಷಾ ಕ್ರಮಗಳ ಕುರಿತಂತೆ ಕೆಲವೊಂದು ಮಹತ್ತರವಾದ ಶಿಫಾರಸುಗಳನ್ನು ಮಾಡಿದೆ. ಈ ಸಮಿತಿ ಯುಜಿಸಿಯ ಮುಂದಿಟ್ಟಿರುವ ಕರಡು ವರದಿಯಲ್ಲಿ ಶೇ. 40ರಷ್ಟು ಆನ್‌ಲೈನ್‌ನಲ್ಲಿ ಮತ್ತು ಶೇ. 60ರಷ್ಟು ಆಫ್ಲೈನ್ ತರಗತಿಗಳನ್ನು ನಡೆಸುವ ಸಲಹೆ ನೀಡಿದೆ. ಇದರಂತೆ ವಿದ್ಯಾರ್ಥಿಗಳೇ ಶಿಕ್ಷಕರು ಮತ್ತು ತರಗತಿ ಸಮಯವನ್ನು ಆಯ್ದುಕೊಳ್ಳಬಹುದಾಗಿದೆಯಲ್ಲದೆ ತಮಗೆ ಬೇಕಾದ ಕೋರ್ಸ್‌ಗಳನ್ನೂ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನೂ ಹೊಂದಿರಲಿದ್ದಾರೆ.ಅಷ್ಟು ಮಾತ್ರ ವಲ್ಲದೆ ಆನ್‌ಲೈನ್ ಯಾ ಆಫ್ಲೈನ್ ತರಗತಿಯ ಆಯ್ಕೆಯ ಅವಕಾಶವೂ ವಿದ್ಯಾರ್ಥಿಗಳಿಗಿರಲಿದ್ದು ಬೇಡಿಕೆಗೆ ತಕ್ಕಂತೆ ಪರೀಕ್ಷೆಗಳು ನಡೆಯಲಿವೆ. ಸಮ್ಮಿಶ್ರ ಕಲಿಕೆಯಲ್ಲಿ ಆನ್‌ಲೈನ್ ಮತ್ತು ಆಫ್ಲೈನ್ ಪರೀಕ್ಷೆಗಳಿಗೂ ಒತ್ತು ನೀಡಲಾಗಿದ್ದು ಆನ್‌ಲೈನ್ ತರಗತಿಗಳಿಗೆ ಸಂಬಂಧಪಟ್ಟ ಸ್ವಯಂ ಕೋರ್ಸ್ ಗಳಿಗೆ ಆನ್‌ಲೈನ್ ಮೂಲಕವೇ ಪರೀಕ್ಷೆ ನಡೆಯಲಿದೆ. ಹೊಸ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನು ನೀಡುವು ದರಿಂದ ಅವರ ಜವಾಬ್ದಾರಿ ಶಿಕ್ಷಕರಿಗಿಂತಲೂ ಪ್ರಾಮುಖ್ಯ ವಾದುದಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಲಿದೆ ಎಂಬುದು ಸಮಿತಿಯ ಅಭಿಪ್ರಾಯ. ಸದ್ಯ ಸಮಿತಿಯ ಶಿಫಾರಸುಗಳನ್ನು ಯುಜಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಹೊಸ ಬೋಧನ ವ್ಯವಸ್ಥೆಯನ್ನು ಮುಂಬರುವ ಸಾಲಿನಿಂದಲೇ ಜಾರಿಗೆ ತರುವ ಇರಾದೆ ಯುಜಿಸಿಯದ್ದಾಗಿದೆ.
ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಬೋಧನ ಕ್ರಮ, ಕಲಿಕಾ ಮತ್ತು ಪರೀಕ್ಷೆ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ಮಾಡಲೇಬೇಕಿದೆ. ಇದು ಭಾವೀ ಪ್ರಜೆಗಳ ಶೈಕ್ಷಣಿಕ ಭವಿಷ್ಯದ ವಿಷಯವಾದ್ದರಿಂದ ಹೊಸ ಸಾಧ್ಯತೆಗಳತ್ತ ಸರಕಾರ, ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು ಮತ್ತು ಮಕ್ಕಳ ಹೆತ್ತವರು ತುಸು ಗಂಭೀರವಾಗಿ ಚಿಂತಿಸಬೇಕಿದೆ.